ಶಿವಮೊಗ್ಗ: ಶಿಕಾರಿಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೀಲು, ಮೂಳೆ ವೈದ್ಯರಿಲ್ಲದೇ ರೋಗಿಗಳು ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧಿಕಾರಿಗಳ ಮೂಲಕ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದೆ.

ಶಿಕಾರಿಪುರ ತಾಲೂಕು ಆಸ್ಪತ್ರೆ ಹಿಂದೆ ಬಿ.ಎಸ್. ಯಡಿಯೂರಪ್ಪನವರ ಅವಧಿಯಲ್ಲಿ ಜಿಲ್ಲಾಮಟ್ಟದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಾಗಿತ್ತು. ಈಗಲೂ ಸಹಾ ಸುತ್ತಮುತ್ತಲಿನ ತಾಲೂಕಿನಿಂದ ಬಹಳಷ್ಟು ಮಂದಿ ಈ ಆಸ್ಪತ್ರೆಗೆ ಬರುತ್ತಾರೆ, ಕಾರ್ಮಿಕರು, ಬಡವರು, ಗ್ರಾಮೀಣ ಪ್ರದೇಶದ ರೈತರು ಚಿಕಿತ್ಸೆಗಾಗಿ ಪ್ರತಿನಿತ್ಯ ಸಾವಿರಾರು ಜನ ಬರುತ್ತಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಕೀಲು, ಮೂಳೆ ವೈದ್ಯರಿಲ್ಲದೇ ಮೂರು ವರ್ಷ ಕಳೆದಿದೆ ಎಂದರು.

ವೈದ್ಯರ ನೇಮಕಾತಿಗೆ ಆಗ್ರಹಿಸಿ ಸಂಘಟನೆಯಿಂದ ಎಲ್ಲಾ ಅಧಿಕಾರಿಗಳಿಗೂ ಈ ಬಗ್ಗೆ ಮನವಿ ನೀಡಲಾಗಿದೆ. ಪತ್ರಿಕಾಗೋಷ್ಠಿ ಮುಖಾಂತರ ಸರ್ಕಾರದ ಗಮನಸೆಳೆಯಲಾಗಿದೆ. ಆದರೂ ಇಲ್ಲಿ ವೈದ್ಯರ ನೇಮಕವಾಗದೇ ಬಡ ಕೂಲಿ ಕಾರ್ಮಿಕರು ಚಿಕಿತ್ಸೆಗಾಗಿ ಹೆಚ್ಚಿನ ಹಣ

ಭರಿಸುವಂತಾಗಿದೆ. ಕೂಡಲೇ ವೈದ್ಯರನ್ನು ನೇಮಿಸಬೇಕು. ಇಲ್ಲದಿದ್ದಲ್ಲಿ ಆಸ್ಪತ್ರೆಯ ಮುಂಭಾಗ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಘುವೀರ್ ಸಿಂಗ್, ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ, ಶಿಕಾರಿಪುರ ತಾಲೂಕು ಅಧ್ಯಕ್ಷ ಶಿವಯ್ಯ ಎನ್. ಶಾಸ್ತ್ರಿ, ಮುಖಂಡರಾದ ವಿನೋದ್, ಸುನಿಲ್, ಮಾಲತೇಶ್, ವೆಂಕಟೇಶ್, ಅಕ್ಬರ್ ಅಲಿ, ಸೈಯದ್ ಅಲಿ, ಮಧು, ಸುಮಾ, ಸುನಿಲ್, ಅಬ್ರಾಹಂ, ಸುದೀಪ್ ಇದ್ದರು.