ಶಿವಮೊಗ್ಗ: ಇತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅಲೆಮಾರಿ ಸಭೆಯಲ್ಲಿ ಕೊರಚ ಸಮುದಾಯದವರನ್ನು ಹೊರಗಿಟ್ಟು ಸಭೆ ನಡೆಸಿರುವುದು ಮತ್ತು ಅಲೆಮಾರಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಅವರ ಮೇಲೆ ಹಲ್ಲೆ ಯತ್ನ ಮಾಡಿರುವುದು ಖಂಡನೀಯ ಎಂದು ಕೊರಚರ ಮಹಾ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಸಿದ್ದೇಶ್ ಮಾದಾಪುರ ಹೇಳಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ ೫ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಕೊರಚ ಸಮುದಾಯದವರ ಸಭೆಯನ್ನು ಮಾಜಿ ಸಚಿವ ಹೆಚ್. ಆಂಜನೇಯ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಲೆಮಾರಿ ಸಮುದಾಯಗಳಲ್ಲಿ ೫೧ ಉಪಜಾತಿಗಳಿದ್ದು, ಆದರೆ, ಈ ಸಭೆಯಲ್ಲಿ ಕೊರಚ ಮತ್ತು ಕೊರಮ ಸಮುದಾಯದವರನ್ನು ಹೊರಗಿಟ್ಟು ಕೇವಲ ೪೯ ಅಲೆಮಾರಿಗಳ ಸಮುದಾಯಗಳ ಪಟ್ಟಿಯನ್ನು ಘೋಷಿಸಿದೆ. ಇದನ್ನು ನಾವು ಪ್ರಶ್ನೆ ಮಾಡಿದೆವು. ಆದರೆ, ಆಂಜನೇಯ ಅವರು ಸರಿಯಾದ ಉತ್ತರವನ್ನೇ ಕೊಡಲಿಲ್ಲ ಎಂದರು.

ರಾಜ್ಯ ಕಾರ್ಯಾಧ್ಯಕ್ಷ ಪ್ರಕಾಶ್ ಲಿಗಾಡಿ ಮಾತನಾಡಿ, ಈಗ ಇರುವ ಪಟ್ಟಿಯಲ್ಲಿ ಹಲವು ಸಮುದಾಯಗಳು ೫೦ ಸಾವಿರಕ್ಕಿಂತ ಕಡಿಮೆ ಇವೆ. ಆದರೆ, ೨೦೧೧ರ ಜನಗಣತಿ ಪ್ರಕಾರ ಕೊರಮ ಸಮುದಾಯ ೨ ಲಕ್ಷ, ಕೊರಚ ಸಮುದಾಯ ೪ ಲಕ್ಷ. ಒಟ್ಟು ೬ ಲಕ್ಷ ಜನರಿದ್ದೇವೆ. ಆದರೂ,

ಕೊರಚ ಮತ್ತು ಕೊರಮ ಸಮುದಾಯಗಳನ್ನು ಹೊರತುಪಡಿಸಿರುವುದು ಸರಿಯಲ್ಲ. ಆದರೆ, ಆಂಜನೇಯ ಅವರು ಎಲ್ಲಾ ಸಮುದಾಯದವರನ್ನು ಒಟ್ಟಿಗೆ ಕರೆದುಕೊಂಡು ಹೋಗಬಹುದಿತ್ತು. ಸರ್ಕಾರ ನಿಗಮವನ್ನು ಕೂಡ ಅದಕ್ಕಾಗಿಯೇ ಸ್ಥಾಪಿಸಿದೆ. ಆದರೆ, ಆಂಜನೇಯ ಅವರು ನಮ್ಮ ಸಮಾಜದ ನಡುವೆಯೇ ಭಿನ್ನಾಭಿಪ್ರಾಯ ತಂದು ಹೊಡೆದಾಡುವ ನೀತಿಯನ್ನು ಅನುಸರಿಸುತ್ತಿರುವುದು ಖಂಡನೀಯ ಎಂದರು.

ಹೆಚ್. ಆಂಜನೇಯ ಮುಂದಿನ ದಿನಗಳಲ್ಲಾದರೂ ಎಲ್ಲಾ ೫೧ ಅಲೆಮಾರಿ ಸಮುದಾಯಗಳ ಜೊತೆ ಸಭೆ ನಡೆಸಬೇಕು. ಅವರು ಹಾಗೆಂದು ಹೇಳಿದ್ದಾರೆ. ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಅವರ ಹೇಳಿಕೆ ಕೇವಲ ಹೇಳಿಕೆಯಾಗಿಯೇ ಉಳಿಯಬಾರದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಶ್ರೀನಿವಾಸ ಜಿ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಧರ್ಮಪ್ಪ, ಅಶೋಕ್, ಪರಮೇಶ್, ವೆಂಕಟೇಶ್, ಅಶೋಕ್, ಸುರೇಶ್, ಮೊದಲಾವರಿದ್ದರು.