ಶಿವಮೊಗ್ಗ,ಸೆ.25: ಯಾವುದೇ ಕಾರಣಕ್ಕೂ ಸಾಗರ ತಾಲ್ಲೂಕನ್ನು ಜಿಲ್ಲೆಯನ್ನಾಗಿ ಮಾಡಬಾರದು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಟ್ರಸ್ಟಿ ಕಲ್ಲೂರು ಮೇಘರಾಜ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಅಖಂಡತೆಯೂ ವಿಭಜನೆಯಾಗಬಾರದು. ಆದರೂ ಕೆಲವರು ಸಾಗರ ತಾಲ್ಲೂಕನ್ನು ಜಿಲ್ಲೆಯನ್ನಾಗಿ ಮಾಡಬೇಕು ಎಂದು ಹೋರಾಟ ನಡೆಸುತ್ತಿದ್ದಾರೆ. ಇದು ಅವೈಜ್ಞಾನಿಕ ಬೇಡಿಕೆಯಾಗಿದೆ. ಮತ್ತು ಅಪ್ರಸ್ತುತವಾಗಿದೆ. ಸಾಗರ ಜಿಲ್ಲೆಯಾದರೆ ಯಾವ ತಾಲ್ಲೂಕುಗಳನ್ನು ಇವರು ವಿಭಜನೆ ಮಾಡುತ್ತಾರೆ ಎಂದು ಇವರು ಪ್ರಶ್ನೆ ಮಾಡಿದರು.

ಈಗಾಗಲೇ ಈ ಹಿಂದೆ ಶಿವಮೊಗ್ಗ ಜಿಲ್ಲೆ ದೊಡ್ಡದಾಗಿತ್ತು. ದಾವಣಗೆರೆ ಜಿಲ್ಲೆಯನ್ನಾಗಿ ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ ಮಾಡಿದರು. ಆಗ ಶಿವಮೊಗ್ಗ ಜಿಲ್ಲೆಗೆ ಸೇರಿದ್ದ ಹೊನ್ನಾಳ್ಳಿ ಮತ್ತು ಚನ್ನಗಿರಿ ತಾಲ್ಲೂಕುಗಳ ದಾವಣಗೆರೆಗೆ ಸೇರಿಕೊಂಡವು. ಈಗಲೂ ಕೂಡ ಸಾಗರ ಜಿಲ್ಲೆಯಾದರೆ ಮತ್ತೆ ವಿಭಜನೆಯಾಗುತ್ತದೆ. ಒಂದು ಮೂರು ನಾಲ್ಕು ತಾಲ್ಲೂಕುಗಳನ್ನು ಇಟ್ಟುಕೊಂಡು ಜಿಲ್ಲೆ ಹೇಗೆ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದರು.

ಶಿವಮೊಗ್ಗ ಜಿಲ್ಲೆಯನ್ನು ವಿಭಜಿಸುವುದರಿಂದ ರಾಷ್ಟçಕವಿ ಕುವೆಂಪು, ಯು.ಆರ್.ಆನಂತಮೂರ್ತಿ, ಪಿ.ಲಂಕೇಶ್, ಜಿ.ಎಸ್.ಶಿವರುದ್ರಪ್ಪ ಮುಂತಾದ ಮಹಾನ್ ವ್ಯಕ್ತಿಗಳು ಕೂಡ ವಿಭಾಗವಾಗಿ ಹೋಗುತ್ತಾರೆ. ಮುಖ್ಯವಾಗಿ ಜಿಲ್ಲೆಯ ಪರಂಪರೆ ಇತಿಹಾಸವೇ ವಿಭಜಿಸಿದ್ದಂತಾಗುತ್ತದೆ. ಈ ಹಿನ್ನಲೆಯಲ್ಲಿ ಯಾವುದೇ ಕಾರಣಕ್ಕೂ ಸಾಗರ ತಾಲ್ಲೂಕನ್ನು ಜಿಲ್ಲೆಯನ್ನಾಗಿ ಮಾಡಬಾರದು. ಜಿಲ್ಲೆಯನ್ನಾಗಿ ಮಾಡಬೇಕು ಎಂದು ಹೋರಾಟ ಮಾಡುತ್ತಿರುವವರು ಕೂಡ ತಮ್ಮ ಬೇಡಿಕೆಯನ್ನು ಕೈಬಿಡಬೇಕು ಎಂದು ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜನಮೇಜಿರಾವ್, ಶಿವಣ್ಣ, ಕೆ.ಆರ್. ಕೃಷ್ಣಪ್ಪ ಟಿ.ಆರ್. ವಾಸಪ್ಪ ಗೌಡರು, ಶಂಕರನಾಯಕ ಇದ್ದರು.