ಶಿವಮೊಗ್ಗ : ಸಂವಿಧಾನ ಓದಬೇಕು ಎಂದು ಪಠ್ಯದಲ್ಲಿ ಅಳವಡಿಸಲಾಗಿದೆ. ಆದರೆ ವಿದ್ಯಾರ್ಥಿಗಳನ್ನು ಈ ರೀತಿ ತೊಡಗಿಸಿಕೊಳ್ಳುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ರೂಪಿಸಿದ್ದಕ್ಕೆ ಅಭಿನಂದನೆಗಳು. ಸಂವಿಧಾನ ಓದುವುದಕ್ಕಿಂತ ಪ್ರೀತಿಸಿ ಎಂದು ಕರೆನೀಡಿದವರು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಾನ್ಯ ಸಂತೋಷ ಎಂ. ಎಸ್. ಅವರು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಸಹಯೋಗದಲ್ಲಿ ಶಿವಮೊಗ್ಗ ತಾಲ್ಲೂಕು ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಸಂವಿಧಾನ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಹಾಗೂ 79 ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನ, ಮೂಲಭೂತ ಕಾನೂನು ಇದನ್ನು ಅರ್ಥಮಾಡಿಕೊಳ್ಳಬೇಕು. ಅದನ್ನು ನಾವು ಪ್ರೀತಿಸಿದರೆ ಅದು ಹೇಗೆ ಇದೆಯೋ ಹಾಗೆ ನಾವು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ವಿವರಿಸಿದರು.


ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿ ನಮ್ಮ ನಡುವೆ ಸಂವಿಧಾನ ಅರಿಯದ ಹಲವು ಮಂದಿ ಉನ್ನತ ಸ್ಥಾನದಲ್ಲಿದ್ದು ತಪ್ಪು ಮಾಡುತ್ತ ಸಾರ್ವಜನಿಕ ಹಣ, ಸಮಯ ವ್ಯರ್ಥ ಮಾಡುತ್ತಿದ್ದಾರೆ. ಅದನ್ನು ನೋಡಿದರೆ ಸಂವಿಧಾನ ಅರಿವಿದ್ದಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲ. ಹೊಸ ತಲೆಮಾರು ಈ ತಪ್ಪುಗಳನ್ನು ಮಾಡದಿರಲೆಂದು ಪ್ರೇರಣೆ ನೀಡುವ ಸಲುವಾಗಿ ರಸಪ್ರಶ್ನೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ವಿವರಿಸಿದರು.

ಮುಖ್ಯ ಅತಿಥಿಗಳಾಗಿದ್ದ ಕುವೆಂಪು ವಿ.ವಿ. ಸಿಂಡಿಕೇಟ್ ಸದಸ್ಯರು, ನ್ಯಾಯವಾದಿಗಳಾದ ಕೆ. ಪಿ. ಶ್ರೀಪಾಲ್ ಅವರು ಬಹುತ್ವದ ಏಕತೆ ಸಂವಿಧಾನದ ಆಶಯ. ಎಲ್ಲರಿಗೂ ಸಮಾನತೆಯನ್ನು ಕೊಟ್ಟ ಸಂವಿಧಾನ ಓದದಿದ್ದರೆ ಅದು ನಮಗೆ ನಾವೇ ಅನ್ಯಾಯ ಮಾಡಿಕೊಂಡಂತೆ ಆಗಲಿದೆ. ಸಂವಿಧಾನ ಕರಡು ಪ್ರತಿಯನ್ನು ಸಾರ್ವಜನಿಕ ಚರ್ಚೆಗೆ ಇಡಲಾಗಿತ್ತು. ಆಗಲೇ ಯಾವುದೇ ಸೌಲಭ್ಯಗಳಿಲ್ಲದ ಕಾಲದಲ್ಲಿ 7695 ಪ್ರಶ್ನೆಗಳು ಬಂದಿದ್ದವು. ಆದರೆ ಇವತ್ತು ತಿದ್ದುಪಡಿಗಳನ್ನು ಸಾರ್ವಜನಿಕ ಚರ್ಚೆಗೆ ಇಡದೇ ಅಸೆಡ್ಡೆಮಾಡಲಾಗುತ್ತಿದೆ ಎಂದು ವಿವರಿಸಿದರು.

ಕಾಲೇಜು ಪ್ರಿನ್ಸಿಪಾಲರಾದ ಪ್ರೊ. ಟಿ. ಅವಿನಾಶ್ ಅಧ್ಯಕ್ಷತೆ ವಹಿಸಿದ್ದರು. ಸಂವಿಧಾನ ವಿಚಾರ ಇವತ್ತಿನ ಚರ್ಚೆಗೆ ಸೀಮಿತವಾಗದೆ ವರ್ಷವಿಡೀ ಮುಂದುವರಿಯಲಿ ಎಂದು ಆಶಿಸಿದರು.
ಅನನ್ಯ ಗಿರೀಶ್ ಮುಖ್ಯ ಅತಿಥಿಗಳಾಗಿದ್ದರು. ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ ಸ್ವಾಗತಿಸಿದರು.
ಡಾ. ಜಿ. ಆರ್. ಲವ ನಿರೂಪಿಸಿದರು. ಡಾ. ಪ್ರಕಾಶ್ ಮರ್ಗನಹಳ್ಳಿ ವಂದಿಸಿದರು. ಡಾ. ಎಚ್. ಟಿ. ಕೃಷ್ಣಮೂರ್ತಿ ಅವರು ರಸಪ್ರಶ್ನೆ ನಡೆಸಿಕೊಟ್ಟರು. ಎಂ. ನವೀನ್ ಕುಮಾರ್, ಚಂದ್ರಶೇಖರ ಹಿಳ್ಳೋಡಿ, ಅನುರಾಧ, ಎಸ್. ನಾರಾಯಣ, ರಾಮಪ್ಪಗೌಡರು, ಎಂ. ಎಂ. ಸ್ವಾಮಿ ವಿವಿಧ ಜವಾಬ್ದಾರಿ ನಿರ್ವಹಿಸಿದರು.
ಶಿವಮೊಗ್ಗ ತಾಲ್ಲೂಕಿನ ಇಪ್ಪತ್ತು ಕಾಲೇಜುಗಳು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.