
ಶಿವಮೊಗ್ಗ: ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವುದು ಬ್ಯಾಂಕಿಂಗ್ ಕ್ಷೇತ್ರದ ಪ್ರಾಥಮಿಕ ಆದ್ಯತೆ ಎಂದು ಬ್ಯಾಂಕ್ ಆಫ್ ಮಹಾರಾಷ್ಟ್ರದ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ವರರಾವ್ ಅಭಿಪ್ರಾಯಪಟ್ಟರು.
ನಗರದ ನೆಹರು ರಸ್ತೆಯ ಮೂರನೇ ತಿರುವಿನಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶಾದ್ಯಂತ ಬ್ಯಾಂಕ್ ಆಫ್ ಮಹಾರಾಷ್ಟ ಜನರಿಗೆ ಉತ್ತಮ ಸೇವೆ ನೀಡುತ್ತ ಪ್ರಗತಿಯತ್ತ ಸಾಗುತ್ತಿದೆ. ದಕ್ಷಿಣ ಭಾರತದ ಪ್ರದೇಶದಲ್ಲಿಯೂ ಶಾಖೆಗಳ ವಿಸ್ತರಣೆ ಉದ್ದೇಶದಿಂದ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಭಾರತ ದೇಶದಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರದ 1834 ಶಾಖೆಗಳನ್ನು ಹೊಂದಿದ್ದು, ರಾಜ್ಯದಲ್ಲಿ ೫೬ ಶಾಖೆಗಳಿವೆ. ಇದೀಗ ರಾಜ್ಯದಲ್ಲಿ 57ನೇ ಹಾಗೂ ಶಿವಮೊಗ್ಗ ಮೊದಲ ಶಾಖೆ ಆರಂಭಗೊಂಡಿದೆ. ಪರಿಣಾಮಕಾರಿಯಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.
ಬ್ಯಾಂಕ್ ಆಫ್ ಮಹಾರಾಷ್ಟ್ರ ವಲಯ ವ್ಯವಸ್ಥಾಪಕಿ ಅನುಸೂಯರಾವ್ ಮಾತನಾಡಿ, ಬ್ಯಾಂಕಿಂಗ್ ಸೇವಾ ಚಟುವಟಿಕೆಗಳನ್ನು ಕರ್ನಾಟಕ ರಾಜ್ಯದಲ್ಲಿ ವಿಸ್ತರಿಸುವ ಆಶಯದಿಂದ ಶಿವಮೊಗ್ಗದಲ್ಲಿ ಮೊದಲ ಶಾಖೆ ಆರಂಭಿಸಲಾಗಿದೆ. ಗ್ರಾಹಕರೊಂದಿಗೆ ಉತ್ತಮ ಭಾಂದವ್ಯ ಕಾಪಾಡಿಕೊಂಡು ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಗಣಪತಿ ನಾಯ್ಕ್ ಮಾತನಾಡಿ, ವ್ಯವಸ್ಥಿತವಾಗಿ ಬ್ಯಾಂಕಿಂಗ್ ಕ್ಷೇತ್ರದ ಎಲ್ಲ ಸೌಲಭ್ಯಗಳನ್ನು ಜನರಿಗೆ ಒದಗಿಸುವ ಕೆಲಸ ಆಗಬೇಕು. ಬ್ಯಾಂಕಿಂಗ್ ವಹಿವಾಟು ವಿಸ್ತರಣೆ ಜತೆಯಲ್ಲಿ ಗ್ರಾಹಕರು ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವ ಅಗತ್ಯ ಆರ್ಥಿಕ ಸಹಕಾರ, ಸಲಹೆ ಮತ್ತು ಮಾರ್ಗದರ್ಶನ ನೀಡುವ ಕೆಲಸ ಬ್ಯಾಂಕ್ಗಳಿಂದ ಆಗಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಬ್ಯಾಂಕ್ ಆಫ್ ಮಹಾರಾಷ್ಟ್ರ ಶಿವಮೊಗ್ಗ ಬ್ರಾಂಚ್ ಮ್ಯಾನೇಜರ್ ಪಿ.ಪಾರ್ಥೀಬನ್, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ ವ್ಯವಸ್ಥಾಪಕ ಸಮನ್ವಯ ಕಾಶಿ, ಸಂತೋಷ್, ಬಿ.ಎನ್.ವಿಜಯ್, ಬಿ.ಎನ್.ಅಶೋಕ್ ಮತ್ತಿತರರು ಹಾಜರಿದ್ದರು.