ಬದುಕಿಷ್ಟೇ ಎಂದು ಕಲಿಸಿದ ಗೌತಮಬುದ್ದ
ಲೋಕ ಪರಿತ್ಯಾಗಿಯಾಗಿದ್ದ ಬುದ್ಧನ ಬಳಿಗೆ ಜೀವನದಲ್ಲಿ ವೈರಾಗ್ಯಗೊಂಡ ರಾಜ ಮಹಾರಾಜರು ಬರುತ್ತಿದ್ದರಂತೆ. ಈ ಸಂದರ್ಭ ಭಿಕ್ಷುಗಳಾಗಿ ಬಂದಂತಹ ಅವರನ್ನು ಬುದ್ಧನು ಸ್ಮಶಾನಕ್ಕೆ ಕಳುಹಿಸುತ್ತಿದ್ದನಂತೆ. ಅಲ್ಲಿಗೆ ಹೋದ ಭಿಕ್ಷುಗಳು ಹೆಣಸುಡುವವರನ್ನು ನೋಡುತ್ತಿದ್ದಂತೆ. ಹೀಗೆ ಅದನ್ನು ನೋಡುತ್ತಾ, ನೋಡುತ್ತಾ ಅವರಲ್ಲಿ ಬದುಕೆಂದರೆ ಇಷ್ಟೆನಾ? ಎಂಬ ಅರಿವು ಮೂಡುತ್ತಿತ್ತಂತೆ.

ಬದುಕಿಗಾಗಿ ಬಡಿದಾಟ, ಇರಲೇಬೇಕೆಂಬ ತುಡಿತ, ಹೋದ ಮೇಲೆ ಎರಡುದಿನದ ನೆನಪಷ್ಟೇ…!
ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 60
ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ಜನನ ಉಚಿತ, ಸಾವು ಖಚಿತ ಎಂಬ ವಾಕ್ಯವನ್ನು ನಾವು ಪದೇ ಪದೇ ಕೇಳುತ್ತಿದ್ದೇವೆ. ಅದನ್ನು ನಿಜ ಜೀವನದಲ್ಲಿ ನೋಡಿದ್ದೇವೆ. ಮನುಷ್ಯ ಅಷ್ಟೇ ಅಲ್ಲ ಈ ಜಗ ಜಂಗುಲದ ಎಲ್ಲಾ ಪ್ರಾಣಿ ಪಕ್ಷಿಗಳು ಜನಿಸುವ ನಂತರ ಸಾವನ್ನು ಖಚಿತವಾಗಿ ಕಟ್ಟಿಕೊಂಡು ಬರುತ್ತವೆ. ಹಾಗೆಯೇ ಸಾವು ಇದೆ ಎಂದು ಗೊತ್ತಿದ್ದರೂ ಬದುಕಿಗಾಗಿ ಇನ್ನಷ್ಟು ದಿನ ಇರುವ ಹಂಬಲಕ್ಕಾಗಿ ಸಾಕಷ್ಟು ತುಡಿತವನ್ನು ಪರದಾಟವನ್ನು ಮನುಷ್ಯನೆಂಬ ಪ್ರಾಣಿ ಮಾಡುತ್ತಾನೆ ಅಲ್ಲವೇ? ಬದುಕುವ ಭ್ರಮೆಗಾಗಿ ಇಂದಿನ ಕುಶಿ ಕಳೆದುಕೊಳ್ಳಬೇಕಾ ಎಂಬುದೇ ಈ ವಾರದ ನೆಗಿಟೀವ್ ಥಿಂಕಿಂಗ್ ಅಂಕಣದ ವಿಷಯ.

ನಾಳಿನ ಬದುಕೆಂಬ ಭ್ರಮೆಗಾಗಿ ಇಂದಿನ ಈ ಕ್ಷಣದ ಖುಷಿಗಳನ್ನು, ಸಂತಸಗಳನ್ನು ಕಳೆದುಕೊಳ್ಳಬೇಕೆ? ಬದುಕು ಅಷ್ಟೊಂದು ಮುಖ್ಯವೇ ಎಂಬ ಪ್ರಶ್ನೆ ಮನದ ಒಂದು ಮೂಲೆಯಲ್ಲಿ ಎಲ್ಲರಲ್ಲೂ ಕಾಡುವುದು ಸಹಜವಲ್ಲವೇ? ಏನೇ ಸಾಧನೆ ಮಾಡಿ, ಎಷ್ಟೇ ಮಾಡಿರಲಿ ನೆಪ ಮಾತ್ರದ ನಮ್ಮ ಬದುಕನ್ನು ಅಷ್ಟೇ ಬೇಗ ಮರೆತು ಬಿಡುವ ನಮ್ಮದೇ ಸಮಾಜವನ್ನು ನಾವು ಕಣ್ಣಾರೆ ಕಂಡಿದ್ದೇವೆ. ನಾವು ಅದೇ ಕೆಲಸ ಮಾಡುತ್ತಿದ್ದೇವೆ ಅಲ್ಲವೇ?

