ಶಿವಮೊಗ್ಗ : ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘದವತಿಯಿಂದ ಆ.16ರಂದು ಸಂಜೆ 5 ಗಂಟೆಗೆ ಕೃಷಿನಗರದಲ್ಲಿರುವ ತರಳಬಾಳು ಹಾಸ್ಟೆಲ್ ಹಿಂಭಾಗದಲ್ಲಿ “ಸಮರ್ಪಣೆ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಗೆ ಅಭಿನಂದನೆ, ಬಿ.ಎಸ್. ಯಡಿಯೂರಪ್ಪನವರ ವೀರಶೈವ ಉಚಿತ ವಿದ್ಯಾರ್ಥಿನಿಲಯ ಹಾಗೂ ಮೈತ್ರಿದೇವಿ ಬಿ.ಎಸ್. ಯಡಿಯೂರಪ್ಪನವರ ವೀರಶೈವ ವಿದ್ಯಾರ್ಥಿನಿಲಯ ಮತ್ತು ಸಂಘದ ಆಡಳಿತ ಕಛೇರಿ ಉದ್ಘಾಟನೆ ಪ್ರತಿಭಾ ಪುರಸ್ಕಾರ, ದಾನಿಗಳು ಮತ್ತು ಸಮಾಜ ಬಾಂಧವರಿಗೆ ಕೃತಜ್ಞತೆ ಹಾಗೂ ಶ್ರೀಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಅಕ್ಕಿ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ ಎಂದರು.

ತೋಂಟದಾರ್ಯ ಮಠದ ಶ್ರೀ ನಿಜಗುಣ ಪ್ರಭುತೋಂಟದಾರ್ಯ ಸ್ವಾಮೀಜಿ, ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವ ಕೇಂದ್ರದ ಶ್ರೀ ಡಾ. ಬಸವಮರಳಸಿದ್ಧ ಸ್ವಾಮೀಜಿ ಸಾನಿಧ್ಯವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿದ್ಯಾರ್ಥಿನಿಲಯವನ್ನು, ಸಂಸದ ಬಿ.ವೈ. ರಾಘವೇಂದ್ರ ಆಡಳಿತ ಕಛೇರಿ ಉದ್ಘಾಟಿಸಲಿದ್ದಾರೆ. ಶಾಸಕರಾದ ಬಿ.ಕೆ. ಸಂಗಮೇಶ್ವರ್, ಎಸ್.ಎನ್. ಚನ್ನಬಸಪ್ಪ, ಬಿ.ವೈ. ವಿಜಯೇಂದ್ರ, ಸಮಾಜದ ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಗಣ್ಯರು, ಸಾಧಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸಮಾಜದ 200 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು. ಈ ಸಮಾರಂಭದಲ್ಲಿ 2000ಕ್ಕೂ ಹೆಚ್ಚು ಸಮಾಜ ಬಾಂಧವರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
2003ರ ಮಾರ್ಚ್ 21ರಂದು ಆರಂಭಗೊಂಡ ಸಂಘ 22 ವರ್ಷಗಳನ್ನು ಪೂರೈಸಿ, ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸಂಘ ಮುನ್ನಡೆಯುತ್ತಿದೆ. 2011ರಲ್ಲಿ ನಗರದ ಚನ್ನಮುಂಬಾಪುರದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿನಿಲಯವನ್ನು ಸುಮಾರು 50 ವಿದ್ಯಾರ್ಥಿಗಳಿಗೆ ಬಾಡಿಗೆ ಕಟ್ಟಡದಲ್ಲಿ ಆರಂಭಿಸಲಾಯಿತು ಎಂದರು.

ಮಲೆನಾಡಿನ ಸಮಾಜದ ಬಡ ವಿದ್ಯಾರ್ಥಿಗಳ ಬದುಕಿಗೆ ಹೊಸ ಆಶಯದ ಚಿಂತನೆಯ ಸಂದರ್ಭದಲ್ಲಿ ಉಚಿತ ವಿದ್ಯಾರ್ಥಿನಿಲಯಕ್ಕೆ ಹಾಗೂ ಆಡಳಿತ ಕಛೇರಿಗೆ ತಮ್ಮ ಕುಟುಂಬದ ನೆನಪಿನಲ್ಲಿ 10 ಸಾವಿರ ಚದರ ಅಡಿಯಷ್ಟು ಜಾಗವನ್ನು ಉದಾರವಾಗಿ ಸಂಘದ ಹೆಸರಿಗೆ ಎಸ್.ಎಸ್. ಜ್ಯೋತಿಪ್ರಕಾಶ್ರವರು ದಾನ ಮಾಡಿದ್ದಾರೆ. ಸಮಾಜದ ಚುನಾಯಿತ ಪ್ರತಿನಿಧಿಗಳ ಸಹಕಾರ ಪಡೆದು, ಸಂಘದ ಸ್ವಂತ ಕಟ್ಟಡ ಮತ್ತು ಉಚಿತ ವಿದ್ಯಾರ್ಥಿನಿಲಯವನ್ನು ರಾಗಿಗುಡ್ಡದಲ್ಲಿ 2011ರಲ್ಲಿ ನಿರ್ಮಿಸಲಾಯಿತು ಎಂದರು.

