ಭಾರತದ ರಾಷ್ಟ್ರಪಿತ, ಸ್ವಾತಂತ್ರ ಹೋರಾಟಗಾರ, ಬಾಪೂಜಿ ಎಂದ ಕೂಡಲೇ ಭಾರತದ ಪ್ರತಿಯೊಬ್ಬ ಪ್ರಜೆಗೆ ನೆನಪಿಗೆ ಬರುವುದು ಮೋಹನದಾಸ್ ಕರಮಚಂದ ಗಾಂಧಿ ಅಥವಾ ಮಹಾತ್ಮ ಗಾಂದಿ,ಪುಟ್ಟ ಮಕ್ಕಳಿಂದ ಹಿಡಿದು ಯಾವುದೇ ವಯಸ್ಸಿನವರಾದರೂ ಗಾಂಧೀಜಿಯ ಯಶೋಗಾಥೆಯ ಬಗ್ಗೆ ಭಾವುಕರಾಗುತ್ತಾರೆ.ಅಂತಹ ಅದ್ಭುತ ವ್ಯಕ್ತಿತ್ವ ಮಹಾತ್ಮ ಗಾಂಧೀಜಿಯವರದ್ದು.

ಮಹಾತ್ಮ ಗಾಂಧಿ ಒಬ್ಬ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು.ಹಾಗೂ ಪ್ರಬಲ ರಾಜಕೀಯ ನಾಯಕರಾಗಿದ್ದರು,ಅವರು ಭಾರತದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದವರು,ಗಾಂಧೀಜಿ ದೇಶದ ಪಿತಾಮಹ ಎಂದೇ ಕರೆಯಲ್ಪಡುತ್ತಾರೆ. ಅವರು ಭಾರತದ ಬಡ ಜನರ ಜೀವನವನ್ನು ಸುಧಾರಿಸುವಲ್ಲಿ ಶತಾಯಗತಾಯ ಶ್ರಮಿಸಿದ್ದರು. ಎಂಬುದರಲ್ಲಿ ಯಾವುದೇ ಸಂಶಯವಿಲ್ಲ,ಅವರ ಜನ್ಮದಿನವನ್ನು ಪ್ರತಿವರ್ಷ ಗಾಂಧಿ ಜಯಂತಿಯಂದು ಆಚರಿಸಲಾಗುತ್ತದೆ. ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ಸಿದ್ಧಾಂತವು ಅನೇಕರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ.ಕೇವಲ ಭಾರತದಲ್ಲಿ ಮಾತ್ರವಲ್ಲ ಇತರ ಹಲವಾರು ದೇಶಗಳಲ್ಲಿ ಗಾಂಧೀಜಿಯವರ ಅಹಿಂಸಾ ತತ್ವವನ್ನು ಅಳವಡಿಸಿ ಕೊಂಡಿರುವ ಉದಾಹರಣೆಗಳಿವೆ.ಮಾರ್ಟಿನ್ ಲೂಥರ್ ಮತ್ತು ನೆಲ್ಸನ್ ಮಂಡೇಲಾ ಅವರು ತಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಈ ತತ್ವಗಳನ್ನು ಅಳವಡಿಸಿಕೊಂಡು ವಿಜಯವನ್ನು ಸಾಧಿಸಿದ್ದಾರೆ. “ಬಾಲ್ಯಜೀವನ: ಗಾಂಧೀಜಿಯವರು ಅಕ್ಟೋಬರ್ 2, 1869 ಗುಜರಾತ್ ನ ಪೋರಬಂದರಿನಲ್ಲಿ ಈ ಧೀಮಂತ ನಾಯಕನ ಜನನವಾಯಿತು. ತಂದೆ ಕರಮಚಂದ್ ಗಾಂಧಿ,ತಾಯಿ ಪುತಲೀಬಾಯಿ ಇವರ ಪೂರ್ಣ ಹೆಸರು ಮೋಹನದಾಸ್ ಕರಮಚಂದ್ ಗಾಂಧಿ ತಮ್ಮ 13ನೇ ವಯಸ್ಸಿನಲ್ಲಿ ಗಾಂಧೀಜಿ ಅವರಿಗೆ ಹಿರಿಯರ ನಿಶ್ಚಯದಂತೆ ಕಸ್ತೂರಿಬಾ ರೊಂದಿಗೆ ವಿವಾಹವಾಯಿತು. ಗಾಂಧೀಜಿ ಹಾಗೂ ಕಸ್ತೂರಿಬಾ ಅವರಿಗೆ ನಾಲ್ಕು ಜನ ಮಕ್ಕಳು ಜನಿಸಿದರು. ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ, ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧೀ ಎಂಬ ನಾಲ್ಕು ಗಂಡು ಮಕ್ಕಳಿದ್ದರು. ಕಸ್ತೂರಿಬಾ ತಮ್ಮ ಜೀವಿತಾವಧಿಯಲ್ಲಿ ಗಾಂಧೀಜಿಯವರ ಎಲ್ಲಾ ಕಾರ್ಯಗಳಲ್ಲೂ ಬೆನ್ನೆಲುಬಾಗಿ ನಿಂತಿದ್ದರು.ಕಸ್ತೂರಿಬಾ 1944 ರಲ್ಲಿ ಅಸುನೀಗಿದ್ದರು. ಅವರ ತಂದೆ ಕರಮಚಂದ್ ಗಾಂಧಿ ಯವರು, ಬ್ರಿಟಿಷ್ ಆಳ್ವಿಕೆಯ ಪಶ್ಚಿಮದ ಒಂದು ಸಂಸ್ಥಾನದ (ಈಗ ಗುಜರಾತ್ ರಾಜ್ಯ ) ರಾಜಧಾನಿ ಪೋರಬಂದರಿನ ದಿವಾನ್ ಅಥವಾ ಮುಖ್ಯ ಮಂತ್ರಿಯಾಗಿದ್ದರು. ಅವರು ಶ್ರೀಮಂತ ವೈಷ್ಣವ ಕುಟುಂಬಕ್ಕೆ ಸೇರಿದವರು,ಗಾಂಧೀಜಿ ಆರಂಭದಿಂದಲೂ ಶ್ರವಣಕುಮಾರ ಮತ್ತು ಹರಿಶ್ಚಂದ್ರರ ಕಥೆಗಳನ್ನು ಕೇಳಿ ಅದರಲ್ಲಿರುವ ಸತ್ಯದ ಮಹತ್ವವನ್ನು ಅರಿತು ಅದರಿಂದ ಆಳವಾಗಿ ಪ್ರಭಾವಿತರಾಗಿದ್ದರು.

“ಗಾಂಧಿ ಜಯಂತಿಯ ಮಹತ್ವ”: ಅಕ್ಟೋಬರ್ 2 ನಮ್ಮ ದೇಶಾದ್ಯಂತ ಆಚರಿಸುವ ರಾಷ್ಟ್ರೀಯ ಹಬ್ಬ ಗಾಂಧಿಜಯಂತಿ.ಎಲ್ಲಾ ಶಾಲೆಗಳಲ್ಲಿ,ಸರ್ಕಾರಿ ಕಛೇರಿಗಳಲ್ಲಿ ಗಾಂಧೀಜಿ ಯವರ ಭಾವ ಚಿತ್ರವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ. ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಂದು ಗಾಂಧೀಜಿಯವರ ಬಗ್ಗೆ ಮತ್ತು ಅವರ ಸಾಧನೆಗಳ ಬಗ್ಗೆ ಜೊತೆಗೆ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಹೇಳುತ್ತಾರೆ. ಅದರ ಜೊತೆಗೆ ಅಂದು ವಿಶೇಷವಾಗಿ ಶ್ರಮದಾನವನ್ನು ಸಹ ಹಮ್ಮಿಕೊಂಡು ಆಯಾ ಗ್ರಾಮದಲ್ಲಿ ಬೇಗನೆ ಎದ್ದು ಸ್ನಾನ ಮಾಡಿ ರಾಷ್ಟ್ರ ಪಿತನಿಗೆ ನಮಿಸಿ,ಅವರ ತತ್ವಗಳನ್ನು ಜೀವನದಲ್ಲಿ ತೊಡಗಿಸಿಕೊಳ್ಳಲು ಸಿದ್ದರಾಗಿ ಶಾಲೆಗೆ ಬರುತ್ತಾರೆ.