ಬೆರಳೆಣಿಕೆಯ ಕೆಲವರು ಮಾಡಿದ ಸಾಧನೆಗಳು ಅಲ್ಲಲ್ಲಿ ಉಳಿದುಕೊಳ್ಳಬಹುದು.ಆದರೆ ಒಟ್ಟಾರೆಯಾಗಿ ಈ ಜಗದ ಮನುಷ್ಯನೆಂಬ ಪ್ರಾಣಿಯ ಲೆಕ್ಕಾಚಾರದಲ್ಲಿ ಅತ್ಯಂತ ಕಡಿಮೆ ಪ್ರಮಾಣ ಅಂದರೆ ಶೂನ್ಯದ ಸಮೀಪದ ಒಂದನ್ನು ಮೀರದ ಜನ ನಮ್ಮ ನಡುವೆ ಗುರುತಿಸಿಕೊಳ್ಳುವ ಕೆಲಸ ಮಾಡಿರಬಹುದು. ಅವರನ್ನು ಹೊರತುಪಡಿಸಿ ಉಳಿದ ಶೇಕಡಾ 99.99 ರಷ್ಟು ಜನರ ಬದುಕಿನ ಹೊಡೆದಾಟ, ಅದರ ನಡುವಿನ ನಮ್ಮಗಳ ತೋಳಲಾಟ ಎಷ್ಟೊಂದು ಗಂಭೀರವೆನಿಸುತ್ತದೆ. ಅದರ ಬಗ್ಗೆ ನಾವು ಯೋಚಿಸುವ ಕಿಂಚಿತ್ತೂ ಕಳಕಳಿಯನ್ನು ತೋರದಿರುವುದು ನಮ್ಮ ನಡುವಿರುವ ನಿಜವಾದ ದುರಂತವೇ ಹೌದು ಎಂಬುದನ್ನು ಸಹಜವಾಗಿ ಎಲ್ಲರೂ ಒಪ್ಪಿಕೊಳ್ಳುತ್ತಾರೆ.








ಈ ಬದುಕು ಎಂಬುದೇ ಒಂದು ಭ್ರಮೆ ಹೀಗಾಗಬೇಕು, ಆಗಿರಬೇಕು ಇನ್ನಷ್ಟು ಕೂಡಿಡಬೇಕು, ಆಸ್ತಿ ಮಾಡಬೇಕು ನಮ್ಮ ಮರಿ ಮಕ್ಕಳು ಬಂದರೂ ಸಹ ಅವರಿಗೆ ಕೊರತೆ ಆಗಬಾರದು ಎಂಬ ಸ್ವಯಂ ನಿರ್ಧಾರದ ನಿಲುವುಗಳು, ನಮ್ಮ ನಮ್ಮ ವ್ಯಕ್ತಿಗತ ಮನಸ್ಸುಗಳಿಗೆ ನಾಟಿದಾಗ ನಾವೇನು ಸತ್ತಾಗ ಹೊತ್ತುಕೊಂಡು ಹೋಗುತ್ತೇವಾ? ಹಾಗೆನಾದರೂ ಸತ್ತಾಗ ಹೊತ್ತುಕೊಂಡು ಹೋಗುವುದಾಗಿದ್ದರೆ ಇನ್ನಷ್ಟು ಮೋಸ, ವಂಚನೆ ಮನಸುಗಳು ಹೆಚ್ಚಾಗುತ್ತಿದ್ದವೇನೋ, ಇನ್ನಷ್ಟು ಕಪಟತನದ ಕಾಯಕಗಳು ಹೆಚ್ಚಿ ನಮ್ಮ ನಡುವೆ ಇಡೀ ಸಮಾಜವನ್ನು ಅವ್ಯವಸ್ಥೆಯ ಗೂಡನ್ನಾಗಿ ಮಾಡಿಬಿಡುತ್ತಿದ್ದವೇನೋ ಎನಿಸುತ್ತದೆ ಅಲ್ಲವೇ?
