ಶಿವಮೊಗ್ಗ : 2025-26ನೇ ಸಾಲಿನ ಶೈಕ್ಷಣಿಕ ಅವಧಿಯಲ್ಲಿ ಅತಿಥಿ ಉಪನ್ಯಾಸಕರ ಸೇವೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ, ಡಿ.ಸಿ. ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.

ಕಾಲೇಜು ಶಿಕ್ಷಣ ಇಲಾಖೆ 2000 ಇಸವಿಯಿಂದ ನಮ್ಮಗಳ ಸೇವೆಯನ್ನು ಬಳಸಿಕೊಂಡು ಬಂದಿದೆ. ಪ್ರಸಕ್ತ 2025ನೇ ಸಾಲಿನ ಸೆಮಿಸ್ಟಾರ್ ಅವಧಿಗೆ ಮಾತ್ರ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಲು ಆದೇಶ ಹೊರಡಿಸಿರುವುದು ಸರಿಯಾದ ತೀರ್ಮಾನವಲ್ಲ, ನಾವು ಕಳೆದ 20 ವರ್ಷಗಳಿಂದ ಸೇವೆ ಮಾಡುತ್ತಾ ಬಂದಿದ್ದೇವೆ. ಸಾವಿರಾರು ಅತಿಥಿ ಉಪನ್ಯಾಸಕರು ಬೋಧನಾ ಕೌಶಲ್ಯದೊಂದಿಗೆ ಪಾಠ ಮಾಡುತ್ತಾ ಬಂದಿದ್ದಾರೆ. ಈಗ ಯುಜಿಸಿ 2018ರ ನಿಯಮಗಳು ಪೂರ್ವಾನ್ವಯಗೊಳಿಸುವುದು ನ್ಯಾಯದೊರಕಿಸಿದಂತೆ ಆಗುವುದಿಲ್ಲ. ಒಬ್ಬರ ಹಕ್ಕು ದೊರಕಿಸಲು ಇನ್ನೊಬ್ಬರು ಬದುಕುವ ಹಕ್ಕನ್ನು ಕಿತ್ತುಕೊಳ್ಳುವುದು ನ್ಯಾಯವಲ್ಲ ಇದರಿಂದ ರಾಜ್ಯದಲ್ಲಿ ಸುಮಾರು 6000 ಇಂತಹ ಅತಿಥಿ ಉಪನ್ಯಾಸಕರಿದ್ದು, ಅವರಲ್ಲಿ 3000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು 10 ವರ್ಷಗಳಿಗೂ ಹೆಚ್ಚಿನ ಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ ಹೊಸ ನಿಯಮಾವಳಿಯಿಂದ ಇವರೆಲ್ಲರೂ ಬೀದಿಪಾಲಾಗುತ್ತಿದ್ದಾರೆ ಎಂದು ಮನವಿದಾರರು ತಿಳಿಸಿದರು.

2025-26ನೇ ಸಾಲಿನ ಶೈಕ್ಷಣಿಕ ಅವಧಿಗೆ ಅತಿಥಿ ಉಪನ್ಯಾಸಕರನ್ನು ಬೇಷರತ್ತಾಗಿ ಸೇವೆಯಲ್ಲಿ ಮುಂದುವರಿಸಬೇಕು, ಅತಿಥಿ ಉಪನ್ಯಾಸಕರ ಉದ್ಯೋಗದ ಹಕ್ಕು ಸಂರಕ್ಷಣೆಗಾಗಿ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಬೇಕು. ಯುಜಿಸಿ 2018ರ ನಿಯಮಾವಳಿಯನ್ನು 2018ರ ಪೂರ್ವದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದವರಿಗೆ ಅನ್ವಯವಾಗದಂತೆ ಯಥಾಸ್ಥಿತಿಯಲ್ಲಿ ಅವರನ್ನೇ ಸೇವೆಯಲ್ಲಿ ಮುಂದುವರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ರಾಜ್ಯ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಡಾ.ಸೋಮಶೇಖರ್ ಹೆಚ್. ಶಿಮೊಗ್ಗಿ, ಪ್ರಮುಖರಾದ ದಿವಾಕರ್ ಕೆ.ಆರ್., ರಾಜೇಶ್ಕುಮಾರ್, ನಾಗರಾಜು, ದೀಪಾ, ಡಾ.ರವೀಂದ್ರ ಸೇರಿದಂತೆ ಹಲವರಿದ್ದರು. ಈ ಪ್ರತಿಭಟನೆಗೆ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಟಿ. ಹಾಲೇಶಪ್ಪ, ಶಿವಕುಮಾರ್ ಗಸ್ತಿ ಬೆಂಬಲ ನೀಡಿದರು.