ಇಂತಹ ಮಹಾನ್ ವ್ಯಕ್ತಿಯ ಜನ್ಮ ದಿನವಾದ ಅಕ್ಟೋಬರ್ 2 ರಂದು ರಾಜ್ಯಾದ್ಯಂತ ಮದ್ಯಪಾನವನ್ನು ಸಹ ಸರ್ಕಾರ ನಿಷೇಧಿಸಿರುವುದು ಹೆಮ್ಮೆಯ ಸಂಗತಿಯೂ ಹೌದು. ನಮಗೆ ತಿಳಿದ ಹಾಗೆ ಗಾಂಧೀಜಿ ಅವರ ಹುಟ್ಟಿದ ದಿನವನ್ನು ಗಾಂಧಿ ಜಯಂತಿ ಎಂದು ಆಚರಿಸಲಾಗುವುದು.
“ಶಿಕ್ಷಣ ” : ಗಾಂಧೀಜಿ ಒಂಬತ್ತು ವರ್ಷ ವಯಸ್ಸಿನಲ್ಲಿದ್ದಾಗ ರಾಜಕೋಟ್ ನ ಸ್ಥಳೀಯ ಶಾಲೆಗೆ ಹೋಗಿ ಅಂಕ ಗಣಿತ, ಇತಿಹಾಸ,ಭೌಗೋಳಿಕತೆ ಮತ್ತು ಭಾಷೆಗಳ ಮೂಲಭೂತ ಅಂಶಗಳನ್ನು ಅಧ್ಯಯನ ಮಾಡಿದರು.ನಂತರ ತಮ್ಮ11ನೇ ವಯಸ್ಸಿನಲ್ಲಿ ರಾಜಕೋಟ್ ನ ಪ್ರೌಢಶಾಲೆಯಲ್ಲಿ ಶಿಕ್ಷಣ ಮುಂದುವರಿಸಿದರು.ಆದರೆ 13ನೇ ವಯಸ್ಸಿನಲ್ಲಿಯೇ ಮದುವೆಯಾಗಿ 1ವರ್ಷ ಶಿಕ್ಷಣವನ್ನು ಅರ್ಧದಲ್ಲಿಯೇ ನಿಲ್ಲಿಸಬೇಕಾಯಿತು. ಆದರೆ ಓದಿನಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದ ಗಾಂಧೀಜಿ ಪುನಃ ಶಾಲೆಗೆ ಸೇರಿಕೊಂಡು ತಮ್ಮ ಶಾಲಾ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು.1888 ರಲ್ಲಿ ಗಾಂಧೀಜಿ ಗುಜರಾತ್ ನ ಬಾವನಗರದ ಸಮಲ್ದಾಸ್ ಕಾಲೇಜಿಗೆ ಸೇರಿದರು.ಈ ಸಮಯದಲ್ಲಿ ಅವರ ಕುಟುಂಬದ ಸ್ನೇಹಿತ ಮಾವಿಜಿ ದವೆ ಜೋಶಿ ತಮ್ಮ ಹೆಚ್ಚಿನ ಅಧ್ಯಯನವನ್ನು ಮುಂದುವರಿಸಲು ಅಂದರೆ ಲಂಡನ್ನಲ್ಲಿ ಕಾನೂನು ಅಭ್ಯಾಸ ಮಾಡಲು ತೆರಳಿದರು. ಇತ್ತ ಗಾಂಧೀಜಿಯವರು ಸಮಲ್ದಾಸ್ ಕಾಲೇಜಿನಲ್ಲಿ ಅಧ್ಯಯನದಿಂದ ತೃಪ್ತರಾಗಲಿಲ್ಲ, ಹಾಗಾಗಿ ಅವರು ಸ್ನೇಹಿತನ ಹೋಗುವ ಪ್ರಸ್ತಾವನೆಯಿಂದ ಉತ್ಸುಕರಾಗಿ ಮಾಂಸಾಹಾರ,ಮದ್ಯಪಾನ ಮುಟ್ಟುವುದಿಲ್ಲ ಎಂದು ತಾಯಿ ಮತ್ತು ಹೆಂಡತಿಗೆ ಮನವರಿಕೆ ಮಾಡಿದರು. ಮತ್ತು ಅವರಿಂದ ಬೀಳ್ಕೊಟ್ಟು ಲಂಡನ್ನಿಗೆ ತೆರಳಿದರು.
