ಶಿವಮೊಗ್ಗ: ಕೇಂದ್ರ ಸರ್ಕಾರವು ಆನ್ಲೈನ್ ಬೆಟ್ಟಿಂಗ್ ಹಾಗೂ ಗೇಮಿಂಗ್ ಆ್ಯಪ್ಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ, ರಾಜ್ಯದ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್. ಅರುಣ್ ರವರು ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಡಿ.ಎಸ್.ಅರುಣ್ ರವರು ವಿಧಾನ ಪರಿಷತ್ತಿಗೆ ಆಯ್ಕೆಯಾದ ತಕ್ಷಣದ ಮೊದಲ ಅಧಿವೇಶನದಲ್ಲಿ ಹಾಗೂ ಬಹಳಷ್ಟು ಬಾರಿ ಈ ವಿಷಯವನ್ನು ರಾಜ್ಯದ ಗೃಹ ಸಚಿವರಲ್ಲಿ ಪ್ರಸ್ತಾಪಿಸಿ, ಆನ್ಲೈನ್ ಬೆಟ್ಟಿಂಗ್ ಯುವಕರ ಜೀವನದಲ್ಲಿ ಅಪಾಯಕಾರಿ ಪರಿಣಾಮ ಬೀರುತ್ತಿದೆ. ಕುಟುಂಬಗಳ

ಆರ್ಥಿಕ ಹಿತಾಸಕ್ತಿ ಅಸ್ತವ್ಯಸ್ತವಾಗುತ್ತಿದೆ. ಇಂತಹ ದುಷ್ಪರಿಣಾಮಗಳಿಂದ ಸಮಾಜವನ್ನು ಕಾಪಾಡುವುದು ಸರ್ಕಾರದ ಹೊಣೆಗಾರಿಕೆ ಎಂದು ಅಭಿಪ್ರಾಯಪಟ್ಟರು.


ಮುಂದುವರೆದು ಯುವ ಪೀಳಿಗೆಯ ಭವಿಷ್ಯವನ್ನು ಸುರಕ್ಷಿತಗೊಳಿಸುವ ದೃಷ್ಟಿಯಿಂದ, ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಸಾವಿರಾರು ಸಾವು,ನೋವುಗಳ ಪ್ರಕರಣಗಳ ಕುರಿತು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕೆಂದು ಗೃಹ ಇಲಾಖೆಯ ಅಧಿಕಾರಿಗಳಿಗೆ ಮಾನ್ಯ ಶಾಸಕರು ಸಲಹೆ ನೀಡಿದ್ದರು. ಇತ್ತೀಚೆಗೆ ಕೇಂದ್ರ ಸರ್ಕಾರ ಆನ್ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಆಪ್ಗಳ ಮೇಲೆ ನಿರ್ಬಂಧ

ಹೇರಿರುವ ನಿರ್ಧಾರವನ್ನು ನಮ್ಮ ರಾಜ್ಯದಲ್ಲಿಯೂ ಸಂಪೂರ್ಣವಾಗಿ ಜಾರಿಗೊಳಿಸುವ ಜವಾಬ್ದಾರಿ ರಾಜ್ಯದ ಗೃಹ ಇಲಾಖೆಯ ಮೇಲಿದೆ ಎಂದು ಡಿ. ಎಸ್. ಅರುಣ್ ರವರು ಹೇಳಿದ್ದಾರೆ. ಆನ್ಲೈನ್ ಬೆಟ್ಟಿಂಗ್, ಗೇಮಿಂಗ್ ಹಾಗೂ ಇತರ ಮೋಸಮಯ ಆಕರ್ಷಣೆಗಳಿಂದ ದೂರವಿದ್ದು, ಶಿಕ್ಷಣ, ಕೌಶಲ್ಯ ಮತ್ತು ಸಕಾರಾತ್ಮಕ ಚಟುವಟಿಕೆಗಳತ್ತ ಗಮನ ಹರಿಸುವುದೇ ಯುವಕರ ಭವಿಷ್ಯಕ್ಕೆ ಶ್ರೇಯಸ್ಕರ ಎಂದು ಯುವಕರಿಗೆ ಮಾನ್ಯ ಶಾಸಕರು ಮನವಿ ಮಾಡಿದರು.