ಬೊಮ್ಮನಕಟ್ಟೆ ಲಾಸ್ಟ್ ಸ್ಟಾಪಿನಲ್ಲಿ ಹೊರಗಿನವರ ಕಿರಿಕ್!
ಶಿವಮೊಗ್ಗ, ಜು.೧೧:
ಶಿವಮೊಗ್ಗ ನಗರದ ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬೊಮ್ಮಕಟ್ಟೆಯಲ್ಲಿ ಇತ್ತೀಚೆಗೆ ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದು, ಬೊಮ್ಮನಕಟ್ಟೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಂತೆ ಕಂಡು ಬರುತ್ತಿದೆ. ಪೊಲೀಸರ ಬಗ್ಗೆ ಇಲ್ಲಿ ಭಯವೇ ಇಲ್ಲದಂತಹ ವರ್ತನೆಯನ್ನು ಕೆಲವರು ರಾತ್ರಿ ಹೊತ್ತು ತೋರಿಸುತ್ತಿದ್ದಾರೆ.


ಹಿಂದೆ ಕೊಲೆ ನಡೆದು ಒಂದು ತಿಂಗಳಾಗುವಷ್ಟರಲ್ಲಿ ಮೊತ್ತೊಂದು ಕೊಲೆಯ ರಕ್ತಪಾತವನ್ನು ನೋಡಿ ಅಲ್ಲಿನ ಜನರು ಭಯಭೀತರಾಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಇತ್ತಿಚೀನ ದಿನಗಳಲ್ಲಿ ವಾರಕ್ಕೊಂದು ಗಲಾಟೆಗಳು, ಗ್ಯಾಂಗ್ವಾರ್ಗಳು, ಕಳ್ಳತನಗಳು ಎಣ್ಣೆ ಪಾರ್ಟಿಗಳು ಹೆಚ್ಚುತ್ತಿದ್ದರೂ ಇವುಗಳನ್ನು ಹತ್ತಿಕ್ಕುವಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಥವಾ ವಿನೋಬನಗರ ಪೊಲೀಸ್ ಠಾಣೆಯ ಪೋಲಿಸರು ವಿಫಲರಾಗಿದ್ದಾರೆಯೇ ಎಂದು ಇಲ್ಲಿನ ಜನರು ಪತ್ರಿಕೆಯ ಮೂಲಕ ಹೇಳಿಕೊಂಡಿದ್ದಾರೆ.

ಶಿವಮೊಗ್ಗ ನಗರದಲ್ಲಿ ಸಾರ್ವಜನಿಕರ ತಲೆಯಲ್ಲಿ ಬೊಮ್ಮನಕಟ್ಟೆ ಕೊಲೆ ಮಾಡುವ ಸ್ಪಾಟ್ ಎಂದೇ ಬಿಂಬಿತವಾಗಿದ್ದು, ಬೊಮ್ಮನಕಟ್ಟೆಗೆ ರಾತ್ರಿಯ ಸಮಯದಲ್ಲಿ ಓಡಾಡಲು ಸಹ ಭಯಭೀತರಾಗಿದ್ದಾರೆ.

ಬೊಮ್ಮನಕಟ್ಟೆಯ ಭಾಗದಲ್ಲಿ ಗಾಂಜಾ ಮತ್ತು ಎಣ್ಣೆ ಪಾರ್ಟಿಗಳು ಹೆಚ್ಚುತ್ತಿದ್ದರೂ ಸಹ ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಇಲ್ಲಿನ ಸಾರ್ವಜನಿಕರ ಆರೋಪವಾಗಿದೆ.
ಯಾವುದೇ ಪೊಲೀಸ್ ಬೀಟ್ ವ್ಯವಸ್ಥೆ ಇಲ್ಲ!
ಕತ್ತಲಾದ್ಮೇಲೆ ಬೊಮ್ಮನಕಟ್ಟೆಗೆ ಯಾವುದೇ ಸರಿಯಾದ ಪೊಲೀಸ್ ಬೀಟ್ ವ್ಯವಸ್ಥೆ ಇಲ್ಲ. ಪದೇ ಪದೇ ಈ ರೀತಿ ಎಣ್ಣೆ ಪಾರ್ಟಿಯ ನೆಪದಲ್ಲಿ ಕೊಲೆಗಳಾಗುತ್ತಿವೆ. ಇಲ್ಲಿನ ಜನರು ಬೊಮ್ಮನಕಟ್ಟೆಯಲ್ಲಿ ಹೇಗೆ ಬದುಕಬೇಕು. ರಾತ್ರಿಯ ಸಮಯದಲ್ಲಿ ಸಾರ್ವಜನಿಕರು ಭಯಬೀತರಾಗಿ ಓಡಾಡುವಂತೆ ಆಗಿದೆ. ಆದ್ದರಿಂದ ಬೊಮ್ಮನಕಟ್ಟೆಯ ವ್ಯಾಪ್ತಿಯಲ್ಲಿ ಹೆಚ್ಚಿನ ಪೊಲೀಸ್ ಬೀಟ್ ವ್ಯವಸ್ಥೆ ಮಾಡಲು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.