“ರಾಷ್ಟ್ರಪಿತ ಗಾಂಧೀಜಿಗೆ ಮಹಾತ್ಮ ಎಂದವರು”: ಗಾಂಧೀಜಿಯವರನ್ನು ಮೊದಲ ಬಾರಿಗೆ ಮಹಾತ್ಮ ಎಂದು ಕರೆದವರು ರವೀಂದ್ರನಾಥ ಟಾಗೋರ್, “ರಾಷ್ಟ್ರಪಿತ” ಎಂಬ ವಿಶೇಷಣ ಗಾಂಧೀಯವರಿಗೆ ಅಂಟಿಕೊಂಡಿದ್ದು ಅಚಾನಕ್ಕಾಗಿ, ಹೀಗೆ ಮೊದಲ ಬಾರಿಗೆ ಕರೆದವರು ನೇತಾಜಿ ಸುಭಾಷ್ ಚಂದ್ರ ಬೋಸ್ ರು,1945 ರಲ್ಲಿ ರಂಗೂರಿನಲ್ಲಿದ್ದ ತಮ್ಮ ಇಂಡಿಯನ್ ನ್ಯಾಷನಲ್ ಆರ್ಮಿಯ ವತಿಯಿಂದ ಬ್ರಿಟಿಷ್ ಇಂಡಿಯಾದ ಮೇಲೆ ದಾಳಿ ಮಾಡಲು ಮುಂದಾಗಿದ್ದ ಬೋಸ್ ,ಬಾನುಲಿ ಸಂದೇಶವೊಂದನ್ನು ಗಾಂಧಿಯವರಿಗೆ ಪ್ರಸಾರ ಮಾಡಿದರು. “ಫಾದರ್ ಆಫ್ ಅವರ್ ನೇಷನ್ ” ಎಂದು ಗಾಂಧಿಯನ್ನು ಕರೆದರು. ಈ ಹೋರಾಟದಲ್ಲಿ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಕೇಳಿ ಕೊಂಡಿದ್ದರು.
“ಹೋರಾಟ,ಚಳುವಳಿ, ಸತ್ಯಾಗ್ರಹ” : ಸುದೀರ್ಘ ವರ್ಷಗಳ ನಂತರ ಗಾಂಧೀಜಿ 1915ರಲ್ಲಿ ಭಾರತಕ್ಕೆ ಮರಳಿದರು. ಅದೇ ವರ್ಷ ಅಮದಾಬಾದ್ ನಲ್ಲಿ ಸತ್ಯಾಗ್ರಹ ಆಶ್ರಮವನ್ನು ಸ್ಥಾಪಿಸಿದ ಗಾಂಧಿ, ಬ್ರಿಟಿಷರ ಹಿಡಿತದಲ್ಲಿ ಭಾರತವನ್ನು ನೋಡಿ ಮರುಗಿದರು.ಭಾರತಕ್ಕೆ ಸ್ವಾತಂತ್ರ ಸಿಗದ ಬೇರೆ ದಾರಿ ಇಲ್ಲ ಎಂದು ತಮ್ಮ ವಕೀಲ ವೃತ್ತಿಯನ್ನು ತ್ಯಜಿಸಿ ಸಂಪೂರ್ಣ ಹೋರಾಟಕ್ಕೆ ಇಳಿದರು.
ಉಪವಾಸ, ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳ ಮೂಲಕ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದರು. ಹಲವಾರು ಬಾರಿ ಬ್ರಿಟಿಷ್ ಸರ್ಕಾರ ಇವರನ್ನು ಬಂಧನದಲ್ಲಿರಿಸಿತು. ಯಶಸ್ವಿ ಸತ್ಯಾಗ್ರಹಗಳಲ್ಲಿ ಇನ್ನೊಂದೆಂದರೆ ಸ್ವದೇಶಿ ಚಳುವಳಿ, ಸ್ವದೇಶಗಳಲ್ಲಿ ಉತ್ಪಾದಿತವಾದ ವಸ್ತುಗಳನ್ನು ಮಾತ್ರ ಬಳಸುವಂತೆ ಕೇಳಿಕೊಂಡರು. ಈ ತತ್ವವೇ ಖಾದಿ ಉತ್ಪಾದಿಸಿ, ಖಾದಿ ಬಟ್ಟೆಗಳನ್ನೇ ತೊಡುವ ಸಂಪ್ರದಾಯ ಜನಪ್ರಿಯವಾಯಿತು. ಭಾರತೀಯ ಮಹಿಳೆಯರಿಗೆ ಪ್ರತಿ ದಿನವೂ ಖಾದಿ ನೇಯುವಂತೆ ಕೇಳಿ, ಗಾಂಧೀಜಿಯವರು ಮಹಿಳೆಯರಿಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಟ್ಟರು. 1920 ರಂದು ಅಮೃತಸರದಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ನಂತರ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿ ಇನ್ನೂ ಹೆಚ್ಚು ವೇಗದಲ್ಲಿ ಸಾಗಲಾರಂಭಿಸಿತು. ಗಾಂಧೀಜಿಯವರ ಜೀವನದ ಪ್ರಸಿದ್ಧ ಕಾರ್ಯಗಳಲ್ಲಿ ಒಂದು ದಂಡಿ ಯಾತ್ರೆ.

