ಶಿವಮೊಗ್ಗ : ಕರ್ನಾಟಕ ರಾಜ್ಯದ ಉದ್ದ ಅಗಲಕ್ಕೆ ಮತ್ತೊಮ್ಮೆ ಪ್ರವಾಸ ನಡೆಸಿ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಾಗಿ ಮಾಜಿ ಸಿಎಂ ಯಡಿಯೂರಪ್ಪ ಸಂಕಲ್ಪ ಮಾಡಿದ್ದಾರೆ.

ಅವರು ನಿನ್ನೆ ನಗರದ ಸರ್ಜಿ ಕನ್ವೆಷನಲ್ ಹಾಲ್ನಲ್ಲಿ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವ ಸಂಘ ಹಮ್ಮಿಕೊಂಡಿದ್ದ ಬಿ.ಎಸ್. ಯಡಿಯೂರಪ್ಪನವರಿಗೆ ಅಭಿನಂದನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ, ಮಾತನಾಡಿದರು.
ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸಬೇಕಿದೆ. ಒಮ್ಮೆ ಸಂಸದನಾಗಿ ಮತ್ತು ನಾಲ್ಕು ಬಾರಿ ಸಿಎಂ ಆಗಿ ಏಳು ಬಾರಿ ಶಾಸಕನಾಗಿ ಕೆಲಸ ಮಾಡಲು ಜಿಲ್ಲೆಯ ಜನ ಅವಕಾಶ ಮಾಡಿಕೊಟ್ಟೀದ್ದೀರಿ. ನಾನು ಶಿಕಾರಿಪುರ ಮತ್ತು ಶಿವಮೊಗ್ಗದ ಜನರಿಗೆ ಚಿರಋಣಿ ಎಂದ ಅವರು, ಜಿಲ್ಲೆಯ ಜನರ ಋಣ ತೀರಿಸಲು ಆಗುವುದಿಲ್ಲ ಎಂದರು.

ರಾಜ್ಯದ ಬಹುತೇಕ ಜಲಾಶಯಗಳು ತುಂಬಿ ತುಳುಕುತ್ತಿದೆ. ರೈತ ಗೌರವದಿಂದ ಬದುಕುವ ಸ್ಥಿತಿಯಿದೆ. ರೈತನ ಶ್ರಮಕ್ಕೆ ಬೆಲೆಕಟ್ಟಲು ಆಗುವುದಿಲ್ಲ. ಆತನ ಶ್ರಮದ ಕಾರಣದಿಂದ ನಾವು ನೆಮ್ಮದಿ ಜೀವನಕ್ಕೆ ಕಾರಣವಾಗಿದೆ ಎಂದರು.
ನನಗೆ ಸನ್ಮಾನಿಸಿದ್ದಿರಿ. ಅನೇಕ ಮುತ್ಸದ್ಧಿಗಳು ರಾಜ್ಯಕ್ಕೆ ತಮ್ಮದೆ ಕೊಡುಗೆ ಕೊಟ್ಟಿದ್ದಾರೆ. ಅವರನ್ನು ಬೆನಪಿಸಿಕೊಳ್ಳುವ ಅಗತ್ಯವಿದೆ. ರಾಜ್ಯದಲ್ಲಿ ಪ್ರವಾಸಮಾಡಿ, ನ್ಯಾಯಕೊಡಿಸಿದ ತೃಪ್ತಿಯಿದೆ. ಸಮಾನತೆ, ಬ್ರಾತೃತ್ವ ಹಾಗೂ ಮಾನವೀಯ ಭಾವನೆಗಳಿಂದ ಸಾಗುವ ಧರ್ಮವೇ ವೀರಶೈವ ಧರ್ಮವಾಗಿದೆ. ನಾವು ಉತ್ತಮ ಸಮಾಜ ಮತ್ತು ವಿಕಸಿತ ಸಮಾಜಕ್ಕೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಆಗಿನ ಕಾಲದ ರಸ್ತೆಗಳ ಸ್ಥಿತಿಗಳನ್ನು ನೆನಪಿಸಿಕೊಂಡ ಬಿಎಸ್ವೈ ಅಟಲ್ ಜೀ ಅವರೊಂದಿಗೆ ಓಡಾಡಿದ ಅಂಬಾಸಿಡರ್ ಕಾರನ್ನು ನೆನಪಿಸಿಕೊಂಡರು. ಮತ್ತು ಅಂದಿನ ಓಡಾಟಗಳನ್ನು ಸ್ಮರಿಸಿದರು. ನಮ್ಮ ಸರ್ಕಾರವನ್ನು ಮತ್ತೆ ತಂದು ಅಭಿವೃದ್ಧಿ ಮಾಡಬೇಕಿದೆ ಎಂದರು.
