ಸಾಗರ : ನಮ್ಮ ದೇಶದಲ್ಲಿದ್ದು ಪಾಕಿಸ್ತಾನ ಜಿಂದಾಬಾದ್ ಎನ್ನುವವರು ದೇಶದ್ರೋಹಿಗಳು, ನಮ್ಮ ದೇಶದಲ್ಲಿ ಇರಲು ಅರ್ಹರಲ್ಲ. ಅಂತಹವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಖಾರವಾಗಿ ಹೇಳಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದ ಆವರಣದಲ್ಲಿ ಗುರುವಾರ ಪಶುಪಾಲನಾ ಇಲಾಖೆ ವತಿಯಿಂದ ಕೋಳಿಮರಿ, ಮೀನುಗಾರಿಕೆ ಇಲಾಖೆಯಿಂದ ಮೀನುಮರಿ ಮತ್ತು ವಿಕಲಚೇತನರಿಗೆ ತ್ರಿಚಕ್ರ ವಾಹನ, ಲ್ಯಾಪ್ಟಾಪ್ ವಿತರಿಸಿ ಅವರು ಮಾತನಾಡುತ್ತಾ, ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದು ಖಂಡನೀಯ. ಅಂತಹರಿಗೆ ಕಠಿಣ ಶಿಕ್ಷೆ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುತ್ತದೆ ಎಂದರು.
ರಾಜ್ಯದ ಮದ್ದೂರು ಮಂಡ್ಯ ಇನ್ನಿತರೆ ಕಡೆಗಳಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಕೆಲವು ಘಟನೆಗಳು ನಡೆದಿದೆ. ಎಲ್ಲಾ ಧರ್ಮದಲ್ಲೂ

ಕಿಡಿಗೇಡಿಗಳು ಇರುತ್ತಾರೆ. ಯಾರೋ ಒಬ್ಬಿಬ್ಬರು ಮಾಡುವ ಕಿಡಿಗೇಡಿತನದಿಂದ ಇಡೀ ಸಮಾಜಕ್ಕೆ ಕೆಟ್ಟಹೆಸರು ಬರುತ್ತದೆ. ಅಂತಹವರನ್ನು ಸಮಾಜ ಬಾಂಧವರು ದೂರ ಇರಿಸಬೇಕು. ಸಾಗರದಲ್ಲಿ ಸಹ ಮಕ್ಕಳಿಬ್ಬರು ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಉಗುಳಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮಕ್ಕಳ ತಾಯಿ ಕ್ಷಮಾಪಣೆ ಕೇಳಿದ್ದಾರೆ. ಮಕ್ಕಳ ಈ ಕೃತ್ಯದ ಹಿಂದೆ ಬೇರೆ ಯಾರದ್ದಾದರೂ ಕೈವಾಡ ಇದೆಯಾ ಎಂದು ತನಿಖೆ ನಡೆಸಲು ಪೊಲೀಸ್ ಉಪಾಧೀಕ್ಷಕರಿಗೆ ತಿಳಿಸಲಾಗಿದೆ. ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವವರು ಯಾವುದೇ ಧರ್ಮದಲ್ಲಿದ್ದರೂ ಅವರ ವಿರುದ್ದ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ಧರ್ಮಸ್ಥಳ ಪ್ರಕರಣದಲ್ಲಿ ಒಬ್ಬೊಬ್ಬರೆ ಆರೋಪಿಗಳು ಎಸ್ಐಟಿ ಬಲೆಗೆ ಬೀಳುತ್ತಿದ್ದಾರೆ. ಎಸ್.ಐ.ಟಿ. ತನಿಖೆಗೆ ಕೊಡಲು ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಎಸ್.ಐ.ಟಿ.ಗೆ ಕೊಟ್ಟಿದ್ದರಿಂದ ತಪ್ಪಿತಸ್ತರು ಯಾರೂ ಎನ್ನುವುದು ಗೊತ್ತಾಗಿ, ಧರ್ಮಸ್ಥಳದ ಧರ್ಮಾಧಿಕಾರಿಗಳ ಮೇಲೆ ಬಂದಿದ್ದ ಆರೋಪ ಹೋಗಿದೆ. ಧರ್ಮ ಉಳಿದಿದೆ. ಬಿಜೆಪಿಯವರು ಧರ್ಮವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದನ್ನು ಮೊದಲ ಬಿಡಬೇಕು ಎಂದರು.

ತಾಲ್ಲೂಕಿನಲ್ಲಿ ವಿಪರೀತ ಮಳೆಯಿಂದ ವಿವಿಧ ಇಲಾಖೆಗಳ ಮಾಹಿತಿ ಪ್ರಕಾರ ನೂರು ಕೋಟಿ ರೂ.ಗೂ ಹೆಚ್ಚಿನ ನಷ್ಟವಾಗಿದೆ. ಮುಖ್ಯಮಂತ್ರಿಗಳು ೫೦ ಕೋಟಿ ರೂ. ಕೊಡುವುದಾಗಿ ತಿಳಿಸಿದ್ದು, ಪಿಡಬ್ಲ್ಯೂಡಿ ಸಚಿವರು ೨೫ ಕೋಟಿ ರೂ. ಕೊಡುತ್ತಿದ್ದಾರೆ. ಹಿಂದಿನ ೧೨ ಕೋಟಿ ರೂ. ನಮ್ಮ ಬಳಿ ಇದ್ದು ಹಾಳಾದ ರಸ್ತೆ, ಸೇತುವೆಗಳನ್ನು ರಿಪೇರಿ ಮಾಡಲಾಗುತ್ತದೆ. ಮಳೆಗಾಲದ ನಂತರ ತಾಲ್ಲೂಕಿನ ರಸ್ತೆ ಅಭಿವೃದ್ದಿ ಕೆಲಸ ನಡೆಯಲಿದ್ದು, ಮುಂದಿನ ವಾರ ಮಾರ್ಕೇಟ್ ರಸ್ತೆ ಅಗಲೀಕರಣಕ್ಕೆ ಚಾಲನೆ ಸಿಗುತ್ತದೆ. ನಗರಸಭೆಗೂ ವಿಶೇಷ ಅನುದಾನ ತರುವುದಾಗಿ ತಿಳಿಸಿದ ಅವರು, ನೆರೆಯಿಂದ ಉಂಟಾದ ಹಾನಿಯನ್ನು ಅಧಿಕಾರಿಗಳು ಸ್ಥಳಕ್ಕೆ ಹೋಗಿ ತಯಾರಿಸಿ ವರದಿ ನೀಡಿದ್ದಾರೆ. ಒಂದೊಮ್ಮೆ ವರದಿ ನೀಡುವಲ್ಲಿ ಲೋಪವಾದರೆ ಅಂತಹ ಅಧಿಕಾರಿಗಳ ವಿರುದ್ದ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಪ್ರಮುಖರಾದ ಗಣಪತಿ ಮಂಡಗಳಲೆ, ಕಲಸೆ ಚಂದ್ರಪ್ಪ, ಅನಿತಾ ಕುಮಾರಿ, ಚೇತನರಾಜ್, ಡಿ.ದಿನೇಶ್, ಕೆ.ಹೊಳೆಯಪ್ಪ, ಕಿರಣ್ ದೊಡ್ಮನೆ ಇನ್ನಿತರರು ಇದ್ದರು.