ಶಿವಮೊಗ್ಗ : ಅನಾಮಧೇಯ ವ್ಯಕ್ತಿಯೋರ್ವ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂಬ ದೂರಿನ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ಆದೇಶಿಸಿರುವುದಕ್ಕೆ ವಕೀಲ ಕೆ.ಪಿ. ಶ್ರೀಪಾಲ್ ಸ್ವಾಗತಿಸಿ, ನಿಷ್ಪಕ್ಷಪಾತ ತನಿಖೆ ನಡೆದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಧರ್ಮಸ್ಥಳದಲ್ಲಿ ಧರ್ಮವಿದೆ. ಕ್ಷೇತ್ರದ ಬಗ್ಗೆ ಆಕ್ಷೇಪ ಎತ್ತುತ್ತಿಲ್ಲ. ಅನಾಮಧೇಯ ವ್ಯಕ್ತಿಯೊಬ್ಬ 2014ರ ವರೆಗೆ ನಾನು ಧರ್ಮಸ್ಥಳದಲ್ಲಿದ್ದೆ ಆ ಸಮಯದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಇವುಗಳಲ್ಲಿ ಅತ್ಯಾಚಾರ, ಕೊಲೆ, ದೌರ್ಜನ್ಯ ಸೇರಿವೆ. ಅದರ ಪಾಪಪ್ರಜ್ಞೆಯಿಂದಾಗಿ 2014ರಲ್ಲಿ ಧರ್ಮಸ್ಥಳ ಬಿಟ್ಟು ಬೇರೆಡೆ ವಾಸವಾಗಿದ್ದೇನೆ ಎಂದು ಪೊಲೀಸರ ಎದುರು ನಂತರ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿಕೆ ನೀಡಿದ್ದು, ಈ ಪ್ರಕರಣಕ್ಕೆ ನ್ಯಾಯ ಒದಗಿಸಲು ರಾಜ್ಯ ಸರ್ಕಾರ ಎಸ್ಐಟಿಗೆ ವಹಿಸಿದೆ. ಎಸ್ಐಟಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದರು.

8 ವರ್ಷದಲ್ಲಿ ಬೆಳ್ತಂಗಡಿ ಮತ್ತು ಉಜಿರೆಯಲ್ಲಿ 98 ಪ್ರಕರಣ ಅಸಹಜ ಸಾವೆಂದು ವರದಿಯಾಗಿದೆ. ಹೂತಿಟ್ಟಿರುವ ನೂರಾರು ಶವಗಳಲ್ಲಿ 12 ರಿಂದ 15 ವರ್ಷದ ಹೆಣ್ಣು ಮಕ್ಕಳು, ಪುರುಷರು, ಮಹಿಳೆಯರು ಸೇರಿದ್ದಾರೆ ಎಂದು ಹೇಳಿಕೆ ನೀಡಿದ್ದು, ವ್ಯಕ್ತಿಯ ಹೇಳಿಕೆ ಹಾಗೂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರುಗಳಲ್ಲಿ ವ್ಯತ್ಯಾಸ ಇರಬಹುದು. ಇಡೀ ಪ್ರಕರಣವನ್ನು ನ್ಯಾಯಸಮ್ಮತವಾಗಿ ತನಿಖೆಯಾಗಬೇಕು ತಪ್ಪಿತಸ್ಥರಿಗೆ ಕಠಿಣಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಧರ್ಮಸ್ಥಳದ ಪ್ರಕರಣವು ದೇಶದ ಬೇರೆ ಬೇರೆ ರಾಜ್ಯಗಳಲ್ಲೂ ಸಹ ಪ್ರತಿಧ್ವನಿಸುತ್ತಿದೆ. ಕೇರಳ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡ ಒಂದು ತಿಂಗಳ ನಂತರ ಸರ್ಕಾರ ಎಸ್ಐಟಿ ತನಿಖೆಗೆ ಆದೇಶಿಸಿದೆ. ಎಸ್ಐಟಿ ತನಿಖೆ ನಿಷ್ಪಕ್ಷಪಾತವಾಗಿ ನಡೆದರೆ ಅನನ್ಯಭಟ್ ನಾಪತ್ತೆ ಪ್ರಕರಣ ಹಾಗೂ ಸೌಜನ್ಯ ಸಾವಿಗೆ ನ್ಯಾಯ ಸಿಗಲಿದ ಎಂಬ ವಿಶ್ವಾಸವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಮಾಜವಾದಿ ಪುಟ್ಟಯ್ಯ, ಎಂ. ಗುರುಮೂರ್ತಿ, ಡಾ. ಕೆ.ಜಿ. ವೆಂಕಟೇಶ್, ಶಿವಬಸಪ್ಪ, ವಿಜಯ್ ಇತರರಿದ್ದರು.