ಶಿವಮೊಗ್ಗ: ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆಯ ಪಾಲಿಕೆಗೆ ಸೇರಿದ ಸರ್ಕಾರಿ ಜಾಗದ ಅಸಲಿ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ರಾಷ್ಟ್ರ ಭಕ್ತರ ಬಳಗದ ಸದಸ್ಯರೊಂದಿಗೆ ಇಂದು ಪಾಲಿಕೆ ಆಯುಕ್ತರಿಗೆ ಮನವಿ ನೀಡಿದರು.

ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಕ್ಪ್ ಬೋರ್ಡ್ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮೈದಾನ ತಮ್ಮದೆಂದು ಪ್ರತಿಪಾದಿಸಲು ಹೊರಟಿದ್ದಾರೆ. ಈಗಾಗಲೇ ನಾವು ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ ಮತ್ತು ಆಯುಕ್ತರಿಗೆ ಮನವಿ ನೀಡಿದ್ದೇವೆ. ನ್ಯಾಯಾಲಯ ಕೂಡ ೮ ವಾರಗಳ ಅವಧಿಯನ್ನು ಪಾಲಿಕೆ ಆಯುಕ್ತರಿಗೆ ನೀಡಿ ಪರಿಶೀಲನೆ ಮಾಡಿ ವರದಿ ನೀಡುವಂತೆ ಸೂಚಿಸಿತ್ತು. ಈಗ ಅವಧಿ ಮುಗಿದಿದೆ. ನಾವು ಮತ್ತೆ ಇಂದು ಆಯುಕ್ತರಿಗೆ ಮೂಲ ದಾಖಲೆಗಳ ಯಥಾ ನಕಲು ಪ್ರತಿಗಳನ್ನು ನೀಡಿದ್ದೇವೆ ಎಂದರು.

ಅದರ ಜತೆಗೆ ಸರ್ಕಾರದ ಗೆಜೆಟ್ ನೋಟಿಫಿಕೇಷನ್, ೧೯೬೫ರಿಂದ ೭೫ರವರೆಗಿನ ಭೂಕಂದಾಯ ಪುಸ್ತಕ ಸಂಖ್ಯೆ ೪ರ ೧೭/೧೮ನೇ ಪುಟ ಮತ್ತು ೧೯೯೦ರಿಂದ ೯೬ರವರೆಗಿನ ಎಂ.ಆರ್. ನಂ. ೧೯ರ ವಿಭಾಗ -೪, ಪುಸ್ತಕ ೫ ಪುಟ ೮೪ ಹಾಗೂ ೧೯೯೫-೯೬ರ ಎಂ.ಆರ್. ನಂ. ೨೯ರ ವಿಭಾಗ ೪ ಪುಸ್ತಕ ಸಂಖ್ಯೆ ೧೩, ಕ್ರಮ ಸಂಖ್ಯೆ ೧೪೭೩ ಮತ್ತು ಅಂದಿನ ಪಾಲಿಕೆ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರ ಹಾಗೂ ೨೦೩೧ರವರೆಗಿನ ಸಿಡಿಪಿ ಯೋಜನೆಯ ನಕ್ಷೆಯನ್ನು ಮನವಿಯೊಂದಿಗೆ ನೀಡಿದರು. ಹಾಗೂ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆಯುಕ್ತ ಮಾಯಣ್ಣಗೌಡ ಮನವಿ ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ೨೦೧೯-೨೦೨೦-೨೦೨೧ರಲ್ಲಿ ಮೂರು ಬಾರಿ ಈ ವಿಷಯ ನ್ಯಾಯಾಲಯಕ್ಕೆ ಹೋಗಿದ್ದು, ಕರ್ನಾಟಕ ರಾಜ್ಯ ಪಾಲಿಕೆ ನಿಯಮ ೧೧೪ಎ ಅಡಿಯಲ್ಲಿ ಅರ್ಜಿ ದಾಖಲಾಗಿದ್ದು, ಘನ ನ್ಯಾಯಾಲಯ ಕೂಡ ಪುನರ್ ಪರಿಶೀಲನೆಗೆ ಸೂಚಿಸಿ ಗಡುವು ನೀಡಿತ್ತು. ಒಂದು ಪ್ರಕರಣ ನ್ಯಾಯಾಲಯದ ಆದೇಶಕ್ಕೆ ಸಿದ್ಧವಾಗಿದ್ದು, ಇನ್ನೊಂದು ಪ್ರಕರಣದಲ್ಲಿ ನ್ಯಾಯಾಲಯದಿಂದ ವಿಚಾರಣೆ ಬಾಕಿ ಇದೆ. ನ್ಯಾಯಾಲಯಕ್ಕೆ ನಾವು ಸೂಕ್ತ ದಾಖಲೆಗಳನ್ನು ಒದಗಿಸುತ್ತೇವೆ. ಅಂತಿಮ ತೀರ್ಪು ನ್ಯಾಯಾಲಯ ನೀಡಲಿದೆ ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಇ. ಕಾಂತೇಶ್, ಇ. ವಿಶ್ವಾಸ್, ಲೋಕೇಶ್, ಶಿವಾಜಿ, ಸತ್ಯನಾರಾಯಣ ಕಾಚಿನಕಟ್ಟೆ, ಶಂಕರನಾಯ್ಕ್, ಜಾಧವ್, ಅ.ಮ. ಪ್ರಕಾಶ್, ಕುಬೇರಪ್ಪ ಮತ್ತಿತರರು ಇದ್ದರು.

