ಬೆಂಗಳೂರು,ಜು.14
ಸಿಗಂದೂರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಕಾರ್ಯಕ್ರಮದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಧಾನ ವ್ಯಕ್ತಪಡಿಸಿ, ಅಲ್ಲಿ ಶಿಷ್ಟಾಚಾರ ಪಾಲನೆಯಾಗಿಲ್ಲ ಎಂದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಸಾಗರ ತಾಲ್ಲೂಕಿನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಮುಂದೂಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಪತ್ರವನ್ನೂ ಬರೆಯಲಾಗಿತ್ತು. ಕೇಂದ್ರ ಸಚಿವರೂ ಕಾರ್ಯಕ್ರಮ ಮುಂದೂಡಲು ಸಮ್ಮತಿಸಿದ್ದರು. ಆದರೂ ಕೂಡ ಅಲ್ಲಿನ ಸ್ಥಳೀಯ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು, ನನ್ನ ಗಮನಕ್ಕೆ ತಾರದೇ, ಕಾರ್ಯಕ್ರಮವನ್ನು ಇಂದೇ ಆಯೋಜಿಸಿದ್ದಾರೆ. ನನಗೆ ಪೂರ್ವನಿಯೋಜಿತ ಕಾರ್ಯಕ್ರಮಗಳಂತೆ ವಿಜಯಪುರ ಜಿಲ್ಲೆಗೆ ತೆರಳಬೇಕಾಗಿರುವುದರಿಂದ, ಸಾಗರ ತಾಲ್ಲೂಕಿನ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದರು.

ಬಿಜೆಪಿಯ ಈ ನಡೆಯನ್ನು ಪ್ರತಿಭಟಿಸಲು ಸಂಬಂಧಪಟ್ಟ ಸಾಗರ ತಾಲ್ಲೂಕಿನ ಇಂದಿನ ಕಾರ್ಯಕ್ರಮವನ್ನು ಸರ್ಕಾರದ ಯಾವುದೇ ಸಚಿವರು, ಸ್ಥಳೀಯ ಶಾಸಕರು ಭಾಗವಹಿಸುತ್ತಿಲ್ಲ. ನಮ್ಮ ನಡುವೆ ತಿಕ್ಕಾಟವನ್ನು ಪ್ರಾರಂಭಿಸಿರುವುದು ಕೇಂದ್ರ ಸರ್ಕಾರವೇ ಆಗಿದೆ.


ಇಲ್ಲಿ ಶಿಷ್ಠಾಚಾರದ ಪಾಲನೆಯಾಗಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯ ಸರ್ಕಾರದ ಪಾಲೂ ಇರುತ್ತದೆ. ಅಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎಲ್ಲ ಶಿಷ್ಠಾಚಾರಗಳನ್ನೂ ತಪ್ಪದೇ ಪಾಲಿಸುತ್ತದೆ. ಇಂದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗಾಗಲಿ, ಸಂಬಂಧಪಟ್ಟ ಇಲಾಖಾ ಸಚಿವರನ್ನಾಗಲೀ, ಸ್ಥಳೀಯ ಶಾಸಕರನ್ನಾಗಲೀ ಆಮಂತ್ರಣ ನೀಡಲಾಗಿಲ್ಲ ಎಂದರು.