ಶಿವಮೊಗ್ಗ,ನ.7: ಮತಗಳ್ಳತನದ ವಿರುದ್ಧ ಬೃಹತ್ ಹೋರಾಟದ ಜತೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಾಳೆಯಿಂದಲೇ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಮಂಜುನಾಥ್ ಭಂಡಾರಿ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಗಳ್ಳತನದಿಂದ ಹಿಡಿದ ಗದ್ದುಗೆಯನ್ನು ಬಿಡಿ ಎಂಬ ಘೋಷ ವಾಕ್ಯದ ಹಿನ್ನೆಲೆಯಲ್ಲಿ ಇದರ ವಿರುದ್ಧ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ರಾಷ್ಟ್ರಾದ್ಯಂತ ಹೋರಾಟ ಹಮ್ಮಿಕೊಂಡಿದ್ದಾರೆ. ನಾಳೆಗೆ ಈ ಹೋರಾಟಕ್ಕೆ ಒಂದು ವರ್ಷ ಪೂರೈಸುತ್ತದೆ. ಈ ಹಿನ್ನೆಲೆಯಲ್ಲಿ ಮತಗಳ್ಳತನ ವಿರುದ್ಧ ಮತ್ತಷ್ಟು ಹೋರಾಟ, ಅಭಿಯಾನವನ್ನು, ಸಹಿ ಸಂಗ್ರಹ ವಿಸ್ತರಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಈಗಾಗಲೇ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ. ಜಿಲ್ಲೆಯಲ್ಲಿ ಸುಮಾರು 1.25 ಲಕ್ಷ ಸಹಿಸಂಗ್ರಹವಾಗಿದ್ದು, ಇದು ನಾಳೆಗೆ 1.40 ಲಕ್ಷ ತಲುಪಲಿದೆ. ನಾಳೆ ಜಿಲ್ಲೆಯಲ್ಲಿ ಈ ಅಭಿಯಾನ ಮುಂದುವರೆಯಲಿದ್ದು, ನವೆಂಬರ್ 11ರಂದು ರಾಜ್ಯಾದ್ಯಂತ ಮುಂದುವರೆಯುತ್ತದೆ. ರಾಜ್ಯದಲ್ಲಿ ಈಗಾಗಲೇ 1 ಕೋಟಿಗೂ ಹೆಚ್ಚು ಸಹಿ ಸಂಗ್ರಹ ಆಗಿದೆ. ರಾಜ್ಯದಲ್ಲಿ 1,11,11,111 ಸಹಿ ಸಂಗ್ರಹ ಆಗುವ ನಿರೀಕ್ಷೆ ಇದೆ. ಈ ಎಲ್ಲಾ ಸಹಿ ಸಂಗ್ರಹದ ವಿವರಗಳನ್ನು ರಾಷ್ಟ್ರಪತಿಗಳಿಗೆ ನೀಡಿ ಮತಗಳ್ಳತನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಗುವುದು ಎಂದರು.

ಇಡೀ ದೇಶದಲ್ಲಿ ಮತಗಳ್ಳತನ ಮೂಲಕ ಪ್ರಜಾಪ್ರಭುತ್ವವೇ ಕಗ್ಗೊಲೆಯಾಗುತ್ತಿದೆ. ನಮ್ಮ ಮತವನ್ನು ನಾವೇ ಕಳೆದುಕೊಳ್ಳುವಂತಹ ಸ್ಥಿತಿ ಬಂದಿದೆ. ಹರಿಯಾಣ, ಮಹಾರಾಷ್ಟ್ರ, ಕರ್ನಾಟಕದಲ್ಲೂ ಮತಗಳ್ಳತನ ಆಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ನಾವು ದೂರು ಕೊಡಬೇಕು. ಆದರೆ, ಚುನಾವಣಾ ಆಯೋಗವೇ ಕೇಂದ್ರದ ಜತೆ ಶಾಮೀಲಾಗಿದೆ. ಕಳ್ಳನ ಕೈಗೆ ಬೀಗ ಕೊಟ್ಟಂತಾಗಿದೆ. ಹಾಗಾಗಿ ಕಾನೂನಿನ ಮೊರೆ ಹೋಗಲಾಗುವುದು ಎಂದರು.
ವ್ಯವಸ್ಥಿತವಾಗಿ ಮತಗಳನ್ನು ಡಿಲಿಟ್ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಟ್ಟುಕೊಂಡೇ ಈ ಕೆಲಸ ಮಾಡಲಾಗುತ್ತಿದೆ. ಅನೇಕ ಕಡೆ ಕಾಂಗ್ರೆಸಿಗರ ಮತ ಡಿಲಿಟ್ ಆಗಿರುವುದು ಕಂಡು ಬಂದಿದೆ. ಬೂತ್ ಮಟ್ಟದಿಂದ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಈ ಬಗ್ಗೆ ಜಾಗೃತರಾಗಬೇಕು. ಈ ಹಿನ್ನಲೆಯಲ್ಲಿ ಯುವಕರ ಗಮನಸೆಳೆಯಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಚುನಾವಣಾ ಆಯೋಗಕ್ಕೆ ಸುಧಾರಣೆ ತರಬೇಕೆನ್ನುವುದು ಕೂಡ ನಮ್ಮ ಉದ್ದೇಶವಾಗಿದೆ ಎಂದರು.
ಮಾಜಿ ಸ್ಪೀಕರ್ ಕಾಗೇರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಬ್ರಿಟೀಷರ ಸ್ವಾಗತಕ್ಕೆ ಜನಗಣಮನ ರಾಷ್ಟ್ರಗೀತೆ ಬರೆಯಲಾಗಿತ್ತು ಎಂಬ ಕಾಗೇರಿ ಹೇಳಿಕೆ ಸರಿಯಲ್ಲ. ಬಿಜೆಪಿಯವರು ರಾಷ್ಟ್ರಗೀತೆ,. ರಾಷ್ಟ್ರಧ್ವಜ ಏನನ್ನೂ ಒಪ್ಪುವುದಿಲ್ಲ. ನ್ಯಾಯಮೂರ್ತಿಗಳ ಮೇಲೆಯೇ ಶೂ ಎಸೆಯುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್, ಪ್ರಮುಖರಾದ ಎಸ್.ಟಿ. ಹಾಲಪ್ಪ, ದೇವಿಕುಮಾರ್, ಚಿಮಣೂರು ಲಕ್ಷ್ಮೀಕಾಂತ್ ಇದ್ದರು.