ಶಿವಮೊಗ್ಗ: ಜಿಲ್ಲೆಯ ಯುವಕರಲ್ಲಿ ದೇಶಾಭಿಮಾನ, ಸೈನ್ಯಕ್ಕೆ ಸೇರುವ ಪ್ರೇರಣೆ ನೀಡುವ ಉದ್ದೇಶದಿಂದ ಈಗಾಗಲೆ ಯುದ್ದ ಟ್ಯಾಂಕರ್ನ್ನು ತಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ ಸ್ಥಾಪಿಸಲಾಗಿದೆ. ಈಗ ಭಾರತೀಯ ವಾಯು ಸೇನೆ ಬಳಸುತ್ತಿದ್ದ ವಿಮಾನ ಕೂಡ ಇಂದು ನಗರಕ್ಕೆ ಆಗಮಿಸಿದೆ.

ಅದರ ಜೊತೆಗೆ ವಾಯುಸೇನೆ ಅಧಿಕಾರಿಗಳೂ ಬಂದಿದ್ದು, ಶೀಘ್ರದಲ್ಲೇ ಅದು ಜೋಡಣೆಗೊಂಡು ಸ್ಥಾಪನೆಯಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಫ್ರೀಡಂ ಪಾರ್ಕ್ನಲ್ಲಿ ಮಾತನಾಡಿದ ಅವರು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಕಿರಣ್ ವಿಮಾನವನ್ನು ಶಿವಮೊಗ್ಗಕ್ಕೆ ನೀಡಲು ಮಂಜೂರಾತಿ ನೀಡಿದ್ದಾರೆ. ಇದು ನನಗೆ ತುಂಬ ಸಂತಸ ತಂದಿದೆ. ಈ ವಿಮಾನ ಒಂದು ಕಾಲದಲ್ಲಿ ನಮ್ಮ ವಾಯುಪಡೆಯ ಪೈಲಟ್ಗಳಿಗೆ ತರಬೇತುದಾರ ಆಗಿತ್ತು. ಈ ವಿಮಾನದ ಸೇಪರ್ಡೆ ನಮ್ಮ ಯುವಕರನ್ನು ಪ್ರೇರೇಪಿಸಲು, ಸಶಸ್ತ್ರ ಪಡೆಗಳನ್ನು ಗೌರವಿಸಲು ಮತ್ತು ಮಲೆನಾಡಿನ ಹೆಬ್ಬಾಗಿಲಾದ ನಮ್ಮ ಸ್ಮಾರ್ಟ್ ಸಿಟಿಯ ಹೆಮ್ಮೆ ಹೆಚ್ಚಿಸುತ್ತದೆ ಎಂದಿದ್ದಾರೆ.

ವಾಯು ಸೇನೆ ಪೈಲಟ್ಗಳಿಗೆ ತರಬೇತಿ ನೀಡಲು ಬಳಸುತ್ಯಿದ್ದ ಎರಡು ಸೀಟ್ನ ಎಚ್ಎಎಲ್ ಎಚ್ಜೆಟಿ-16 ಕಿರಣ್ ಯುದ್ದ ವಿಮಾನವೇ ಶೀಘ್ರದಲ್ಲೆ ನಗರಕ್ಕೆ ಆಗಮಿಸಲಿರುವ ವಿಮಾನವಾಗಿದೆ. ಈ ವಿಮಾನವನ್ನು ಹಿಂದುಸ್ಥಾನ್ ಏರೊನಾಟಿಕಲ್ ಲಿಮಿಟೆಡ್ನಿಂದ ಭಾರತೀಯ ವಾಯಪಡೆಗಾಗಿ ಅಭಿವೃದ್ಧಿಪಡಿಸಿದೆ. ಇದನ್ನು ನೌಕಾಪಡೆಯು 1963ರಿಂದ ತರಬೇತಿಗೆ ಬಳಕೆ ಮಾಡಲಾಗುತ್ತಿತ್ತು. ಈ ವಿಮಾನ ಆರ್ಮ್ಸ್ಟ್ರಾಂಗ್ ಸಿಡ್ಡೆಲಿ ವೈಪರ್ ಮಾದರಿಯ ಎಂಜಿನ್ ಹೊಂದಿದೆ.

