ಶಿವಮೊಗ್ಗ: ಬಸವಣ್ಣನವರ ಆದರ್ಶಗಳು ಕಟ್ಟಡ, ಪ್ರತಿಮೆಗಳಲ್ಲಿ ಕಳೆದು ಹೋಗಬಾರದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.


ಅವರು ಇಂದು ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಸರಳವಾಗಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡುತ್ತಿದ್ದರು.


ಬಸವಣ್ಣನವರು ಅಸಮಾನತೆಯನ್ನು ಹೋಗಲಾಡಿಸಿದವರು. ಬಸವತತ್ವದ ಮೂಲಕ ಅಸ್ಪೃಶ್ಯತೆ ಮತ್ತು ಶೋಷಣೆಯ ವಿರುದ್ಧ ಧರ್ಮಕ್ರಾಂತಿಯನ್ನು ಮಾಡಿದವರು. ಅವರ ಆದರ್ಶಗಳನ್ನು ಪಾಲಿಸುವ ಮೂಲಕ ನಾವು ಅವರಿಗೆ ಗೌರವ ನೀಡಬೇಕು ಎಂದರು.


ಭಾರತ ಸರ್ಕಾರ ಲಂಡನ್‌ನಿನ ಲ್ಯಾಂಬೆಕ್ ನಗರದಲ್ಲಿ ಬಸವೇಶ್ವರರ ಪ್ರತಿಮೆಯನ್ನು ಸ್ಥಾಪಿಸಿತು. ಪ್ರಧಾನಿ ಮೋದಿಯವರು ಬಸವಣ್ಣನವರ ಪ್ರತಿಮೆಯನ್ನು ಲಂಡನ್‌ನಲ್ಲಿ ಸ್ಥಾಪಿಸುವ ಮೂಲಕ ಅವರ ಸಿದ್ದಾಂತಗಳನ್ನು ವಿಶ್ವದಲ್ಲಿಯೇ ಹರಡಿದ್ದಾರೆ. ಕರ್ನಾಟಕ ಸರ್ಕಾರ ಕೂಡ ಬಸವ ಕಲ್ಯಾಣದಲ್ಲಿ ಅಭಿವೃದ್ಧಿ ಮಾಡುವ ಮೂಲಕ ಬಸವಣ್ಣನವರಿಗೆ ಆಧ್ಯತೆ ನೀಡಿದೆ ಎಂದರು.


ಕಾರ್ಯಕ್ರಮದಲ್ಲಿ ಬಸವ ಕೇಂದ್ರದ ಶ್ರೀ ಮರುಳಸಿದ್ದೇಶ್ವರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಮೇಯರ್ ಸುನಿತಾಅಣ್ಣಪ್ಪ, ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಎಸ್.ದತ್ತಾತ್ರಿ, ಎನ್.ಜೆ.ರಾಜಶೇಖರ್, ಬಿ.ವೈ.ಅರುಣಾದೇವಿ, ಹೆಚ್.ಸಿ.ಯೋಗೀಶ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಅಪರ ಜಿಲ್ಲಾಧಿಕಾರಿ ಅನುರಾಧ, ಜಿ.ಪಂ.ಸಿಇಒ ಎಂ.ಎಲ್.ವೈಶಾಲಿ, ಜಿಲ್ಲಾರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಉಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!