ಉಪ್ಪಿನ ಉತ್ಪಾದನೆಗೆ ಬ್ರಿಟಿಷ್ ಸರ್ಕಾರಕ್ಕೆ ಕರ ಕೊಡುವ ಬದಲು ಜನರು ತಾವಾಗಿಯೇ ಉಪ್ಪನ್ನು ಉತ್ಪಾದಿಸಲಿಕ್ಕಾಗಿ ಗಾಂಧೀಜಿ ಮಾರ್ಚ್ 12,1930 ರಂದು ಸಹಸ್ರಾರು ಜನರೊಡನೆ ಸಮುದ್ರತೀರಕ್ಕೆ ನಡೆದು ಉಪ್ಪನ್ನು ಉತ್ಪಾದಿಸಿದರು. ಮೇ 8,1933ರಂದು ಆರಂಭಗೊಂಡು 21 ದಿನಗಳ ಕಾಲ ಬ್ರಿಟಿಷ್ ಆಡಳಿತವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದರು. ಮಾರ್ಚ್ 3,1939 ರಂದು ಆರಂಭಗೊಂಡು ಇನ್ನೊಂದು ಉಪವಾಸವನ್ನು ನಡೆಸಿದರು. ಗಾಂಧೀಜಿ 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು.”ಭಾರತ ಬಿಟ್ಟು ತೊಲಗಿರಿ “ಚಳುವಳಿ 1942ರಲ್ಲಿ ಆರಂಭವಾಯಿತು ಆಗಸ್ಟ್ 9,1942 ರಂದು ಬ್ರಿಟಿಷರು ಗಾಂಧೀಜಿಯನ್ನು ಮತ್ತೆ ಬಂಧಿಸಿ ಎರಡು ವರ್ಷಗಳ ಕಾಲ ಬಂಧನದಲ್ಲಿರಿಸಿದರು
“ತತ್ವ, ಸಿದ್ಧಾಂತಗಳು “: ಅವರ ಮುಖ್ಯ ತತ್ವಗಳು ಸತ್ಯ ಮತ್ತು ಅಹಿಂಸೆ,ತತ್ವ ಭಾರತೀಯ ಧಾರ್ಮಿಕ ವಿಚಾರದಲ್ಲಿ ಅನೇಕ ಶತಮಾನಗಳಿಂದ ಅಸ್ತಿತ್ವದಲ್ಲಿರುವ ತತ್ವ, ಗಾಂಧೀಜಿಯವರು ಕಟ್ಟಾ ಸಸ್ಯಾಹಾರಿಗಳು,ಲಂಡನ್ ನಲ್ಲಿ ಓದುತ್ತಿದ್ದಾಗ ಅವರು ಸಸ್ಯಾಹಾರದ ಬಗೆಗೆ ಪುಸ್ತಕಗಳನ್ನೂ ಬರೆದಿದ್ದರು. ಹಿಂದೂ ಮತ್ತು ಜೈನ ಸಮಾಜಗಳಲ್ಲಿ ಸಸ್ಯಾಹಾರದ ತತ್ವ, ಶತಮಾನಗಳಿಂದಲೂ ಆಳವಾಗಿ ಬೇರೂರಿರುವುದು, ವಿವಿಧ ರೀತಿಯ ಆಹಾರ ಕ್ರಮಗಳೊಂದಿಗೆ ಪ್ರಯೋಗಗಳನ್ನು ಕೈಗೊಂಡ ಗಾಂಧೀಜಿಯವರ ನಂಬಿಕೆ, ತಮ್ಮ ಆಹಾರ ಕ್ರಮ ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಬೇಕೇ ಹೊರತು ಅದಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುವುದು ಅಗತ್ಯವಿಲ್ಲವೆಂಬುದು.

