ಶಿವಮೊಗ್ಗ : ಮುಂಬರುವ ಗಣಪತಿ ಮೆರವಣಿಗೆ ಮತ್ತು ಈದ್ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಶಾಂತಿ ಕಾಪಾಡಲು ಮತ್ತು ಎಲ್ಲಾ ಧರ್ಮದವರು ಒಟ್ಟಾಗಿ ಸಾಮರಸ್ಯದಿಂದ ಹಬ್ಬ ಆಚರಿಸುವ ದೃಷ್ಠಿಯಿಂದ ನಮ್ಮ ನಡೆ-ಶಾಂತಿಯ ಕಡೆ ಸಮಿತಿಯು ಸೆ.೪ರಂದು ಮಧ್ಯಾಹ್ನ ೪ ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಸೌಹಾರ್ಧವೇ ಹಬ್ಬ ಎಂಬ ಶಾಂತಿಸಭೆಯನ್ನು ಹಮ್ಮಿಕೊಂಡಿದೆ ಎಂದು ವಕೀಲ ಕೆ.ಪಿ. ಶ್ರೀಪಾಲ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ೪ ವರ್ಷಗಳಿಂದ ನಮ್ಮ ಸಮಿತಿಯು ಶಿವಮೊಗ್ಗದಲ್ಲಿ ಶಾಂತಿ ನೆಲೆಸುವ ಹಿನ್ನಲೆಯಲ್ಲಿ ಪ್ರಮುಖವಾಗಿ ಎಲ್ಲಾ ಧರ್ಮದವರ ಹಬ್ಬಗಳನ್ನು ಸಾಮರಸ್ಯದಿಂದ ಒಟ್ಟಾಗಿ ಆಚರಿಸಲು ಅನುಕೂಲವಾಗುವಂತೆ ಶಾಂತಿನಡೆಗೆ, ಸೌಹಾರ್ಧ

ಹಬ್ಬ ಎಂಬ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಈ ಬಾರಿಯೂ ಕೂಡ ಈ ಶಾಂತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸೆ.೪ರಂದು ಮಧ್ಯಾಹ್ನ ೪ಗಂಟೆಗೆ ಗೋಪಿವೃತ್ತದಲ್ಲಿ ಮಾನವ ಸರಪಳಿಯನ್ನು ರಚಿಸಲಾಗುವುದು. ಎಲ್ಲಾ ಧರ್ಮದ ಗುರುಗಳು ಇದರಲ್ಲಿ ಭಾಗವಹಿಸುತ್ತಾರೆ. ನಂತರ ಅಂಬೇಡ್ಕರ್ ಭವನದಲ್ಲಿ ಶಾಂತಿಸಭೆ ನಡೆಯಲಿದೆ. ಬಸವ ಶ್ರೀಗಳು, ಬೆಕ್ಕಿನ ಕಲ್ಮಠ ಶ್ರೀಗಳು, ಫಾದರ್ ಡಿಸೋಜಾ, ಜಾಮೀಯಾ ಮಸೀದಿಯ ಗುರುಗಳು, ಶಾ ಅಬ್ದುಲ್ ಹಬೀಬ್, ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಸೇರಿದಂತೆ ಎಲ್ಲಾ ಧರ್ಮದ ಸ್ವಾಮೀಜಿ, ಫಾದರ್, ಮೌಲಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.

ಈ ಕಾರ್ಯಕ್ರಮದ ಮೂಲಕ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ. ಗಾಯಕ ಕೆ. ಯುವರಾಜ್, ಹಿಂದೂಸ್ತಾನಿ ಗಾಯಕ ಇಮ್ತಿಯಾಜ್ ಸುಲ್ತಾನ್ ಅವರಿಂದ ಗಾಯನ, ರಂಗಬೆಳಕು ತಂಡದಿಂದ ಹಾಡು, ರಂಗಗೀತೆಗಳನ್ನು ಏರ್ಪಡಿಸಲಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿಯ ಮುಖಂಡ ಎಂ. ಗುರುಮೂರ್ತಿ ಮಾತನಾಡಿ, ಶಿವಮೊಗ್ಗ ಅತ್ಯಂತ ಸೂಕ್ತ ಪ್ರದೇಶವಾಗಿತ್ತು. ಎಲ್ಲಾ

ಸೌಲಭ್ಯಗಳಿದ್ದರೂ ಇಲ್ಲಿ ಗಲಾಟೆಗಳು ನಡೆಯುತ್ತವೆ ಎಂಬ ಕಾರಣಕ್ಕೆ ಬಂಡವಾಳಗಾರರು ಬರುತ್ತಿರಲಿಲ್ಲ ಹಾಗಾಗಬಾರದು. ನಮ್ಮ ನಡೆ ಶಾಂತಿಯ ಕಡೆಗೆ ಎಂಬ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದರಿಂದ ಒಂದಿಷ್ಟು ಶಾಂತಿ ನೆಲೆಸಿದೆ. ಗಣೇಶ್-ಈದ್ ಮಿಲಾದ್ ಹಬ್ಬಗಳು ಶಾಂತಿಯುತವಾಗಿ ನಡೆಯಲಿ ಎಂದರು.
ಪ್ರಮುಖರಾದ ಕಿರಣ್ಕುಮಾರ್, ಪಾಲಾಕ್ಷಿ, ನಾಗರಾಜ್ ಕಂಕಾರಿ, ಮಹಮ್ಮದ್ ಹುಸೇನ್, ಅಬ್ದುಲ್ ವಾಹಬ್, ಅಫ್ತಾಫ್ ಪರ್ವೀಜ್, ಹರಿಗೆ ರವಿ, ಹುಸೇನ್, ಜಗದೀಶ್, ರಾಘವೇಂದ್ರ, ಚಂದ್ರಪ್ಪ ಇದ್ದರು.