ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಆಯೋಜಿಸಿದ್ದ ನಾಡಹಬ್ಬ ದಸರಾ ಮಹೋತ್ಸವ ನೆರೆದಿದ್ದ ಸಾವಿರಾರು ಭಕ್ತ ಸಮೂಹದ ನಡುವೆ ಅಂಬುಚ್ಛೇದನದ ಮೂಲಕ ರಾವಣ ದಹನ ಮಾಡುವುದರೊಂದಿಗೆ ವೈಭವದ ತೆರೆ ಕಂಡಿತು.
ನಗರದ ಕೋಟೆ ರಸ್ತೆಯ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಮುಂಡೇಶ್ವರಿ ಮೂರ್ತಿಯ ವೈಭವದ ಜಂಬೂ ಸವಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಎಂಎಲ್ಸಿ ಬಲ್ಕಿಷ್ ಬಾನು, ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಪಲ್ಲವಿ, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಮುಖಂಡರಾದ ಆರ್. ಪ್ರಸನ್ನಕುಮಾರ್, ಎಚ್.ಸಿ. ಯೋಗೇಶ್, ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ, ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ ಇತರರಿದ್ದರು.

ಸತತ ಎರಡನೇ ವರ್ಷವೂ ಚಾಮುಂಡೇಶ್ವರಿಯ ಬೆಳ್ಳಿಯ ಅಂಬಾರಿ ಹೋರುವ ಮೂಲಕ ಸಾಗರ ಆನೆ ಗಮನ ಸೆಳೆಯಿತು. ಶೃಂಗಾರಗೊಂಡಿದ್ದ ಸಾಗರ್ಗೆ ಬಾಲಣ್ಣ ಹಾಗೂ ಬಹದ್ದೂರ್ ಸಾಥ್ ನೀಡಿದವು. ಅಂಬಾರಿ ಮೆರವಣಿಗೆಯಲ್ಲಿ ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯ 100ಕ್ಕೂ ಹೆಚ್ಚು ದೇವಾನುದೇವತೆಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಜಂಬೂ ಸವಾರಿಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಕೋಟೆ ಶ್ರೀ ಸೀತಾ ರಾಮಾಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟು, ಎಸ್ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿಬಜಾರ್, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ನೆಹರು ರಸ್ತೆ, ಟಿ.ಸೀನಪ್ಪ ಶೆಟ್ಟಿ ವೃತ್ತ, ದುರ್ಗಿಗುಡಿ, ಜೈಲ್ ವೃತ್ತ, ಲಕ್ಷ್ಮೀ ಟಾಕೀಸ್, ವಿನೋಬನಗರದ ಮಾರ್ಗವಾಗಿ ಅಲ್ಲಮಪ್ರಭು ಮೈದಾನ ತಲುಪಿತು.

ಜಂಬೂ ಸವಾರಿಯುದ್ದಕ್ಕೂ ವಿವಿಧ ಕಲಾ ತಂಡಗಳು ನಾಗರಿಕರ ಕಣ್ಮನ ಸೆಳೆದವು. ಮಂಗಳವಾದ್ಯ, ನಂದಿಧ್ವಜ ಕುಣಿತ, ಮಹಿಳಾ ಡೊಳ್ಳು ಕುಣಿತ, ವೀರಗಾಸೆ, ಕರಡಿ ಮಜಲು, ಕೀಲು ಕುದುರೆ, ಚಂಡೆ, ತಾಳಮದ್ದಲೆ, ಗೊಂಬೆ ಪ್ರದರ್ಶನ, ಹುಲಿವೇಷ ಕುಣಿತ ಸೇರಿ ವಿವಿಧ ಸಾಂಸ್ಕೃತಿಕ ಕಲಾ ಪ್ರದರ್ಶಿನಗಳು ಜಂಬೂಸವಾರಿಯ ಅಂದವನ್ನು ಹೆಚ್ಚಿಸಿದವು. ರಸ್ತೆಯ ಇಕ್ಕೆಲಗಳಲ್ಲಿ ಕಟ್ಟಡದ ಮೇಲೆ ನಿಂತು ನಾಡದೇವತೆ ಮೆರವಣಿಗೆಯ ಅವಿಸ್ಮರಣೀಯ ದೃಶ್ಯಗಳನ್ನು ನಗರದ ನಾಗರಿಕರು ಕಣ್ಣುಂಬಿಕೊಂಡರು.