ಇಲ್ಲಿ ಅತ್ಯಂತ ವಿಶೇಷವಾಗಿ ಸಾವು ಖಚಿತ ಎಂಬುದು ಗೊತ್ತಿದ್ದು, ಅದನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸುವ ಮನೋಭಾವ ಎಲ್ಲಾದರೂ ಕಂಡು ಬರುತ್ತದೆಯೇ? ಜೊತೆಗಿದ್ದವರು ಎಲ್ಲಿಯ ತನಕ ನಮ್ಮ ಜೊತೆ ನಮ್ಮನ್ನು ಕೂಡಿಕೊಳ್ಳುತ್ತಾರೆ, ಪ್ರೀತಿಸುತ್ತಾರೆ, ಗೌರವಿಸುತ್ತಾರೆ, ಬೆರೆಯುತ್ತಾರೆ ಎಂಬುದು ನಮ್ಮ 110ನೇ ಪ್ರಶ್ನೆ. ಈ ಸಂದರ್ಭದಲ್ಲಿ ನೆನಪಾಗುವ ಜಾನಪದ ಗೀತೆಯನ್ನು ನಿಮ್ಮ ಮುಂದೆ ಇಡುವಂತಹ ಚಿಕ್ಕದೊಂದು ಪ್ರಯತ್ನ.
ಯಾಕೆ ಬಡಿದಾಡ್ತಿ ತಮ್ಮ ಮಾಯಾ ಮೆಚ್ಚಿ, ಸಂಸಾರ ನೆಚ್ಚಿ.
ನೀ ಹೋಗೊದರಿಯೇ ತಮ್ಮ ಕಣ್ಣ ಮುಚ್ಚಿ, ಮಣ್ಣ ಮುಚ್ಚಿ.
ಹೆಂಡ್ರು ಮಕ್ಳಿರುವರು ತಮ್ಮ ಎಲ್ಲಿ ತನಕ?
ಇದ್ರೆ ತಿಂಬೋ ತನಕ.
ಸತ್ತಾಗ ಬರುವರು ತಮ್ಮ ಗುಳಿ ತನಕ,
ಮಣ್ಣು ಮುಚ್ಚೋ ತನಕ, ಮಣ್ಣು ಮುಚ್ಚೋ ತನಕ.
ಅಣ್ಣ ತಮ್ಮ ಅಕ್ಕ ತಂಗಿ ಎಲ್ಲೀ ತನಕ?
ಬದುಕೀ ಬೆಳೆಯೋ ತನಕ.
ಸತ್ತಾಗ ಬರುವರು ತಮ್ಮ ಗುಳಿ ತನಕ,
ಮಣ್ಣು ಮುಚ್ಚೋ ತನಕ.
ಹೆಣ್ಣು ಹೊನ್ನು ಮಣ್ಣು ನಿನ್ನದು ಎಲ್ಲೀ ತನಕ?
ಕೊರಳಿಗೆ ಕುಣಿಕೆ ಬೀಳೋ ತನಕ,
ನಿನ್ನಾಸೆ ಪ್ರಾಣಪಕ್ಷಿ ಹಾರೋತನಕ.
ಕಳಚಯ್ಯ ಮಾಯದ ಪೊರೆಯ ಮುಕ್ತಿ ಹೊಂದಾಕ..,
ಈ ಜೀವನದ ಬಗ್ಗೆ ಎಷ್ಟೊಂದು ಆಸೆ ನಮಗೆ, ಎಷ್ಟೊಂದು ಬಡಿದಾಡುತ್ತೇವೆ ಬದುಕಿಗಾಗಿ ಬಡಿದಾಟ ಅನಿವಾರ್ಯವೇ ಎಂದು ನೋವಿನ ಪದಗಳು ಇದರಲ್ಲಿ ವ್ಯಕ್ತವಾಗಿದೆಯಲ್ಲವೇ? ಮಾಯದ ಪೊರೆಯನ್ನು ಕಳಚುವ ಮನೋಸ್ಥಿತಿಯನ್ನು ನಮ್ಮ ನಡುವೆ ಬೆಳೆಸಿಕೊಳ್ಳಬೇಕಿರುವುದು ನಿಜಕ್ಕೂ ಆಗಬೇಕಿದೆ.

