ಸಾಗರ : ತಾಲ್ಲೂಕು ಕಚೇರಿಯಲ್ಲಿ ಜನರ ಕೆಲಸ ಆಗುತ್ತಿಲ್ಲ. ಸಾರ್ವಜನಿಕರಿಗೆ ನಾಳೆ ಬಾ ಎಂದು ಕಳಿಸುತ್ತಿದ್ದೀರಿ. ಎಲ್ಲ ಟೇಬಲ್ ಮುಂದೆ ನಾಳೆ ಬಾ ಎಂದು ಬೋರ್ಡ್ ಹಾಕಿ ಬಿಡಿ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಖಾರವಾಗಿ ಹೇಳಿದರು.
ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕಂದಾಯ, ನಗರಸಭೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ತಾಲ್ಲೂಕು ಕಚೇರಿಯಲ್ಲೆ ಕೆಲಸ ಸರಿಯಾಗಿ ನಡೆಯುತ್ತಿಲ್ಲ ಎಂದರೆ ಇತರೆ ಇಲಾಖೆಗಳಲ್ಲೂ ಇದೇ ಸ್ಥಿತಿಯಾಗಿರುತ್ತದೆ ಎಂದರು.

ಸಾರ್ವಜನಿಕರ ಕೆಲಸಕ್ಕೆ ಲಂಚ ಪಡೆಯಲಾಗುತ್ತಿದೆ ಎಂಬ ದೂರು ಇದೆ. ಆಧಾರ್, ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣ ಪತ್ರ ಸೇರಿ ಯಾವುದೂ ನಿಗಧಿತ ಸಮಯಕ್ಕೆ ಸಿಗುತ್ತಿಲ್ಲ. ಗ್ರಾಮ ಲೆಕ್ಕಿಗರು ಫೋನ್ ಎತ್ತುತ್ತಿಲ್ಲ. ಸಾರ್ವಜನಿಕರ ಕೆಲಸ ಮಾಡಲು ನಿಮ್ಮ ಕೈನಲ್ಲಿ ಆಗದೆ ಹೋದರೆ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ, ಇಲ್ಲವಾದರೆ ನಾನೆ ಸಸ್ಪೆಂಡ್ ಮಾಡಲು ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆಯುತ್ತೇನೆ. ಯಾವುದೇ ಕಾರಣಕ್ಕು ಕರ್ತವ್ಯಲೋಪ ಸಹಿಸಿಕೊಳ್ಳುವುದಿಲ್ಲ. ಮುಂದೆ ಇಂತಹ ವಿಳಂಬ ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ತಹಶೀಲ್ದಾರ್ಗೆ ಸೂಚನೆ ನೀಡಿದರು.
ಸಾಗರಕ್ಕೆ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಹೊಂಡಗುಂಡಿಯಿಂದ ತುಂಬಿದ್ದು ಊರಿನ ಮರ್ಯಾದೆ ಹೋಗುತ್ತಿದೆ. ಹೆದ್ದಾರಿ ಪ್ರಾಧಿಕಾರ ತಕ್ಷಣ ಗುಂಡಿ ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದ ಶಾಸಕರು, ಉಳ್ಳೂರು ಸೇರಿದಂತೆ ಬೇರೆಬೇರೆ ಭಾಗದಲ್ಲಿ ಮುರಾರ್ಜಿ ವಸತಿ ಶಾಲೆಗೆ ೫೪ ಕೋಟಿ ರೂ. ಮಂಜೂರಾಗಿದೆ. ಅದಕ್ಕೆ ಸೂಕ್ತ ಜಾಗ ಹುಡುಕಿ. ನಾಗವಳ್ಳಿಯಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ೫೦ ಲಕ್ಷ ಮಂಜೂರಾಗಿದ್ದು ಸ್ಥಳ ಗುರುತಿಸಿ, ಒಳಚರಂಡಿ ಕಾಮಗಾರಿಗೆ ೨೦ ಕೋಟಿ ರೂ. ಮಂಜೂರಾಗಿದೆ. ನಗರಸಭೆ ಕಾಮಗಾರಿ ತ್ವರಿತಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಜೊತೆ ಸಮನ್ವಯತೆ ಸಾಧಿಸಲು ಸೂಚನೆ ನೀಡಿದರು.

ದೀಪಾವಳಿ ನಂತರ ಮಾರ್ಕೇಟ್ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ಸಿಗಲಿದೆ. ದೀಪಾವಳಿ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಚ್ಚತೆಗೆ ಒತ್ತು ನೀಡಬೇಕು. ಬಗರ್ಹುಕುಂ, ೯೪ಸಿ ಮತ್ತು ೯೪ಸಿಸಿ ಅಡಿ ಅರ್ಹರಿಗೆ ಹಕ್ಕುಪತ್ರ ನೀಡಲು ಅಗತ್ಯ ಸಿದ್ದತೆ ನಡೆಸಲು ತಿಳಿಸಿದ ಅವರು ಶ್ರೀಗಂಧ ಸಂಕೀರ್ಣದಲ್ಲಿ ಗುರುಕುಲ ಅಭಿವೃದ್ದಿ ಸೇರಿ ವಿವಿಧ ಕಾಮಗಾರಿಗೆ ೬೮ ಲಕ್ಷ ರೂ. ಮಂಜೂರಾಗಿದೆ ಎಂದರು.

ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ತಹಶೀಲ್ದಾರ್ ರಶ್ಮಿ, ಪೌರಾಯುಕ್ತ ನಾಗಪ್ಪ, ಕಾರ್ಯನಿರ್ವಾಹಣಾಧಿಕಾರಿ ಶಿವಪ್ರಕಾಶ್, ರಮೇಶ್ ಟಿ.ಪಿ., ಕೆ.ಹೊಳೆಯಪ್ಪ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು