ಶಿವಮೊಗ್ಗ: 5 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸುವಲ್ಲಿ ವಿಳಂಬ ಆಗುತ್ತಿರುವುದರಕ್ಕೆ ರಾಜ್ಯ ಸರ್ಕಾರ ಹೈಕೋರ್ಟ್ ಕ್ಷಮೆಯಾಚಿಸಿದೆ.

ಜಿಪಂ ಹಾಗೂ ತಾಪಂ ಕ್ಷೇತ್ರಗಳಿಗೆ ಮೀಸಲಾತಿ ನಿಗದಿ ಪೂರ್ಣಗೊಳಿಸಲು 8 ವಾರಗಳ ಕಾಲಾವಕಾಶ ಬೇಡಿದೆ. ಈ ನಡುವೆ ಶಿವಮೊಗ್ಗ ಮಹಾನಗರ ಪಾಲಿಕೆ ಅವಧಿ ಮುಗಿದು 3 ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಜಿಪಂ ಸದಸ್ಯ ಕೆ.ಇ. ಕಾಂತೇಶ್ ರಿಟ್ ಅರ್ಜಿ ಸಲ್ಲಿಸಿದ್ದರು. ಅವರ ಪರ ವಕೀಲರಾದ ವಿನೋದ್ ಅವರು ಹೈಕೋರ್ಟ್ ನ್ಯಾಯಪೀಠದ ಗಮನಸೆಳೆದಿದ್ದರು.

ಅವಧಿ ಮುಗಿದು ಎರಡು ವರ್ಷಕ್ಕೂ ಹೆಚ್ಚು ಅವಧಿಯಾದರೂ ಪಾಲಿಕೆ ಚುನಾವಣೆ ವಿಳಂಬವಾಗುತ್ತಿದೆ. ಜನಪ್ರತಿನಿಧಿಗಳಿಲ್ಲದೇ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಈ ಅರ್ಜಿಯ ವಿಚಾರಣೆಯನ್ನು ಜುಲೈ 10ಕ್ಕೆ ಕೈಗೊಳ್ಳುವುದಾಗಿ ಮುಖ್ಯ ನ್ಯಾ. ವಿಭು ಬಖ್ರು ಅವರ ವಿಭಾಗೀಯ ಪೀಠ ವಿಚಾರಣೆ ಮುಂದೂಡಿದೆ.