ಶಿವಮೊಗ್ಗ,ನ.07: ಬೆಳಗಾವಿಯಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟಕ್ಕೆ ಶಾಶ್ವತ ಪರಿಹಾರ ನೀಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು ಎಂದು ರಾಜ್ಯ ಕೃಷಿ ಸಚಿವ ಎನ್. ಚಲುವರಾಸ್ವಾಮಿ ಹೇಳಿದರು.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಬ್ಬಿಗೆ ದರ ನಿಗದಿಪಡಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದು. ಎಫ್.ಆರ್.ಪಿ., ಎಂ.ಎಸ್.ಪಿ. ಇತ್ಯಾದಿಗಳನ್ನು ಕೇಂದ್ರ ಸರ್ಕಾರವೇ ಸರಿಯಾಗಿ ನಿಗದಿ ಮಾಡಿ ಕಬ್ಬು ಬೆಳೆಗಾರರ ಹಿತ ಕಾಯಬೇಕು ಎಂದರು.

ಕಳೆದ 2-3 ದಿನಗಳಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಕಬ್ಬು ಬೆಳೆಗಾರರ ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಭರವಸೆ ಇದೆ. ಈಗಾಗಲೇ ರಾಜ್ಯದ ರೈತರಿಗೆ ಸರ್ಕಾರ ಬೆಳೆಹಾನಿ ಮತ್ತ 8500 ಕೋಟಿ ರೂ. ಅಲ್ಲದೇ, ಬೇರೆ ಬೇರೆ ರೀತಿಯ ಪರಿಹಾರಗಳನ್ನು ನೀಡಿ ರೈತರ ಪರವಾಗಿ ನಿಂತಿದೆ ಎಂದರು.
ರಾಜ್ಯದಿಂದ ಬಿಜೆಪಿಯ 19 ಜನರನ್ನು ಲೋಕಸಭೆಗೆ ಜನರು ಆರಿಸಿ ಕಳಿಸಿದ್ದಾರೆ. ಅವರಲ್ಲಿ 5 ಜನ ಕೇಂದ್ರ ಮಂತ್ರಿಗಳಾಗಿದ್ದಾರೆ. ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಇವರು ರಾಜ್ಯದ ಕಬ್ಬು ಬೆಳೆಗಾರರ ಹಿತಕಾಯಲು ಕೇಂದ್ರ ಸರ್ಕಾರದ ಜೊತೆ ಮಾತನಾಡಬೇಕು. ನಾವು ಮಾಡಬೇಕಾಗಿದ್ದನ್ನು ಮಾಡಿದ್ದೇವೆ ಎಂದರು.

ಹಾಲಿ ಚಾಲ್ತಿಯಲ್ಲಿರುವ ರಾಜಕೀಯ ಕ್ರಾಂತಿಯ ಬಗ್ಗೆ, ಯಾವ ನವೆಂಬರ್ ಕ್ರಾಂತಿಯೂ ಇಲ್ಲ. ಯಾವ ರಾಜಕೀಯ ಬದಲಾವಣೆಯೂ ಇಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಬಲಿಷ್ಠವಾಗಿದ್ದಾರೆ. ಹೈಕಾಮಂಡ್ ನಿರ್ಧಾರವೇ ಅಂತಿಮ. ಹೈಕಮಾಂಡ್ ಆದೇಶವನ್ನು ಪಾಲಿಸಲಾಗುತ್ತದೆ. ಸಂಪುಟ ಪುನಾರಚನೆ ಬಗ್ಗೆಯೂ ಯಾವುದೇ ಚರ್ಚೆಯಾಗಿಲ್ಲ. ಈಗ ನಡೆಯುತ್ತಿರುವುದೆಲ್ಲ ಊಹಾಪೋಹದ ಚರ್ಚೆಗಳು ಎಂದರು.