ಶಿವಮೊಗ್ಗ,ನ.07:
ಕೋಟೆ ಗಂಗೂರಿನಲ್ಲಿರುವ ಮಾನಸ ಇಂಟರ್ ನ್ಯಾಷನಲ್ ಐಸಿಎಸ್ಇ ಶಾಲೆಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಕ್ಕಳ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಶಾಲೆಯ ಆವರಣದಲ್ಲಿ ನ.9ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಯೋಜಿಸಲಾಗಿದೆ ಎಂದು ಶಾಲೆಯ ಪ್ರಾಂಶುಪಾಲರಾದ ಕೆ.ವಿ. ಸೌಮ್ಯಾ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸ್ಪರ್ಧೆ 6 ಹಂತದಲ್ಲಿ ನಡೆಯಲಿದ್ದು, ಎಲ್ಕೆಜಿಯಿಂದ 10ನೇ ತರಗತಿ ಮಕ್ಕಳು ಭಾಗವಹಿಸಬಹುದಾಗಿದೆ. ಎಲ್ಕೆಜಿ ಮತ್ತು ಯುಕೆಜಿಯವರಿಗೆ ಹಾಗೂ 1ರಿಂದ 2ನೇ ತರಗತಿ ಮಕ್ಕಳಿಗೆ ಚಿತ್ರಕ್ಕೆ ಬಣ್ಣ ತುಂಬುವ ಸ್ಪರ್ಧೆ, 3 ರಿಂದ 4ನೇ ತರಗತಿ ಕಲ್ಚರಲ್ ಗಾರ್ಡನ್, 5ರಿಂದ 6ನೇ ತರಗತಿ ಮಕ್ಕಳಿಗೆ ಭೂಮಿ ಉಳಿಸಿ, 7 ರಿಂದ 8 ಭಾರತೀಯ ಹಬ್ಬಗಳು ಹಾಗೂ 9ರಿಂದ 10ನೇ ತರಗತಿ ಮಕ್ಕಳಿಗೆ 2030ರಲ್ಲಿ ಭಾರತ ಥೀಮ್ ಕುರಿತು ಚಿತ್ರಕಲಾ ಸ್ಪರ್ಧೆ ನಡೆಯಲಿದೆ ಎಂದರು.
ಪ್ರವೇಶ ಶುಲ್ಕ 100 ರೂ. ಇದ್ದು, ಪ್ರತಿ ಹಂತಕ್ಕೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಿದ್ದು, ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ವಿವರಗಳಿಗೆ ಮೊ. 93531 43033 ಅಥವಾ 94812 65405ರಲ್ಲಿ ಸಂಪರ್ಕಿಸಬಹುದಾಗಿದೆ ಎಂದರು.
ನ. 22ರಂದು ಕುವೆಂಪು ರಂಗಮಂದಿರದಲ್ಲಿ ಶಾಲೆಯ ವಾರ್ಷಿಕೋತ್ಸವ ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ನಡೆಯಲಿದ್ದು, ವಾರ್ಷಿಕೋತ್ಸವದಲ್ಲಿ ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಅವರಿಗೆ ಮಾನಸ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾರಾ ಪ್ರಕಾಶ್, ಎಂ.ವಿ. ಸವಿತಾ, ನವೀನ್ ಸಾದಿಯಾ, ಕರಿಬಸಪ್ಪ ಬಿ. ಉಪಸ್ಥಿತರಿದ್ದರು.