ವಿಶ್ವವೇ ನಮ್ಮ ದೇಶದ ಕಡೆ ನೋಡುತ್ತಿದೆ. ಮೋದಿಯನ್ನು ಪ್ರಧಾನಿಯಾಗಿರುವುದು ನಮ್ಮ ಸೌಭಾಗ್ಯವಾಗಿದೆ. ರಾಜ್ಯದ ಯಾವುದೇ ಜಿಲ್ಲೆಗೆ ಹೋದರೆ ಸರ್ವಾಂಗಿಣ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಇರುವಾಗ ಶಕ್ತಿಮೀರಿ ಪ್ರಯತ್ನಿಸಿದ್ದೇನೆ. ವಿಶೇಷವಾಗಿ ಶಿವಮೊಗ್ಗ ಜಿಲ್ಲೆ ಹಿಂದೇ ಹೇಗಿತ್ತು ? ಈಗ ಹೇಗಿದೆ ಎಂಬುದನ್ನು ಜಿಲ್ಲೆಯ ಜನ ನೋಡಿದ್ದಾರೆ ಎಂದರು. ಪ್ರತಿಭಾ ಪುರಸ್ಕಾರ ಪಡೆದ ಮಕ್ಕಳಿಗೆ ಅಭಿನಂದನೆ ತಿಳಿಸಿದ ಅವರು, ಪೋಷಕರು ಮಕ್ಕಳಿಗೆ ಅವರು ಎಷ್ಟು ಇಚ್ಛೆ ಪಡುತ್ತಾರೋ ಅಲ್ಲಿಯವರೆಗೆ ಓದಿಸಿ ಅವರನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡಿ ಎಂದರು. ಪಠ್ಯದ ಜೊತೆಗೆ ನಮ್ಮ ಸನಾತನ ಧರ್ಮದ ಮಹಾನೀಯರುಗಳ ಚರಿತ್ರೆಯನ್ನು ಅವರಿಗೆ ತಿಳಿಸಿ, ದೇಶಭಕ್ತರ ಜೀವನಗಾಥೆಯನ್ನು ಅವರಿಗೆ ಮನದಟ್ಟು ಮಾಡಿ, ಸತ್ಪçಜೆಗಳನ್ನಾಗಿ ಮಾಡಿ ಎಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ಪ್ರಾಧ್ಯಾಪಕ ವಿಶ್ವನಾಥ್ ಮಾತನಾಡಿ, ಎಸ್ಎಸ್ಎಲ್ಸಿ ಮಾರ್ಕ್ಸ್ ಕಾರ್ಡ್ ಕೇವಲ ಜನ್ಮ ದಿನಾಂಕ ತೋರಿಸುವ ಪ್ರಮಾಣಪತ್ರವಾಗಿದೆ. ಆದರೆ ಪಿಯುಸಿ ನಿಮ್ಮ ಜೀವನದ ದಾರಿ ದೀಪವಾಗಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಯನ್ನು ಶಿಕ್ಷಕರಾಗಿ ಮಾಡುವುದೇ ಶಿಕ್ಷಣವಾಗಿದೆ. ಕಲಿತ ಪಾಠವನ್ನು ಮನೆಯಲ್ಲಿ ಮತ್ತೊಮ್ಮೆ ಓದಿ ರೆಕಾರ್ಡ್ ಮಾಡಿಕೊಳ್ಳಬೇಕಿದೆ. ಮುಂದಿನ ಶಿಕ್ಷಣಕ್ಜೆ ಅನುವು ಮಾಡಿಕೊಳ್ಳಬೇಕು. 