ಕಾಲ ಕಾಲಕ್ಕೆ ಉಪವಾಸ ವ್ರತವನ್ನೂ ಕೈಗೊಳ್ಳುತ್ತಿದ್ದ ಗಾಂಧೀಜಿಯವರು ಉಪವಾಸ ಸತ್ಯಾಗ್ರಹವನ್ನು, ಸ್ವಾತಂತ್ರ್ಯ ಚಳುವಳಿಯಲ್ಲೂ ಉಪಯೋಗಿಸಿದವರು 36 ನೆಯ ವಯಸ್ಸಿನಲ್ಲಿ ಗಾಂಧೀಜಿಯವರು ಬ್ರಹ್ಮಚರ್ಯ ವ್ರತವನ್ನು ಸ್ವೀಕರಿಸಿದರು.ಹಾಗೆಯೇ ವಾರದಲ್ಲಿ ಒಂದು ದಿನ ಮೌನವ್ರತವನ್ನು ಆಚರಿಸುತ್ತಿದ್ದರು.ಇದರಿಂದ ಆತ್ಮಶಾಂತಿ ಸಿಕ್ಕುತ್ತದೆಂಬುದು ಗಾಂಧೀಜಿಯವರ ನಂಬಿಕೆ. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ಮೇಲೆ ಖಾದಿ ಉಡುಪುಗಳನ್ನು ಮಾತ್ರ ಅವರು ಧರಿಸುತ್ತಿದ್ದರು. ಮನೆಯಲ್ಲಿಯೇ ನೇಯ್ದ ಖಾದಿ ಬಟ್ಟೆಗಳನ್ನು ಧರಿಸುವುದನ್ನು ಗಾಂಧೀಜಿ ಪ್ರೋತ್ಸಾಹಿಸುತ್ತಿದ್ದರು.
“ಮಹಾತ್ಮ ಗಾಂಧಿ ಸಾಹಿತ್ಯ ಕೃತಿಗಳು “: ಹಿಂದ್ ಸ್ವರಾಜ್’ 1909 ರಲ್ಲಿ ಗುಜರಾತಿ ಭಾಷೆಯಲ್ಲಿ ಪ್ರಕಟವಾಯಿತು. ಗಾಂಧೀಜಿಯವರು ಹಲವು ಪತ್ರಿಕೆಗಳ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.ಗುಜರಾತಿ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರಕಟವಾಗುತ್ತಿದ್ದ ‘ಇಂಡಿಯನ್ ಒಪಿನಿಯನ್’ ಮತ್ತು ‘ಯಂಗ್ ಇಂಡಿಯಾ’ ಹಾಗೂ ಗುಜರಾತಿ ಭಾಷೆಯ ಮಾಸಿಕ ‘ನವಜೀವನ್’ ಪತ್ರಿಕೆಗಳ ಸಂಪಾದಕರಾಗಿದ್ದರು. ಗಾಂಧಿ ಅವರು ತಮ್ಮ ಆತ್ಮಚರಿತ್ರೆ ‘ದಿ ಸ್ಟೋರಿ ಆಫ್ ಮೈ ಎಕ್ಸ್ಪೆರಿಮೆಂಟ್ಸ್ ವಿತ್ ಟ್ರುಥ್’ ಅನ್ನು ಸಹ ಬರೆದಿದ್ದಾರೆ.ಗಾಂಧಿಯವರ ಇತರ ಆತ್ಮಚರಿತ್ರೆಗಳೆಂದರೆ, ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ, ಹಿಂದ್ ಸ್ವರಾಜ್ ಅಥವಾ ಇಂಡಿಯನ್ ಹೋಂ ರೂಲ್.
” ಪ್ರಶಸ್ತಿಗಳು” :1930ರಲ್ಲಿ ಟೈಮ್ಸ್ ನಿಯತ ಕಾಲಿಕೆಯು ಗಾಂಧಿಯನ್ನು ವರ್ಷದ ಪುರುಷ ಎಂದು ಗೌರವಿಸಿತು. ಗಾಂಧಿಯನ್ನು ಸರ್ವಕಾಲಿಕ ಶ್ರೇಷ್ಠ 25 ರಾಜಕೀಯ ಮುತ್ಸದ್ಧಿಗಳು ಒಬ್ಬರೆಂದು ಗುರುತಿಸಿದೆ.1937ಮತ್ತು 1948 ರ ನಡುವೆ 5 ಬಾರಿ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ, ಗಾಂಧೀಜಿಯವರು ಪ್ರಶಸ್ತಿಯನ್ನು ಸ್ವೀಕರಿಸಲಿಲ್ಲ.
