ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ರಾಜ್ಯ ಸರ್ಕಾರ ಸಿದ್ಧವಾಗಿದ್ದು, ಇದಕ್ಕಾಗಿ 8644 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಇದು ಭವಿಷ್ಯದ ವಿದ್ಯುತ್ ಸಮಸ್ಯೆಯನ್ನು ನಿವಾರಣೆ ಮಾಡುವ ಬಹುದೊಡ್ಡ ಯೋಜನೆಯಾಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಕೂಡ ಸಮ್ಮತಿ ನೀಡಿದೆ. ಮುಂದಿನ ದಿನಗಳಲ್ಲಿ ಅಣೆಕಟ್ಟುಗಳನ್ನು ಕಟ್ಟುವುದು ಬಹಳ ಕಷ್ಟ. ಆದ್ದರಿಂದ ಪಂಪ್ಡ್ ಸ್ಟೋರೇಜ್ ಮೂಲಕವೇ ವಿದ್ಯುತ್ ಉತ್ಪಾದಿಸಬಹುದಾಗಿದೆ. ಈ ಯೋಜನೆಗೆ ಪರಿಸರ ಇಲಾಖೆಯವರು ಮತ್ತು ಕೆಲವರು ವಿರೋಧಿಸಬಹುದು. ಅರಣ್ಯ ನಾಶ ಎಂದು ಹೇಳಲುಬಹುದು. ಆದರೆ, ಒಂದು ಒಳ್ಳೆಯ ಉದ್ದೇಶಕ್ಕೆ ಸ್ವಲ್ಪಮಟ್ಟಿಗೆ ಅರಣ್ಯ ನಾಶವಾದರೆ ತೊಂದರೆ ಇಲ್ಲ. ಇಲ್ಲಿ ಕೇವಲ 8.32 ಎಕರೆ ಮಾತ್ರ ನಷ್ಟವಾಗುತ್ತದೆ. ಇದಕ್ಕಾಗಿ ಈಗಾಗಲೇ ರೈತರ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಬಗರ್ಹುಕುಂ ರೈತರಿಗೂ ಪರಿಹಾರ ಕೊಡಲಾಗುವುದು. ಆದ್ದರಿಂದ ಆದಷ್ಟು ಬೇಗ ಕಾಮಗಾರಿ ಆರಂಭವಾಗಬೇಕು. ಈಗಾಗಲೇ ಇದಕ್ಕಾಗಿ ಟೆಂಡರ್ ಕೂಡ ಕರೆಯಲಾಗಿದೆ. ಇದು ದೇಶದಲ್ಲಿಯೇ ನಂಬರ್ ಒನ್ ಯೋಜನೆಯಾಗಲಿದ್ದು, ಸುಮಾರು 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುವುದು ಎಂದರು.

ಶರಾವತಿ ಸೇತುವೆ ಉದ್ಘಾಟನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಉದ್ಘಾಟನೆ ಆಗಿರುವುದು ಸ್ವಾಗತದ ವಿಷಯವಾಗಿದೆ. ಆದರೆ, ಮುಖ್ಯಮಂತ್ರಿಗಳನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸದಿರುವುದು, ಸರಿಯಾದ ಸಮಯಕ್ಕೆ ತಿಳಿಸದೇ ಇರುವುದು ಸರಿಯಲ್ಲ, ಸಂಸದ ರಾಘವೇಂದ್ರ ಅವರು ಇದು ನಾನೇ ಮಾಡಿದ್ದು ಎಂದು ಕೊಚ್ಚಿಕೊಳ್ಳುತ್ತಾರೆ. ಕೇಂದ್ರ ಸರ್ಕಾರದ ಹಣವೇ ಆಗಿರಬಹುದು. ಆದರೆ, ರಾಜ್ಯ ಸರ್ಕಾರದ ಪಾಲೂ ಇರುತ್ತದೆ. ಯಾವುದೇ ಅಭಿವೃದ್ಧಿ ಯೋಜನೆಗಳು ಯಾರಪ್ಪನ ಮನೆಯಿಂದ ತಂದು ಮಾಡುವುದಲ್ಲ, ರಾಜ್ಯದ ಜನರು ಕಟ್ಟಿದ ತೆರಿಗೆ ಹಣವನ್ನು ಇದು ಒಳಗೊಂಡಿರುತ್ತದೆ. ನಾವು ಮಾಡಿದ್ದು ಎಂಬ ಅಹಂಕಾರದಿಂದ ಈ ರೀತಿ ವರ್ತಿಸಿದ್ದಾರೆ. ಇದು ಕೀಳುಮಟ್ಟದ ರಾಜಕಾರಣ. ಅದರಲ್ಲೂ ಸಂಸದ ಬಿ.ವೈ. ರಾಘವೇಂದ್ರ ಅವರ ನರಿಬುದ್ಧಿಯಿಂದ ರಾಜ್ಯ ಸರ್ಕಾರಕ್ಕೆ ಅವಮಾನ ಮಾಡಿದ್ದಾರೆ ಎಂದರು.