85% ಬಂದ ವಿದ್ಯಾರ್ಥಿಗಳಿಗೆ 95% ಅಂಕ ಪಡೆದ ಹುಡುಗನನ್ನು ಹೋಲಿಸಿ ಪೋಷಕರು ಹೇಳಿದರೆ ಅದನ್ನು ಬೇಸರಮಾಡಿಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು. ನಾಳೆಗೆ ಬೇಕಾದ ಸಿದ್ಧತೆಯನ್ನು ಇವತ್ತೇ ವಿದ್ಯಾರ್ಥಿಗಳು ಟೈಮ್ಟೇಬಲ್ ಸಿದ್ಧಪಡಿಸಿ ಅದರ ಪ್ರಕಾರ ಓದಬೇಕು. ಶಿಸ್ತಿನಿಂದ ವರ್ತಿಸಬೇಕು. ನಿಮಗೆ ನೀವೇ ಮಾರ್ಗದರ್ಶಕರು, ನಿರ್ಧಿಷ್ಟ ಗುರಿಯನ್ನಿಟ್ಟುಕೊಂಡು ಶ್ರಮಪಟ್ಟರೆ ನಿಮ್ಮ ಗುರಿತಲುಪಲು ಸಾಧ್ಯವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಬಸವ ಕೇಂದ್ರದ ಬಸವ ಮರುಳುಸಿದ್ಧಸ್ವಾಮೀಜಿ ಸಾನಿಧ್ಯವಹಿಸಿದ್ದರು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿಪ್ರಕಾಶ್, ಕಾರ್ಯದರ್ಶಿ ಎಸ್.ಪಿ. ದಿನೇಶ್, ಪ್ರಮುಖರಾದ ತಾರಾನಾಥ್, ಶಾಂತಾ ಆನಂದ್, ಬಳ್ಳೇಕೆರೆ ಸಂತೋಷ್, ಅನಿತಾ ರವಿಶಂಕರ್, ಡಾ. ರೇಣುಕಾರಾಧ್ಯ, ಮಹಾಲಿಂಗ ಶಾಸ್ತಿçà ಮೋಹನ್ ಬಾಳೆಕಾಯಿ, ಟಿ.ಬಿ. ಜಗದೀಶ್, ಪಿ. ರುದ್ರೇಶ್, ಎಂ.ಆರ್. ಪ್ರಕಾಶ್, ಮಹೇಶ್ಮೂರ್ತಿ, ರತ್ನಾಮಂಜುನಾಥ್, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಮಾಜಿ ಶಾಸಕರಾದ ಹೆಚ್.ಎಂ. ಚಂದ್ರಶೇಖರಪ್ಪ, ಎಸ್. ರುದ್ರೇಗೌಡ, ಆಯನೂರು ಮಂಜುನಾಥ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಹೆಚ್.ಸಿ. ಯೋಗೀಶ್ ಮೊದಲಾದವರಿದ್ದರು.
ಈ ಸಂದರ್ಭದಲ್ಲಿ ಸುಮಾರು 200ಕ್ಕೂ ಹೆಚ್ಚು ಮಕ್ಕಳಿಗೆ 15ಲಕ್ಷಕ್ಕೂ ಹೆಚ್ಚು ನಗದನ್ನು ಪ್ರತಿಭಾ ಪುರಸ್ಕಾರ ನೀಡಲಾಯಿತು.