ಜನರ ಹರ್ಷೋದ್ಘಾರದ ನಡುವೆ ಶಿವಮೊಗ್ಗ ತಹಶೀಲ್ದಾರ್ ರಾಜೀವ್ ಅವರು ಅಂಬುಛೇದನ ಮಾಡಿದರು. ಬಳಿಕ ರಾವಣ ಪ್ರತಿಕೃತಿ ದಹನ ನಡೆಯಿತು. ಅದರಲ್ಲೂ ರಾವಣನ ಪ್ರತಿಕೃತಿ ದಹನದ ಬಳಿಕ ಸುಮಾರು 10 ನಿಮಿಷ ಸಿಡಿಮದ್ದುಗಳ ಪ್ರದರ್ಶನ ಅತ್ಯಾಕರ್ಷಕವಾಗಿತ್ತು.
ವೇದಿಕೆಯಲ್ಲಿ ಖ್ಯಾತ ಗಾಯಕಿ ಸುರೇಖಾ ಹೆಗಡೆ ಮತ್ತು ಸಂಗಡಿಗರಿಂದ ಸುಮಗ ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು. ಆಹಾರದ ಮಳಿಗೆಗಳಲ್ಲಿ ಭರ್ಜರಿ ವ್ಯಾಪಾರ ನಡೆದಿತ್ತು. ಅಂಬು ಛೇದಿಸುವ ಸಂದರ್ಭದಲ್ಲಿ ಒಂದಿಷ್ಟು ನೂಕುನುಗ್ಗಲು ಕೂಡ ನಡೆಯಿತು. ಬನ್ನಿಮಂಟಪದ ಒಳಗೆ ಹೋಗಲು ಮುಖಂಡರುಗಳೇ ಸಾಹಸ ಪಡುತ್ತಿದ್ದರು. ಪೊಲೀಸರಿಗೂ ಕೂಡ ಜನಪ್ರತಿನಿಧಿಗಳ ಬೆಂಬಲಿಗರನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಯಿತು ಈ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.
ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಎಂಎಲ್ಸಿಗಳಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಭಾರತಿ ಶೆಟ್ಟಿ, ಬಲ್ಕಿಷ್ ಬಾನು, ಮಾಜಿ ಜಿ.ಪಂ. ಸದಸ್ಯ ಕೆ.ಇ.ಕಾಂತೇಶ್, ಶರತ್ ಮರಿಯಪ್ಪ, ಎಸ್.ಕೆ. ಮರಿಯಪ್ಪ, ಕೆ. ರಂಗನಾಥ್, ರೇಖಾ ರಂಗನಾಥ್, ಮಧು, ಧೀರರಾಜ್ ರವಿಕುಮಾರ್, ಎಸ್.ಟಿ. ಚಂದ್ರಶೇಖರ್, ಸ್ಟೆಲ್ಲಾಮಾರ್ಟಿನ್, ನಾಜಿಮಾ, ಸಮೀನಾಕೌಸರ್, ಆರ್. ರಾಜಶೇಖರ್, ಮಾಜಿ ಮಹಾನಗರ ಪಾಲಿಕೆ ಸದಸ್ಯರು, ಜನಪ್ರತಿನಿಧಿಗಳು, ಮಹಾನಗರ ಪಾಲಿಕೆಯ ಸಿಬ್ಬಂದಿಗಳು, ದಸರಾ ಸಮಿತಿಯ ಸದಸ್ಯರುಗಳು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಆಸಕ್ತಿಯಿಂದ ಭಾಗವಹಿಸಿದ್ದ ಜನರು ಕಡೇ ದಿನ ಬನ್ನಿ ಮುಡಿಯುವ ಮೂಲಕ ವೈಭವದ ದಸರಾ ಮಹೋತ್ಸವಕ್ಕೆ ಸಾಕ್ಷಿಯಾದರು.
ಅಂಬು ಕಡಿಯುವ ಈ ಕಾರ್ಯಕ್ರಮದಲ್ಲಿ ಸುಮಾರು 10ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇವರನ್ನು ನಿಯಂತ್ರಿಸುವಲ್ಲಿ ಇಡೀ ಪೊಲೀಸ್ ಇಲಾಖೆ ಶ್ರಮಪಟ್ಟಿತು. ಪೊಲೀಸರ ಶ್ರಮ ಮೆಚ್ಚುಗೆಗೆ ಕಾರಣವಾಯಿತು. 11 ದಿನಗಳ ಕಾಲ ನಡೆದ ಶಿವಮೊಗ್ಗ ದಸರಾದ ರೂವಾರಿ ಎನ್ನಬಹುದಾದ ಶಾಸಕ ಎಸ್.ಎನ್. ಚನ್ನಬಸಪ್ಪನವರಿಗೆ ಕೃತಜ್ಞತೆಯನ್ನು ಅರ್ಪಿಸಲಾಯಿತು.