ಶಿವಮೊಗ್ಗ, ಆ.01:
ಸರ್ಕಾರಿ ಉದ್ದೇಶಕ್ಕಾಗಿ ಮೀಸಲಾಗಿಟ್ಟಿದ್ದ ಭದ್ರಾವತಿ ತಾಲೂಕು ಕಸಬಾ ಎರಡನೇ ಹೋಬಳಿ, ಹುಣಸೆಘಟ್ಟ ಸರ್ವೆ ನಂಬರ್ 42ರ ಎರಡು ಎಕರೆ ಭೂಮಿ ಒತ್ತುವರಿ ಮಾಡಿಕೊಂಡ ವಿಷಯಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಲೋಕಾಯುಕ್ತ ಇಲಾಖೆ ಎಂಟು ಜನರಿಗೆ ನೋಟಿಸ್ ನೀಡಿದ್ದು ಆಗಸ್ಟ್ 22ರಂದು ಹಾಜರಾಗಲು ಸೂಚಿಸಿದೆ. 29.05.2025 ರಂದು ಹುಣಸೆಕಟ್ಟೆ ಗ್ರಾಮದ ಮೋಹನ್ ಕುಮಾರ್ ಅವರು ಹೆಚ್ ಕೆ ಪ್ರಸನ್ನ ಕುಮಾರ್ ಎಚ್ ಕೆ, ಡಾ.ರಾಮಕೃಷ್ಣ ಹಾಗೂ ಭದ್ರಾವತಿ ತಹಶೀಲ್ದಾರರು ಸೇರಿದಂತೆ ಎಂಟು ಜನರ ವಿರುದ್ಧ ದೂರು ನೀಡಿ ಸರ್ಕಾರಿ ಜಮೀನು ಉಳಿಸಲು ಕೋರಿದ್ದರು.

ಊರಿನಲ್ಲಿ 05-01-2024 ರಂದು ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಸರ್ಕಾರದ ಕಾನೂನು ಸಲಹೆಗಾರರ ಆದೇಶದಂತೆ ಭದ್ರಾವತಿ ತಹಸಿಲ್ದಾರರು ಎಡಿಎಲ್ ಆರ್ ಮತ್ತು ಪೊಲೀಸರಿಗೆ ಅತಿಕ್ರಮಣ ಪ್ರದೇಶ ತೆರವುಗೊಳಿಸಲು ಬರೆದಿದ್ದ ಪತ್ರವನ್ನು ಲಗತ್ತಿಸಿ ಪೂರಕವಾದ ಎಲ್ಲಾ ದಾಖಲೆಗಳನ್ನು ನೀಡಿದ್ದರು.

ಈ ಸಂಬಂಧ ಲೋಕಾಯುಕ್ತರು ಪ್ರಸನ್ನ ಕುಮಾರ್, ಡಾ. ರಾಮಕೃಷ್ಣ, ಭದ್ರಾವತಿ ತಹಶೀಲ್ದಾರ್, ಶಿವಮೊಗ್ಗ ಉಪವಿಭಾಗಾಧಿಕಾರಿಗಳು, ಕಮಿಷನರ್ ಶಿವಮೊಗ್ಗ ಕೌನ್ಸಿಲ್, ಭದ್ರಾವತಿ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ, ಭದ್ರಾವತಿ ಪಂಚಾಯತ್ ಡೆವಲಪ್ಮೆಂಟ್ ಆಫೀಸರ್ ಮತ್ತು ಕಂಬದಾಳು ಹೊಸೂರು ಗ್ರಾಮ ಪಂಚಾಯತಿಯ ಕಾರ್ಯದರ್ಶಿಗೆ ನೋಟಿಸ್ ನೀಡಿದ್ದು 22- 8- 25ರಂದು ವಿಚಾರಣೆಗೆ ಕರೆದಿದ್ದಾರೆ. ಈ ಹಿಂದಿನಿಂದಲೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಶಿವರಾಂ ಹಾಗೂ ಗ್ರಾಮಸ್ಥರು ಈ ವಿಷಯದ ಬಗ್ಗೆ ನಿರಂತರವಾಗಿ ಹೋರಾಟ ಮಾಡುತ್ತಿದ್ದು, ಹತ್ತು ಹಲವು ಕಡೆ ದೂರು ನೀಡಿದ್ದರು.

ಹಿಂದೆ ಸ್ವತಃ ಶಿವಮೊಗ್ಗ ಜಿಲ್ಲಾಧಿಕಾರಿಗಳು ಭದ್ರಾವತಿ ತಹಶೀಲ್ದಾರರಿಗೆ ಮೌಖಿಕವಾಗಿ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಒತ್ತುವರಿ ಭೂಮಿ ತೆರವುಗೊಳಿಸಲು ಸೂಚಿಸಿದ್ದರೂ ಭದ್ರಾವತಿ ತಹಸಿಲ್ದಾರರು ಅತ್ತ ತಿರುಗಿಯೂ ನೋಡಿರಲಿಲ್ಲ.

ಈಗ ಲೋಕಾಯುಕ್ತದ ವಿಚಾರಣೆ ಹೊಸದೊಂದು ಶಾಕ್ ನೀಡಿದೆ. ಸರ್ಕಾರಿ ಭೂಮಿಯನ್ನು ಅದೂ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟಿದ್ದ ಭೂಮಿಯನ್ನು ಅತಿಕ್ರಮಣ ಪ್ರವೇಶ ಮಾಡಿ ಸುಳ್ಳು ದಾಖಲೆಗಳ ಬೋರ್ಡ್ ಹಾಕಿದ್ದಾರೆಂಬ ಆರೋಪದ ವಿಷಯಕ್ಕೆ ಸಂಬಂಧಪಟ್ಟಂತೆ ಹಿಂದೆ ಮುಖ್ಯಮಂತ್ರಿಗಳು, ಗ್ರಾಮೀಣಾಭಿವೃದ್ಧಿ ಸಚಿವರು, ಉಪಮುಖ್ಯಮಂತ್ರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.