ಇಂದಿನ ದಿನಮಾನಗಳಲ್ಲಿ ನಮ್ಮ ನಡುವೆ ಶಿಕ್ಷಣ ವ್ಯವಸ್ಥೆ ಅತ್ಯಂತ ವೇಗವಾಗಿ ಹೊಸ ವೇಷದಲ್ಲಿ ಕಾಣಿಸಿಕೊಳ್ಳುತ್ತಿದೆ. ಹಾಗೆಯೇ ನಗರ ಪ್ರದೇಶಗಳಲ್ಲಂತೂ ಎಲ್ಲಿ ನೋಡಿದರೂ ಅಲ್ಲಿ ಒಂದೊಂದು ಹೊಸ ಬಗೆಯ ಆಸ್ಪತ್ರೆಗಳು, ಅಂಗಾಂಗಗಳ ಪರೀಕ್ಷೆಗಳನ್ನು ಮಾಡುವ ಪ್ರತ್ಯೇಕ ವಿಭಾಗಗಳನ್ನು ಕಾಣುತ್ತಿದ್ದೇವೆ. ಹಿಂದಿನ ದಿನಮಾನಗಳಲ್ಲಿ ಕೆಲವೇ ಕೆಲವು ಸೀಮಿತವಾಗಿದ್ದ ಆಸ್ಪತ್ರೆಗಳ ಸಂಖ್ಯೆ ಈಗ 100 ಪಟ್ಟು ಹೆಚ್ಚಾಗಿದೆ.
ಹಿಂದಿನ ದಿನಮಾನಗಳಲ್ಲಿ ರೋಗಗಳಿಲ್ಲವೇ ರೋಗಗಳು ಇರಲಿಲ್ಲವೇ ಅಂದಿನ ವಾಸ್ತವತೆ ಹಾಗೂ ಇಂದಿನ ಚಿತ್ರಣಕ್ಕೂ ಬದಲಾವಣೆಗಳು ನಿಜಕ್ಕೂ ಆಗಿರಬಹುದು ಆದರೆ ಬದುಕುವ ಆಸೆಗೆ ಜನ ಮರುಳಾಗಿರುವುದು, ಈ ಆಸ್ಪತ್ರೆಗಳ ಹೆಚ್ಚಳಕ್ಕೆ ಕಾರಣ ಎಂಬ ಮಾತನ್ನು ನಮ್ಮ ಓದುಗರೊಬ್ಬರು ತಿಳಿಸಿದ್ದಾರೆ.
ಅಂತೆಯೇ ಇನ್ನೊಂದು ಮಾತು ಈ ಬಾಳಿನಲ್ಲಿ ನಮಗೆ ಮಿತಿಗಳೆ ಇಲ್ಲ, ಎಷ್ಟು ದುಡಿದರೂ, ಎಷ್ಟೇ ಇದ್ದರೂ ಏನೂ ಇಲ್ಲದಂತಹ ನಾಟಕದಲ್ಲಿ ಬದುಕುವವರನ್ನು ನಾವು ಕಾಣುತ್ತಿದ್ದೇವೆ. ಕೆಲವೊಮ್ಮೆ ನಾವೂ ಆಗಿದ್ದೇವೆ ಎನಿಸುತ್ತದೆ ಅಲ್ಲವೇ?
ಇದಕ್ಕೊಂದು ಪುಟ್ಟ ಸಾಲು ಕನ್ನಡ ಚಲನಚಿತ್ರದ ಗೀತೆಯೊಂದರಲ್ಲಿದೆ. ಅದನ್ನು ಗಮನಿಸಿ.
ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ,
ಏಕೇ ಕನಸು ಕಾಣುವೆ, ನಿಧಾನಿಸು, ನಿಧಾನಿಸು
ಆಸೆಯಂಬ ಬಿಸಿಲುಕುದುರೆ ಏಕೆ ಏರುವೆ,
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ,
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು,
ನಾವು ನೆನಸಿದಂತೆ ಬಾಳಲೇನು ನೆಡೆಯದು
ವಿಷಾದವಾಗಲಿ ವಿನೋದವಾಗಲಿ,
ಅದೇನೆ ಆಗಲಿ ಅವನೆ ಕಾರಣ..,
ಇಲ್ಲಿ ನಾವು ಅಂದುಕೊಳ್ಳುವುದೇನೋ ನಡೆಯುವುದಿಲ್ಲ, ನಡೆಸುವ ಪರಮಾತ್ಮ ಮೇಲಿದ್ದಾನೆ. ಅದಕ್ಕೆ ಅವನೇ ಕಾರಣ ಎನ್ನುವ ಸಾಲು ಅರ್ಥಗರ್ಭಿತ ಅಲ್ಲವೇ?
ಸಾವು ಖಚಿತ ಅದಕ್ಕಾಗಿ ಇಂದಿನ ಕುಸಿಗಳನ್ನು ಕಳೆದುಕೊಳ್ಳದಿರಿ ಎಂಬುದಷ್ಟೇ ಇಂದಿನ ಮಾತು.