ಉಚಿತ ವಿದ್ಯಾರ್ಥಿನಿಲಯದಲ್ಲಿ 2011ರಿಂದ ಪಿಯುಸಿ, ಪದವಿ ಹಾಗೂ ಉನ್ನತ ಶಿಕ್ಷಣ ಪಡೆದ ಪ್ರತಿವರ್ಷ 200 ವಿದ್ಯಾರ್ಥಿಗಳಂತೆ ಈಗಾಗಲೇ ಸುಮಾರು 1200 ವಿದ್ಯಾರ್ಥಿಗಳಿಗೆ ಕಳೆದ 14 ವರ್ಷಗಳಿಂದ ಉಚಿತ ದಾಸೋಹ, ವಸತಿ ಸೌಲಭ್ಯ ನೀಡಲಾಗಿದೆ. ಇಲ್ಲಿ ಸೌಲಭ್ಯ ಪಡೆದವರು ಬಹಳಷ್ಟು ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದರು.
ಕೃಷಿನಗರದಲ್ಲಿ ಸೂಡಾದಿಂದ ನಿವೇಶನ ಪಡೆದು, 2 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಮಹಡಿಯ 25 ಕೊಠಡಿಗಳುಳ್ಳ ಮಹಿಳಾ ವಿದ್ಯಾರ್ಥಿನಿಲಯಕ್ಕೆ 2020ರಲ್ಲಿ ಕಾಮಗಾರಿ ಆರಂಭಿಸಿ 2025ರಲ್ಲಿ ಕಾಮಗಾರಿ ಮುಗಿಸಿ ಈಗ ಉದ್ಘಾಟನೆಗೆ ಸಜ್ಜಾಗಿದೆ ಎಂದರು.

ಇದರ ಜೊತೆಗೆ ಕಾರ್ಪೋರೇಟ್ ಮಾದರಿಯ ಕಛೇರಿ ಹಾಗೂ ಅತಿಥಿಗೃಹ ನಿರ್ಮಿಸಲಾಗಿದೆ. ಪ್ರತಿವರ್ಷವೂ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಸ್ಕೂಲ್ ಬ್ಯಾಗ್, ಶೂ, ಪುಸ್ತಕ-ನೋಟ್ ಪುಸ್ತಕಗಳನ್ನು ವಿತರಿಸಿ, ಪೋಷಕರ ಆರ್ಥಿಕ ಹೊರೆ ಕಡಿಮೆ ಮಾಡುವ ಮೂಲಕ ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.
ವಿದ್ಯಾರ್ಥಿನಿಲಯಗಳ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ ಸಹಕಾರ ಅನನ್ಯವಾಗಿದ್ದು, ಇದರ ಜೊತೆಗೆ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘ, ಸಮಾಜ ಬಾಂಧವರು, ಅಧಿಕಾರಿ ನೌಕರರ ಸಹಕಾರವನ್ನು ಸಂಘ ಸದಾ ಸ್ಮರಿಸುತ್ತದೆ ಹಾಗೂ ಅಭಿನಂದಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಸಿ.ಜಿ. ಪರಮೇಶ್ವರಪ್ಪ, ನಿರ್ದೇಶಕರಾದ ಕೆ. ಮೋಹನ್ಕುಮಾರ್, ಕೆ. ಪ್ರಸನ್ನ, ಕೆ.ವಿ. ಲೋಕೇಶಪ್ಪ, ಎ.ಜಿ. ಸಿದ್ಧಣ್ಣ, ಡಾ. ಟಿ.ಹೆಚ್. ನಟರಾಜ, ಎನ್.ಎಸ್. ಲವಕುಮಾರಸ್ವಾಮಿ, ಹೆಚ್.ಎಸ್. ಸುರೇಶ್ ಇನ್ನಿತರರು ಉಪಸ್ಥಿತರಿದ್ದರು.