ಶಿವಮೊಗ್ಗ: ರಾಜ್ಯದಲ್ಲಿರುವ ಯುವಜನತೆಗೆ ಕೌಶಲ್ಯ ತರಬೇತಿ ನೀಡಿ ಅವರಿಗೆ ಉದ್ಯೋಗ ಒದಗಿಸುವುದೇ ರಾಜ್ಯ ಸರ್ಕಾರದ ಮುಖ್ಯ ಉದ್ದೇಶ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ನಡೆಸುತ್ತಿರುವ ಅಡ್ವಾನ್ಸ್ಡ್ ಸ್ಕಿಲ್ ಡೆವಲಪ್ಮೆಂಟ್ ಕೇಂದ್ರಕ್ಕೆ ಭೇಟಿ ನೀಡಿ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ರಾಜ್ಯ ಸರ್ಕಾರದ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುವ

ಸ್ವಾಯತ್ತ ಸಂಸ್ಥೆಯಾಗಿದ್ದು, ಉದ್ಯೋಗದ ಅವಶ್ಯಕತೆಗಳಿಗೆ ತಕ್ಕಂತೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಮತ್ತು ಸ್ಪರ್ಧಾತ್ಮಕವಾಗಿ ಉಳಿಯಲು ಸಹಾಯ ಮಾಡುತ್ತದೆ. ಉದ್ಯೋಗಕ್ಕೆ ಅವಶ್ಯಕವಾದ ಕೌಶಲ್ಯಗಳನ್ನು ಒದಗಿಸುವುದರ ಮೂಲಕ ನಿರುದ್ಯೋಗ ಸಮಸ್ಯೆ ತೀರಿಸಲು ಪ್ರಯತ್ನಿಸುವುದು ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.

ಪ್ರಮುಖ ಯೋಜನೆಗಳಾದ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು. ಅಡ್ವಾನ್ಸ್ ಸ್ಕಿಲ್ ಅಕಾಡೆಮಿ ತರಬೇತಿ ಕೇಂದ್ರವನ್ನು ನಡೆಸುತ್ತಿರುವುದಕ್ಕೆ ಶಿವಮೊಗ್ಗ ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕೆ ಸಂಘವನ್ನು ಅಭಿನಂದಿಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಅಡ್ವಾನ್ಸ್ಡ್ ಸ್ಕಿಲ್ ಡೆವಲಪ್ಮೆಂಟ್ ಮತ್ತು ಬಾಷ್ ಕಂಪನಿ ಸಹಯೋಗದಲ್ಲಿ ಕೇಂದ್ರವು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ತರಬೇತಿಯಲ್ಲಿ ತೊಡಗಿರುವ ಕೇಂದ್ರವಾಗಿದ್ದು,

ತರಬೇತುದಾರರು, ತರಬೇತಿ ಪೂರೈಕೆದಾರರು, ತರಬೇತಿ ಪಡೆಯುವವರಿಗೆ ತರಬೇತಿ ಕೌಶಲ್ಯಗಳನ್ನು ಒದಗಿಸಿ ಉದ್ಯೋಗಾವಕಾಶಗಳಿಗಾಗಿ ನೋಂದಾಯಿಸಿಕೊಳ್ಳಬಹುದಾದ ಮೇಲೆ ಕೇಂದ್ರೀಕರಿಸಿದ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

ಅಡ್ವಾನ್ಸ್ ಸ್ಕಿಲ್ ಅಕಾಡೆಮಿ ತರಬೇತಿ ಕಾರ್ಯಗಾರವು ಈಗಾಗಲೇ ಮೂರನೇ ಬ್ಯಾಚಿನಲ್ಲಿ ನಡೆಯುತ್ತಿದ್ದು, ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಥೆಗಳಲ್ಲಿ ಉದ್ಯೋಗ ಸಿಕ್ಕಿದೆ ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಗಣೇಶ್ ಎಂ.ಅಂಗಡಿ, ವಿನೋದ್ ಕುಮಾರ್, ಪ್ರದೀಪ್ ವಿ.ಎಲಿ, ವಿನೋದ್ ಕುಮಾರ್ ಜೈನ್, ಸ್ಕಿಲ್ ಅಕಾಡೆಮಿ ಮ್ಯಾನೇಜರ್
ಕುಮಾರ್, ಮಾಜಿ ಕಾರ್ಪೊರೇಟರ್ ಎಚ್.ಸಿ.ಯೋಗೇಶ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್, ಮೆಗ್ಗಾನ್ ಆಸ್ಪತ್ರೆ ಮತ್ತು ಸಿಮ್ಸ್ ಮೆಡಿಕಲ್ ಸೂಪರಿಂಡೆಂಟ್ ತಿಮ್ಮಪ್ಪ, ಡಾ. ದಿನೇಶ್, ಅಥಣಿ ಮುರುಗೇಂದ್ರ ಪಾಟೀಲ್ ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.