ಶಿವಮೊಗ್ಗ : ಸೆ.೨೨ರಿಂದ ಜಾತಿಜನಗಣತಿ ಆರಂಭವಾಗಲಿದ್ದು, ಮರಾಠ ಸಮಾಜದವರು ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ಜಾತಿ ಕಾಲಂನಲ್ಲಿ ‘ಮರಾಠ’ ಎಂದೇ ನಮೂದಿಸಬೇಕು ಎಂದು ಜಿಲ್ಲಾ ಮರಾಠ ಸಂಘದ ಅಧ್ಯಕ್ಷ ಎಲ್. ಸತ್ಯನಾರಾಯಣ ರಾವ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮರಾಠ ಜಾತಿಯಲ್ಲೂ ಕೂಡ ಹಲವು ಉಪಪಂಗಡಗಳಿವೆ. ವೃತ್ತಿಗೆ ತಕ್ಕಂತೆ ಜಾತಿಯ ಹೆಸರುಗಳಿವೆ. ಆದರೆ ಜಾತಿ ಸಂಖ್ಯೆಯಲ್ಲಿ ನಮ್ಮದು ವ್ಯತ್ಯಾಸವಾಗುತ್ತಲೇ ಇರುತ್ತದೆ. ಉಪಪಂಗಡಗಳನ್ನು ನಮೂದಿಸುವುದರಿಂದ ಜನಸಂಖ್ಯೆಯಲ್ಲಿ ವ್ಯತ್ಯಾಸವಾಗುತ್ತದೆ. ಆದ್ದರಿಂದ ವಿವಿಧ ಹೆಸರುಗಳಿಂದ ಕರೆಯಲ್ಪಡುವ ‘ಮರಾಠ’ ಸಮಾಜ ಬಾಂಧವರು ಮುಂಬರುವ ಜಾತಿ ಜನಗಣತಿಯಲ್ಲಿ ಜಾತಿ ಕಾಲಂನಲ್ಲಿ ‘ಮರಾಠ’ ಎಂದೇ ನಮೂದಿಸಬೇಕು ಎಂದರು.

ಹಾಗೆಯೇ ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ಮಾತೃಭಾಷೆಯ ಕಾಲಂನಲ್ಲಿ ‘ಮರಾಠಿ’ ಎಂದು ನಮೂದಿಸಬೇಕು. ಇದೂವರೆಗೂ ನಾವು ಬಿಸಿಎಂ ೩ಬಿನಲ್ಲಿ ಇದ್ದೇವು. ಈಗ ಇದು ಆರ್ಥಿಕ ಸಮೀಕ್ಷೆಯ ಭಾಗವೂ ಆಗಿರುವುದರಿಂದ ಸಮಾಜದಲ್ಲಿ ಬಡವರೇ ಹೆಚ್ಚಾಗಿರುವುದರಿಂದ ನಮಗೆ ಬಿಸಿಎಂ ೨ಎ ನೀಡಬೇಕು ಎಂದರು.

ಕೆಲವರು ಕ್ಷತ್ರೀಯ ಮರಾಠ ಎಂದು ಬರೆಸುತ್ತಿದ್ದಾರೆ. ಹಾಗೆ ಮಾಡಬಾರದು, ಮರಾಠ ಎಂದೇ ನಮೂದಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮರಾಠ ಸಮಾಜದ ಮುಖಂಡರುಗಳಾದ ಪಿ.ಎಸ್. ಗಿರೀಶ್ರಾವ್ ಮಾನೆ, ವಿ.ಕೆ. ಕೃಷ್ಣೋಜಿರಾವ್ ಹಾರನಹಳ್ಳಿ,

ಚೂಡಾಮಣಿ, ಗೀತಾ ಸತೀಶ್, ಕವಿತಾ, ತುಕಾರಾಮ್, ನರಸಿಂಹರಾವ್, ಚಂದ್ರಶೇಖರ ರಾವ್, ರಾಮಕೃಷ್ಣ ಜಾದವ್, ಲಕ್ಷ್ಮಣ್ ಮೋರೆ, ಬಲರಾಮ್ ಮೋರೆ, ಅಶೋಕ್ರಾವ್, ಸಂತೋಷ್ ರಾವ್ ಸೇರಿದಂತೆ ಹಲವರಿದ್ದರು.