ಜಗದ್ಗುರು ಪಂಚಾಚಾರ್ಯ ಪಂಚಪೀಠಗಳ ಸ್ವಾಮೀಜಿಗಳು ಒಗ್ಗಟ್ಟಗಾಗಿ ದಾವಣಗೆರೆಯಲ್ಲಿ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನ ನಡೆಸುತ್ತಿರುವುದು ಸಂತೋಷದಾಯಕ ವಿಚಾರವಾಗಿದೆ. ೧೬ ವರ್ಷದಿಂದ ಅವರೆಲ್ಲರೂ ಒಟ್ಟಾಗಿರಲಿಲ್ಲ. ನಾನು ಗುರುಗಳನ್ನು ಭೇಟಿಯಾದಾಗ ಈ ವಿಚಾರ ಪ್ರಸ್ತಾಪ ಮಾಡಿ ಐದೂ ಪೀಠಗಳ ಸ್ವಾಮೀಜಿಗಳು ಒಗ್ಗಟ್ಟಾಗಿ ಭಕ್ತರಿಗೆ ಮಾರ್ಗದರ್ಶನ ನೀಡಬೇಕೆಂದು ಪ್ರಾರ್ಥನೆ ಮಾಡಿದ್ದೆ. ಕಾಲ ಕೂಡಿ ಬರುತ್ತದೆ ಎಂದು ಆಶೀರ್ವದಿಸಿದ್ದರು. ಈಗ ಎಲ್ಲಾ ಗುರುಗಳು ಒಟ್ಟಾಗುತ್ತಿರುವುದು ನನಗೆ ಮತ್ತು ಭಕ್ತರಿಗೆ, ಸಮಾಜಕ್ಕೆ ಸಂತೋಷವಾಗಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಇಂದು ಪ್ರಧಾನಿ ಮೋದಿ ಅವರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಮೋದಿ ಬೊಗಳುತ್ತಾರೆ ಎಂದಿದ್ದಾರೆ. ಇದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಶೋಭೆ ತರುವುದಿಲ್ಲ. ಅವರು ಮೋದಿಯವರ ಕ್ಷಮೆ ಕೇಳಬೇಕು. ಅವರ ಮಗ ಪ್ರಿಯಾಂಕ್ ಖರ್ಗೆ ಇದೇ ರೀತಿ ಅರ್ಥವಿಲ್ಲದೇ ಬೊಗಳುತ್ತಿರುತ್ತಾರೆ. ಅವರಿಗೂ ಇವರಿಗೂ ವ್ಯತ್ಯಾಸವಿದೆ. ಖರ್ಗೆಯವರು ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.