ಸರ್ಕಾರದ ಕೆಲವು ಸಚಿವರ ಬದಲಾವಣೆಯಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈಗಾಗಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಒಂದು ಸುತ್ತು ಶಾಸಕರನ್ನು ಭೇಟಿ ಮಾಡಿ ವಿಷಯ ಸಂಗ್ರಹಿಸಿದ್ದಾರೆ. ಮತ್ತೊಮ್ಮೆ ಸಚಿವರ ಜೊತೆ ಕೂಡ ಮಾತನಾಡುತ್ತಾರೆ. ನನ್ನನ್ನೂ ಮಾತನಾಡಿಸಿದರು. ನಾನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ಶಿ.ಜು. ಪಾಶಾ ಇದ್ದರು.
ಸಿಗಂದೂರಿನ ಲಾಂಚ್ ಗಳನ್ನು ತೇಲುವ ಹೋಟೆಲ್ ಗಳಾಗಿ ಪರಿವರ್ತಿಸುವ ಯೋಜನೆ ನನ್ನ ಮುಂದಿದೆ. ಸೇತುವೆ ಆದ ನಂತರ ಲಾಂಚ್ ಗಳು ಮೂಲೆಗುಂಪಾಗುವ ಸಾಧ್ಯತೆಗಳಿವೆ. ಆದ್ದರಿಂದ ಇದನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮತ್ತಷ್ಟು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಎರಡು ಲಾಂಚ್ಗಳನ್ನು ಹೋಟೆಲ್ ಗಳನ್ನಾಗಿ ಪರಿವರ್ತಿಸಿ ಅಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರವಾಸಿಗರು ಬೋಟ್ ಮೂಲಕ ಹೋಗಿ ಹೋಟೆಲ್ಗಳಲ್ಲಿ ತಿನಿಸುಗಳನ್ನು ತಿನ್ನಬಹುದು. ಶಾಖಾಹಾರಿ ಮತ್ತು ಮಾಂಸಹಾರಿ ಎರಡೂ ವಿಭಾಗಗಳನ್ನಾಗಿ ಮಾಡುವ ಯೋಜನೆ ಇದೆ. ಮತ್ತು ನಡುಗಡ್ಡೆ ಬಳಸಿಕೊಂಡು ದ್ವೀಪದ ರೀತಿಯನ್ನಾಗಿ ಪರಿವರ್ತಿಸಬಹುದು. ಈ ಯೋಜನೆಗೆ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಅವರು ಅನುಮೋದನೆ ನೀಡುತ್ತಾರೆ ಎಂಬ ಭರವಸೆ ನನಗಿದೆ. ಈಗಾಗಲೇ ಅವರು ಒಪ್ಪಿದ್ದಾರೆ.
-ಬೇಳೂರು ಗೋಪಾಲಕೃಷ್ಣ