ಶಿವಮೊಗ್ಗ: ನಗರದ ಗೋಪಾಳಗೌಡ ಬಡಾವಣೆಯ ಅನುಪಿನಕಟ್ಟೆ ರಸ್ತೆಯ ಪೊದಾರ್ ಇಂಟರ್ನ್ಯಾಷನಲ್ ಸ್ಕೂಲ್ ಮಕ್ಕಳು ಈಚೆಗೆ ಕೃಷಿ ಕಾಲೇಜಿಗೆ ಭೇಟಿ ನೀಡಿದ್ದರು.

8ನೇ ತರಗತಿಯ ವಿದ್ಯಾರ್ಥಿಗಳು ಕೃಷಿ ಕಾಲೇಜಿಗೆ ಭೇಟಿ ನೀಡುವ ಮೂಲಕ ವ್ಯವಸಾಯದಲ್ಲಿ ನೇರವಾಗಿ ಅನುಭವ ಪಡೆದರು. ಈ ಸಂದರ್ಭದಲ್ಲಿ ಅವರು ವಿವಿಧ ಕೃಷಿ ವಿಧಾನಗಳು ಮತ್ತು ತಾಂತ್ರಿಕ ಪ್ರಕ್ರಿಯೆಗಳ ಬಗ್ಗೆ ಮೌಲ್ಯಯುತ ಜ್ಞಾನವನ್ನು ಪಡೆದರು. ರೈತರು ಹೇಗೆ ನೆಲವನ್ನು ಸಿದ್ಧಪಡಿಸಿ, ಬೀಜವನ್ನು ಆಯ್ಕೆಮಾಡಿ, ಬಿತ್ತನೆ ಮಾಡುವ ಜತೆಗೆ ನೀರಾವರಿ ವಿಧಾನಗಳನ್ನು ಅನುಸರಿಸಿ, ಕೊಯ್ಲು ಮಾಡುತ್ತಾರೆ ಎಂಬುದನ್ನು ಕೃಷಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಸಿ. ಎಂ ಕಲ್ಲೇಶ್ವರಸ್ವಾಮಿ ವಿವರಿಸಿದರು.

ಮೀನುಗಾರಿಕಾ ವಿಭಾಗಕ್ಕೂ ಭೇಟಿ ನೀಡಿ, ಮೀನುಗಾರಿಕೆ ತಂತ್ರಗಳು, ಸಂತಾನೋತ್ಪತ್ತಿ ವಿಧಾನಗಳು ಹಾಗೂ ನೀರಿನ ನಿರ್ವಹಣೆ ಕ್ರಮಗಳನ್ನು ಅವಲೋಕಿಸಿದರು. ಜೊತೆಗೆ, ತಂಬಾಕು ಬೆಳೆ ಬೆಳೆಯುವ ವಿಧಾನ, ಬೆಳವಣಿಗೆಯ ಚಕ್ರ ಒಣಗಿಸುವ ಪ್ರಕ್ರಿಯೆ ಹಾಗೂ ಆ ಬೆಳೆ ಆರ್ಥಿಕವಾಗಿ ಹೊಂದಿರುವ ಮಹತ್ವಗಳ ಬಗ್ಗೆ ತಿಳಿದುಕೊಂಡರು.

ಈ ಭೇಟಿಯಿಂದ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಕಲಿತಿದ್ದ ಜ್ಞಾನಕ್ಕೆ ಪೂರಕವಾದ ಪ್ರಾಯೋಗಿಕ ಅರಿವು ದೊರಕಿತು. ಕೃಷಿಯಲ್ಲಿ ಇರುವ ಪರಿಶ್ರಮ, ಕೌಶಲ್ಯ ಹಾಗೂ ಸಮರ್ಪಣೆಯನ್ನು ಅವರು ಮೆಚ್ಚುವ ಮನೋಭಾವವೂ ಬೆಳೆಯಿತು. ವಿದ್ಯಾರ್ಥಿಗಳು ಕುತೂಹಲ ಹಾಗು ಅಸಕ್ತಿಯಿಂದ ಅನೇಕ ಪ್ರಶ್ನೆಗಳನ್ನು ಕೇಳುವ ಮೂಲಕ ವಿಷಯ ಸಂಗ್ರಹಿಸಿದರು.

ವಿದ್ಯಾರ್ಥಿಗಳ ಕುತೂಹಲ ಕಂಡು ಪ್ರಾಂಶುಪಾಲರಾದ ಡಾ. ಸರೋಜಾ ಬಿ ಶಿಳ್ಳಿನ್ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಯುವರಾಜ್ ಪಾಟೀಲ್, ಸಹ ಶಿಕ್ಷಕರಾದ ಶ್ವೇತಾ ಎಂ.ಎಸ್. ಹಾಗೂ ಪ್ರಶಾಂತ್ ಉಪಸ್ಥಿತರಿದ್ದರು.