ಶಿವಮೊಗ್ಗ: ಸುಮಾರು 150 ವರ್ಷಗಳಷ್ಟು ಹಳೆಯದಾಗಿರುವ ತುಂಗಾ ಸೇತುವೆ ಶಿಥಿಲವಾಗಿದ್ದು, ಹೊಸ ಸೇತುವೆ ನಿರ್ಮಾಣಕ್ಕಾಗಿ 40 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಇದಕ್ಕಾಗಿ ಸಹಕರಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ವಿಶೇಷ ಅಭಿನಂದನೆಗಳು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರಲ್ಲಿ ಶಿವಮೊಗ್ಗದಲ್ಲಿ ತುಂಬಾ ಮಳೆ ಬಂದು, ಅನೇಕ ಸಮಸ್ಯೆ ಎದುರಿಸಿದ್ದೆವು. ಆಗ ತುಂಗಾ ನದಿ ಹಳೆ ಸೇತುವೆ ಬಿರುಕು ಬಿಡ್ತಾ ಇದೆ ಎಂಬ ಆತಂಕ. ಅಲ್ಲಿ ಭಾರೀ ವಾಹನ ಬಿಡಬಾರದು ಎಂದು ಅವತ್ತೇ ನಿರ್ಧಾರ ಆಗಿತ್ತು. ಅವತ್ತಿನಿಂದಲೇ ವಿಶೇಷವಾದ ಪ್ರಯತ್ನ ಮಾಡಿದ ಪರಿಣಾಮ ನಾಗರೀಕರಿಗೆ ಹೊಸ ಸೇತುವೆಯ ನಿರೀಕ್ಷೆ ಸಫಲವಾಗುವ ಸನಿಹಕ್ಕೆ ಬಂದು ನಿಂತಿದೆ ಎಂದರು.

ಬಹಳ ಮುಖ್ಯವಾಗಿ ಶಿವಮೊಗ್ಗಕ್ಕೆ ಹೊಸ ಸೇತುವೆ ನಿರ್ಮಾಣಕ್ಕೆ ಈಗಿನ ಮತ್ತು ಆಗಿನ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರೇ ಕಾರಣ. ಅವರು ವಿಶೇಷ ಆಸಕ್ತಿ ವಹಿಸಿದರು. ಸುಮಾರು 6 ಬಾರಿ ಅವರನ್ನು ಭೇಟಿ ಮಾಡಿದೆ. ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೆ. ಪರಿಣಾಮ, 40 ಕೋಟಿ ಬಿಡುಗಡೆ ಆಗಿದೆ ಎಂದರು.

ಸತೀಶ್ ಜಾರಕಿಹೊಳಿ ಅವರು ಶಿವಮೊಗ್ಗಕ್ಕೆ ಬಂದ ಸಂದರ್ಭದಲ್ಲಿ ಅವರು ಒಂದು ಮಾತು ಹೇಳಿದ್ದರು. ನಿತಿನ್ ಗಡ್ಕರಿ ಅವರು ಬಂದಿದ್ದ ವೇಳೆ ಭರವಸೆ ನೀಡಿದ್ದರು. ಅದು ಈಗ ಈಡೇರಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗದ ನಾಗರೀಕರ ಪರವಾಗಿ ಅಭಿನಂದನೆ ತಿಳಿಸುತ್ತೇನೆ ಎಂದರು.
ಯಾವುದೇ ಸರ್ಕಾರ ಇದ್ದರೂ ಕೂಡ ನಾವು ಆ ಸರ್ಕಾರದ ಜೊತೆ ಸ್ಪಂದನೆ ನಡೆಸಿದಾಗ ಮತ್ತು ಸರ್ಕಾರದ ಸಚಿವರಿಗೆ ಇಚ್ಛಾಶಕ್ತಿ ಇದ್ದಾಗ ಈ ರೀತಿಯ ಒಳ್ಳೆಯ ಕೆಲಸಗಳು ಆಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಅವರು ಶಿವಮೊಗ್ಗದ ಬಗ್ಗೆ ಅಭಿಮಾನ ಇಟ್ಟುಕೊಂಡು ನನ್ನ ಸ್ಪಂದನೆಗೆ ಸ್ಪಂದಿಸಿದ್ದಾರೆ. ಇನ್ನು 3 ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು. ಉಳಿದಂತೆ ಈಗಿರುವ ಹಳೆ ಸೇತುವೆಯನ್ನು ಸಂಪೂರ್ಣವಾಗಿ ಕೆಡವಿ ಹೊಸ ಸೇತುವೆ ನಿರ್ಮಾಣವಾಗಿ ಶಿವಮೊಗ್ಗ ಜನರ ಕನಸು ನನಸಾಗಲಿದೆ. ಮತ್ತೊಮ್ಮೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಜಾರಕಿಹೊಳಿ ಅವರಿಗೆ ಅಭಿನಂದನೆಗಳು ಎಂದು ಮುಕ್ತಕಂಠದಿಂದ ಶಾಸಕರು ಪ್ರಶಂಸಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ದೀನದಯಾಳ್, ನಾಗರಾಜ್, ಪ್ರಭಾಕರ್, ಮಂಜುನಾಥ್ ನವುಲೆ, ಪ್ರಭು, ಶ್ರೀನಾಗ್ ಇದ್ದರು.