“ಮಹಾತ್ಮನ ಕೊನೆಯ ದಿನಗಳು: ಕೊನೆಗೂ 1947 ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಿತು. ಆದರೆ ದೇಶ ಭಾರತ ಮತ್ತು ಪಾಕಿಸ್ತಾನ ಇಬ್ಬಾಗವಾಯಿತು ಅದನ್ನು ವಿರೋಧಿಸಿದ ಗಾಂಧೀಜಿಯವರು ಹಿಂದು-ಮುಸಲ್ಮಾನರ ನಡುವೆ ಸಾಮರಸ್ಯ ತರಲು ಶ್ರಮಿಸಿದರು.1948 ಜನೆವರಿ 30 ರಂದು ಶುಕ್ರವಾರ ಪ್ರಾರ್ಥನಾ ಸಭೆಗೆ ಹೋಗುತ್ತಿದ್ದ ವೇಳೆ ನಾಥೂರಾಮ್ ವಿನಾಯಕ್ ಗೋಡ್ಸೆ ಎಂಬಾತ ಗಾಂಧೀಜಿ ಎದೆಗೆ ಗುಂಡು ಹಾರಿಸಿದ, ಹೇ ರಾಮ್ ಎನ್ನುತ್ತಾ ಗಾಂಧೀಜಿ ಪ್ರಾಣಬಿಟ್ಟರು.ಗಾಂಧೀಜಿ ಒಬ್ಬ ವ್ಯಕ್ತಿ ಯಾಗಿರದೆ ಒಂದು ಮಹಾನ್ ಶಕ್ತಿಯಾಗಿದ್ದರು. ಭಾರತಕ್ಕೆ ಸ್ವಾತಂತ್ರ್ಯ ತರಲು ಹಾಗೂ ರಾಮ ರಾಜ್ಯ ಸ್ಥಾಪಿಸಲು ತಮ್ಮ ತನು-ಮನ-ಧನಗಳನ್ನು ಅರ್ಪಿಸಿದರು. ಗಾಂಧೀಜಿಯ ಅಂತ್ಯಸಂಸ್ಕಾರ ದೆಹಲಿ ಮಹಾರಾಜ ಘಾಟ್ ದಲ್ಲಿ ನಡೆಯಿತು. ನಂತರ ಅಲಹಾಬಾದಿನ ತ್ರಿವೇಣಿ ಸಂಗಮದಲ್ಲಿ ಚಿತಾಭಸ್ಮವನ್ನು ವಿಸರ್ಜಿಸಲಾಯಿತು. ವಿಶೇಷವಾಗಿ ಸಾಮಾಜಿಕ ಕಾರ್ಯಕರ್ತರು,ವಿಶ್ವ ನಾಯಕರು ಮತ್ತು ನಾಗರಿಕರಿಗೆ ಭಾರತ ಸರ್ಕಾರ ವಾರ್ಷಿಕ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಲು ಆರಂಭಿಸಿತು. ವರ್ಣಭೇದ ನೀತಿಯ ವಿರುದ್ಧದ ದಕ್ಷಿಣ ಆಫ್ರಿಕಾದ ಹೋರಾಟದ ನಾಯಕ ನೆಲ್ಸನ್ ಮಂಡೇಲಾ ಈ ಪ್ರಶಸ್ತಿಗೆ ಭಾಜನರಾಗಿದ್ದರು.
ಮಹಾತ್ಮ ಗಾಂಧಿ ಭಾರತದಲ್ಲಿ ಮಾತ್ರವಲ್ಲದೇ ಇತರ ದೇಶಗಳಲ್ಲಿಯೂ ಇಂದಿಗೂ ನೆನಪಿನಲ್ಲಿ ಉಳಿಯುವುದಕ್ಕೆ ಅವರ ಧೀಮಂತ ವ್ಯಕ್ತಿತ್ವ ಹಾಗೂ ಸರಳ ನಡವಳಿಕೆಗಳೇ ಕಾರಣ. ಹಾಗಾಗಿ ಇಂದಿಗೂ ನಮ್ಮಲ್ಲಿ ಗಾಂಧೀಜಯಂತಿ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ.
ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ.