ಶಿವಮೊಗ್ಗ : ಶಾಂತಿ -ಸೌಹಾರ್ದತೆಗೆ ಇನ್ನೊಂದು ಹೆಸರು ಸೋಮಿನಕೊಪ್ಪ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಹೇಳಿದರು.
ಅವರು ಇಂದು ಸೋಮಿನಕೊಪ್ಪದಲ್ಲಿ ಗೌರಿ-ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಜಾತಿ, ಧರ್ಮ ಹಿಡಿದು ಹಲವರು ಕೆಸರೆರಚಾಟ ನಡೆಸುತ್ತಿರುವ ನಡುವೆ ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸೋಮಿನಕೊಪ್ಪದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಸಹೋದರರಂತೆ ಬಾಳ್ವೆ ನಡೆಸುತ್ತಿರುವುದು ಸಂತಸ ತಂದಿದೆ. ಈ ಸಹೋದರತ್ವವನ್ನು ಹೀಗೆ ಉಳಿಸಿ, ಬೆಳೆಸಿಕೊಂಡು ಹೋಗುವ ಮೂಲಕ ಇತರರಿಗೆ ಮಾದರಿಯಾಗಿ ಎಂದರು.
ಸಾರ್ವಜನಿಕವಾಗಿ ಹಬ್ಬಗಳನ್ನು ಆಚರಣೆ ಮಾಡುವಾಗ ಸಾರ್ವಜನಿಕರ ಹಿತ ದೃಷ್ಟಿಯಿಂದ ಕೆಲವು ನಿರ್ಬಂಧನೆಗಳನ್ನು ಹಾಕುವುದು ಸೂಕ್ತವಾಗಿರುತ್ತದೆ ಮತ್ತು ಅನಿವಾರ್ಯವಾಗಿರುತ್ತದೆ ಎನ್ನುವುದನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದರು.
ಸಾರ್ವಜನಿಕರು ಹಬ್ಬ ಆಚರಿಸುವಾಗ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವುದು ಪೊಲೀಸ್ ಇಲಾಖೆಯ ಮೂಲ ಉದ್ದೇಶವಾಗಿರುತ್ತದೆ. ಆ ನಿಟ್ಟಿನಲ್ಲಿ ಮಾತ್ರ ಕೆಲವು ಸೂಚನೆಗಳನ್ನು ನೀಡಿ, ನಿಭಂದನೆಗಳನ್ನು ವಿಧಿಸಲಾಗುತ್ತದೆಯೇ ಹೊರತು, ಸಾರ್ವಜನಿಕರಿಗೆ ತೊಂದರೆ ನೀಡುವ ಯಾವುದೇ ಉದ್ದೇಶವಿರುವುದಿಲ್ಲ ಎಂದರು.
ಇನ್ನು, ಪ್ರತಿ ಗಣಪತಿ ಪೆಂಡಾಲ್ ರವರು, ನಿಮ್ಮ ಸುರಕ್ಷತೆಯ ದೃಷ್ಠಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಿರಿ. ಇದರಿಂದ ಅಪರಾಧಿಕ ಕೃತ್ಯಗಳು ಆಗದಂತೆ ಮತ್ತು ಮುಂಜಾಗ್ರತಾ ಕ್ರಮ ಕೈಗೊಂಡಂತೆ ಆಗುತ್ತದೆ. ಸುರಕ್ಷತೆಯ ದೃಷ್ಠಿಯಿಂದ ಇದು ಮುಖ್ಯವಾದ ಕ್ರಮವಾಗಿರುತ್ತದೆ ಎಂದರು.
ಸಭೆಯಲ್ಲಿ ಡಿವೈಎಸ್’ಪಿ, ಎಎಸ್ಪಿ, ವಿನೋಬನಗರ ಪೊಲೀಸ್ ಠಾಣೆಯ ಸಿಪಿಐ ಸಂತೋಷ್ ಕುಮಾರ್, ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.