ಈ ಮಾದರಿಯ ಮೊದಲ ವಿಮಾನ ಸೆ.4, 1964ರಲ್ಲಿ ಹಾರಾಟ ಆರಂಭಿಸಿದೆ. ಈ ವಿಮಾನ 50 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದೆ. ವಿಮಾನವು 10.60 ಮೀಟರ್ ಉದ್ದವಿದ್ದು 10.70 ಮೀ. ಅಗಲದ ರೆಕ್ಕೆಗಳನ್ನು ಹೊಂದಿದೆ. 3.64 ಮೀ.ಎತ್ತರ, 2,560 ಕೆಜಿ. ಭಾರ ಇದೆ. ಗರಿಷ್ಠ ಉಡ್ಡಯನ ತೂಕ4,235 ಕೆಜಿ ಇದೆ. 1,137 ಲೀ. ಇಂಧನ ಸಾಮರ್ಥ್ಯ ಹೊಂದಿದ್ದು ಗರಿಷ್ಠ ವೇಗ: ಸಮುದ್ರ ಮಟ್ಟದಲ್ಲಿ ಗಂಟೆಗೆ 695 ಕಿ.ಮೀ. ಹಾಗೂ 324 ಕಿಮೀ ಕ್ರೂಸ್ ವೇಗ ಹೊಂದಿದೆ. ಇದೇ ಮಾದರಿಯ ವಿಮಾನಗಳು ದೇಶ ವಿದೇಶದಲ್ಲಿ ವೈಮಾನಿಕ ಪ್ರದರ್ಶನ ನೀಡಿವೆ.
ಈಗ ಅದು ವಾಯುಪಡೆಯ ಪಟ್ಟಿಯಿಂದ ನಿಷ್ಕಿçಯಗೊಂಡಿದ್ದು, ಯುವಕರಲ್ಲಿ ಯುದ್ಧದ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಅನುಕೂಲವಾಗುವಂತೆ ಫ್ರೀಡಂ ಪಾರ್ಕ್ನಲ್ಲಿ ಸ್ಥಾಪಿಸಲಾಗುತ್ತಿದೆ. ಅಲ್ಲದೇ ಶೀಘ್ರದಲ್ಲೇ ಸಿಗಂದೂರು ನೂತನ ಸೇತುವೆ ಬಳಿ ನೌಕಾಪಡೆಯ ಹಡಗನ್ನು ಕೂಡ ಕೊಡಲು ಕೇಂದ್ರ ರಕ್ಷಣಾ ಸಚಿವರು ಒಪ್ಪಿದ್ದು, ಅಲ್ಲಿ ಕೂಡ ಅದಕ್ಕೆ ಸೂಕ್ತ ಸ್ಥಳಾವಕಾಶ ಕಲ್ಪಿಸಿ ಅಲ್ಲಿ ಸ್ಥಾಪಿಸಲಾಗುವುದು. ಹಾಗೂ ಪ್ರವಾಸಿ ಆಕರ್ಷಣೆಯ ಕೇಂದ್ರವನ್ನಾಗಿ ಮಾಡಲಾಗುವುದು ಎಂದರು.

ಫ್ರೀಡA ಪಾರ್ಕ್ ಅಭಿವೃದ್ಧಿಗೆ ನಾನು ಈಗಾಗಲೇ ಉದ್ಯಮಿಯೊಬ್ಬರನ್ನು ಸಂಪರ್ಕಿಸಿದ್ದು, ಅವರ ಸಿ.ಎಸ್.ಆರ್. ಫಂಡ್ ನಲ್ಲಿ ಆರ್ಥಿಕ ಸಹಾಯ ನೀಡಲು ಅವರು ಒಪ್ಪಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಆ ಹಣ ಬಂದರೆ ಒಂದಿಷ್ಟು ಅಭಿವೃದ್ಧಿ ಕಾಣಲಿದೆ. ಅತ್ಯಂತ ದೊಡ್ಡದಾದ ಈ ಸ್ಥಳವನ್ನು ನಗರದ ಮಧ್ಯದಲ್ಲಿ ಪಡೆಯಲು 24 ಗಂಟೆಯೊಳಗೆ ಪೊಲೀಸ್ ಹಾಗೂ ಬಂಧಿಖಾನೆ ಇಲಾಖೆಯ ಅಧಿಕಾರಿಗಳೊಂದಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶ್ರಮವಹಿಸಿ ಇದನ್ನು ಪಡೆದಿದ್ದರು. ಈಗ ಇದು ನಗರದ ಮಧ್ಯೆ ವಿಶಾಲ ಮೈದಾನ ನಾಗರಿಕ ಬಳಕೆಗೆ ಲಭ್ಯವಾಗಿದ್ದು, ಇದರ ಸಂಪೂರ್ಣ ಅಭಿವೃದ್ಧಿ ಮಾಡುವಲ್ಲಿ ಹೆಚ್ಚಿನ ಕಾಳಜಿ ವಹಿಸಲಾಗುವುದು ಎಂದರು.
ನಿವೃತ್ತ ಸೈನಿಕ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹಿರೇಮಠ್, ಮಾಲತೇಶ್, ರಾಜೇಶ್ ಕಾಮತ್, ಇತರರು ಇದ್ದರು.