ಶಿವಮೊಗ್ಗ, ಜು.14:
ಇಲ್ಲಿನ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇಬ್ಬರು ಹಿರಿಯ, ಅಜೀವ ಸದಸ್ಯರು ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು ಸಲ್ಲಿಸಿದ್ದಾರೆ.
ಕಳೆದ ಐದು ದಶಕಗಳಿಂದ ಈ ಸಮಾಜದ ಅಜೀವ ಸದಸ್ಯರಾಗಿರುವ ಹೊಸ ಮನೆಯ ಬಿ.ಎನ್. ಪ್ರಕಾಶ್ ಹಾಗೂ ಮೂರು ದಶಕಗಳಿಂದ ಸದಸ್ಯರಾಗಿರುವ ರವೀಂದ್ರ ನಗರದ ಹೆಚ್. ಸಿ. ಯತಿರಾಜ್ ಅವರು ದೂರು ಸಲ್ಲಿಸಿದ್ದು ಸಂಘದ ನಿಲುವನ್ನು ಖಂಡಿಸಿದ್ದಾರೆ.

ನಾವು ಅಜೀವ ಸದಸ್ಯರಾಗಿದ್ದು ನಮ್ಮ ಸದಸ್ಯತ್ವವನ್ನು ಮತ್ತೆ ನವೀಕರಿಸಲು ಹೆಚ್ಚುವರಿ ಶುಲ್ಕ, ಎರಡು ಫೋಟೋ, ಲಿಂಗಾಯಿತ ಜಾತಿ ದಾಖಲೆ ಮತ್ತು ಆಧಾರ್ ಕಾರ್ಡ್ ನೀಡುವಂತೆ ಕೇಳಿದ್ದಾರೆ. ನಾವು ಅಜೀವ ಸದಸ್ಯರಾಗಿರುವುದರಿಂದ ಈ ಕಾನೂನು ಪ್ರಕ್ರಿಯೆ ನಮಗೆ ಅನ್ವಯಿಸುವುದಿಲ್ಲ. ನಾವು ಲಿಂಗಾಯರಲ್ಲವೇ? ಈಗೇಕೆ ಅನುಮಾನ ಬಂದಿದೆ ಎಂದಿದ್ದಾರೆ.

ನಮ್ಮನ್ನು ದುರುದ್ದೇಶದಿಂದ ಹೊರಹಾಕಲು ಇಂತಹ ಪ್ರಯತ್ನಗಳು ನಡೆಯುತ್ತಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಯಾವುದೇ ಕೋ ಆಪರೇಟಿವ್ ಸೊಸೈಟಿಗಳಿಗೆ ಆಧಾರ್ ಕಾರ್ಡ್ ಕೇಳುವ ಹಕ್ಕಿಲ್ಲ. ಇವರು ಈಗ ಆಧಾರ್ ಕಾರ್ಡ್ ಪಡೆದು ಅದನ್ನು ದುರುಪಯೋಗ ಹಾಗೂ ವಂಚನೆ ಮಾಡಲು ಉಪಯೋಗಿಸುವುದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಡಬೇಕು. 23- 11- 2022 ರ ಸರ್ವ ಸದಸ್ಯರ ಬೈಲಾ ತಿದ್ದುಪಡಿ ಮಾಡಿರುವ ವಿಷಯ ನಮಗೆ ಕಚೇರಿಯಿಂದ ಬಂದಿರುವುದಿಲ್ಲ. ಸಂಘದ ನೋಂದಣಿ ಸಂಖ್ಯೆ S/4 /71 – 72 ನೋಂದಣಿ ಪತ್ರವನ್ನು ತಮ್ಮ ಕಚೇರಿಯಲ್ಲಿ ನವೀಕರಿಸಿಲ್ಲ ಎಂಬುದಾಗಿ ಪ್ರಕಾಶ್ ತಿಳಿಸಿದ್ದರೆ, ನೀವು ನವೀಕರಿಸಿದ್ದರೆ ಅದನ್ನು ನೀಡಿ ಎಂದು ಯತಿರಾಜ್ ಕೇಳಿದ್ದಾರೆ.

ನಮ್ಮ ವಿರುದ್ಧ ಕಾನೂನುಬಾಹಿರವಾಗಿ ಬೇಕಿಲ್ಲದ ದಾಖಲಾತಿಗಳನ್ನು ಕೇಳಿರುವ ಇವರುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಈಗ ಸಂಸ್ಥೆ ನೀಡಿರುವ ಕರಪತ್ರಕ್ಕೆ ತಡೆಯಾಜ್ಞೆ ನೀಡಿ, ಎಲ್ಲಾ ಲೆಕ್ಕಪತ್ರ ಪರಿಶೀಲಿಸಬೇಕು ಎಂದು ಕೋರಿದ್ದಾರೆ.

ಯತಿರಾಜ ಅವರು ಸಂಘದಲ್ಲಿ ಈಗಾಗಲೇ ಸುಮಾರು 100 ಕೋಟಿಯಷ್ಟು ಆಸ್ತಿಯಿದ್ದು ಸಾಕಷ್ಟು ವ್ಯವಹಾರ ನಡೆಯುತ್ತಿದ್ದರೂ, ಈಗ ಮತ್ತೆ ಸದಸ್ಯತ್ವ ನವೀಕರಣೆ ನೆಪದಲ್ಲಿ ಶುಲ್ಕ ಹೆಚ್ಚು ಕೇಳುವ ಉದ್ದೇಶವಿರುವುದಿಲ್ಲ ಎಂದು ಹೇಳಿದ್ದಾರೆ.