ಶಿವಮೊಗ್ಗ : ಈಗಿನ ಸಾಮಾಜಿಕ, ಶೈಕ್ಷಣಿಕ ಗಣತಿಯ ವರದಿಯನ್ನು ಜಾರಿಗೊಳಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನ ಕಳೆದುಕೊಳ್ಲಕುವುದು ನಿಶ್ಚಿತ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಜಾತಿ ಗಣತಿ ಹೆಸರಿನಲ್ಲಿ ಹಿಂದೂ ಸಮಾಜವನ್ನು ಛಿದ್ರ ಮಾಡುವ ಸಂಚು ಮಾಡಿದೆ. ಸಚಿವ ಸಂಪುಟ ಸಭೆಯಲ್ಲೇ ಬಹುತೇಕ ಸಚಿವರು ಈ ಸಮೀಕ್ಷೆಯನ್ನು ವಿರೋಧಿಸಿದ್ದಾರೆ. ಸಮೀಕ್ಷೆ ಸಾಧು ಸಂತರಲ್ಲೂ ಬಿರುಕನ್ನುಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೀರಶೈವ ಲಿಂಗಾಯತರ ಬಗ್ಗೆ ಸಚಿವ ಈಶ್ವರ ಖಂಡ್ರೆ ಸಮೀಕ್ಷೆ ಕುರಿತು ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ಗೊಂದಲ ಮೂಡಿಸಿದ್ದಾರೆ. ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸಬೇಕು ಎಂದು ಮನವಿ ಮಾಡಿದ ಅವರು ವೀರಶೈವ ಸಮಾಜವನ್ನು ಛಿದ್ರ ಮಾಡಿದ ಶ್ರೇಯಸ್ಸು ಕಾಂಗ್ರಸ್ಸಿಗೆ ಸಲ್ಲುತ್ತದೆ ಎಂದು ವ್ಯಂಗ್ಯವಾಡಿದರು.

ಯಾವುದೇ ಪೂರ್ವ ತಯಾರಿ ಇಲ್ಲದೆ ಜಾತಿ ಸಮೀಕ್ಷೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಈಗಾಗಲೇ ೧೬೯ ಕೋಟಿ ರೂ.ವೆಚ್ಚದ ಕಾಂತರಾಜ ವರದಿಯನ್ನು ಸಿದ್ದರಾಮಯ್ಯ ಹಾಳು ಮಾಡಿದ್ದಲ್ಲದೆ ಈಗ ೪೨೦ಕೋಟಿ ರೂ.ಖರ್ಚಿನ ಸಮೀಕ್ಷೆ ಮಾಡಿ ಅದರ ವರದಿಯನ್ನು ಬಿಡುಗಡೆ ಮಾಡುವ ತಾಕತ್ತೂ ಸಿದ್ದರಾಮಯ್ಯ ಅವರಿಗಿಲ್ಲ ಎಂದು ಟೀಕಿಸಿದರು.