ಶಿವಮೊಗ್ಗ: ಮಸೀದಿಗಳಿಂದ ಕೂಗುವ ಆಜಾನ್ ಧ್ವನಿಯಿಂದ ಶಬ್ದ ಮಾಲಿನ್ಯ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಅಗತ್ಯಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸೀದಿಗಳಿಂದ ಹೊರಡುವ ಆಜಾನ್ ಕೂಗಿನಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದ್ದು, ಲೌಡ್ ಸ್ಪೀಕರ್ ಬಳಸುವುದರಿಂದ ಹೆಚ್ಚು ಶಬ್ದ ಮಾಲಿನ್ಯ ಉಂಟಾಗುತ್ತದೆ. ಅದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಸುಪ್ರೀಂ ಕೋರ್ಟ್ ಕೂಡ ಮಾನದಂಡವನ್ನು ಕೂಡ ಹೊರಡಿಸಿದೆ. ಆ ಮಾನದಂಡದ ಪ್ರಕಾರ ಮಸೀದಿಗಳು ನಡೆದುಕೊಳ್ಳುತ್ತಿಲ್ಲ ಎಂದರು.
ಕೆಲವು ರಾಜ್ಯಗಳಲ್ಲಿ ಈ ಧ್ವನಿವರ್ಧಕಗಳಿಗೆ ಕಡಿವಾಣ ಹಾಕಲಾಗಿದೆ. ಮಹಾರಾಷ್ಟ್ರದಲ್ಲಿ ಸುಮಾರು ೧೫೦೦ಕ್ಕೂ ಹೆಚ್ಚು ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ. ಮತ್ತು ಮುಖ್ಯವಾಗಿ ಈಗ ಆಧುನಿಕ ತಂತ್ರಜ್ಞಾನವೊಂದು ಬಂದಿದೆ. ಮೊಬೈಲ್ ಫೋನ್ ಗಳಲ್ಲೇ ಆಜಾನ್ ಕರೆ ಕೇಳಲು ಅವಕಾಶವಿದ್ದು, ಇದಕ್ಕಾಗಿ ಮೊಬೈಲ್ ಅಪ್ಲಿಕೇಷನ್ ಇದ್ದು ಇದನ್ನು ಅಭಿವೃದ್ಧಿಪಡಿಸಿದರೆ ಆಜಾನ್ ಕಿರಿಕಿರಿ ತಪ್ಪುತ್ತದೆ. ರಾಜ್ಯ ಸರ್ಕಾರ ಇತ್ತಕಡೆ ಗಮನಹರಿಸಬೇಕಾಗಿದೆ ಎಂದರು.

ಕಲೀಂ ಪಠಾಣ್ ಎಂಬುವವರು ಈ ಅಪ್ಲಿಕೇಷನ್ ಅನ್ನು ತಯಾರಿಸಿದ್ದಾರೆ. ಹೊಸ ತಂತ್ರಾಂಶಗಳನ್ನು ಬಳಸಿಕೊಂಡು ಮೊಬೈಲ್ ನಲ್ಲಿ ಇದನ್ನು ಅಳವಡಿಸಿಕೊಂಡರೆ ಆಜಾನ್ ಕೂಗುವ ಸಮಯದ ಜೊತೆಗೆ ಆಜಾನ್ ಅನ್ನೂ ಕೇಳಬಹುದಾಗಿದೆ. ಪಠಾಣ್ ಅವರೇ ಹೇಳುವಂತೆ ನಾವು ಈಗ ಈ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ನೇರವಾಗಿ ನಮ್ಮ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ಇದರಿಂದ ನಮ್ಮ ಆಚರಣೆಯನ್ನು ನಮ್ಮವರಿಗೆ ತಿಳಿಸಲು ಅನುಕೂಲವೂ ಆಗುತ್ತದೆ. ಮತ್ತೆ ಬೇರೆ ಧರ್ಮದವರಿಗೆ ಆಗುವ ಕಿರಿಕಿರಿಯೂ ತಪ್ಪುತ್ತದೆ ಎಂದಿದ್ದಾರೆ. ಆದ್ದರಿಂದ ಅವರ ಸಲಹೆಯಂತೆ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಂಡು ಆಜಾನ್ ಕೇಳುವ ಮೂಲಕ ಬೇರೆ ಧರ್ಮದವರಿಗೆ ಆಗುವ ಕಿರಿಕಿರಿ ಮತ್ತು ಶಬ್ಧ ಮಾಲಿನ್ಯ ತಪ್ಪಿಸಬೇಕು. ರಾಜ್ಯ ಸರ್ಕಾರ ಈ ನಿಟ್ಟಿನತ್ತ ಅಗತ್ಯಕ್ರಮ ವಹಿಸಬೇಕು ಎಂದರು.

ಮಸೀದಿಗಳ ಲೌಡ್ ಸ್ಪೀಕರ್ ಗಳಿಂದ ಹೊರಡುವ ವಿಪರೀತ ಶಬ್ಧದಿಂದ ವೃದ್ಧರಿಗೆ ಅನಾರೋಗ್ಯ ಪೀಡಿತರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಮತ್ತು ಬೇರೆ ಧರ್ಮದವರಿಗೂ ಕೂಡ ಧಾರ್ಮಿಕ ಯಾತನೆಯಾಗುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಅಗತ್ಯಕ್ರಮ ಕೈಗೊಳ್ಳಬೇಕು ಎಂದರು.
ಹಿಂದುಳಿದ ವರ್ಗಗಳ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಸಿದ್ಧರಾಮಯ್ಯ ಅವರು ಹಿಂದುಳಿದ ವರ್ಗಕ್ಕೆ ಏನು ಕೊಡುಗೆ ಕೊಟ್ಟಿದ್ದಾರೋ ಗೊತ್ತಿಲ್ಲ. ಕರ್ನಾಟಕದ ವೀರಪ್ಪಮೊಯ್ಲಿ, ಬಿ.ಕೆ. ಹರಿಪ್ರಸಾದ್, ಸಿದ್ಧರಾಮಯ್ಯ ಅವರನ್ನು ದೆಹಲಿಗೆ ಕಳಿಸಿ ಅದೇನು ಕಡಿದು ಕಟ್ಟೆ ಹಾಕುತ್ತಾರೋ ಗೊತ್ತಿಲ್ಲ. ಕಾಂತರಾಜ್ ವರದಿಯನ್ನೇ ಜಾರಿಗೆ ತರಲು ಯೋಗ್ಯತೆ ಇಲ್ಲದವರು ಹಿಂದುಳಿದ ವರ್ಗಕ್ಕೆ ಏನು ಅನುಕೂಲ ಮಾಡುತ್ತಾರೆ ಎಂದ ಅವರು ಆಕಸ್ಮಾತ್ ಪ್ರಧಾನಿ ಮೋದಿ ಅವರಿಗೆ ಚಾಲೆಂಜ್ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ. ಅದಂತೂ ಇವರ ಕೈಲಿ ಸಾಧ್ಯವೇ ಇಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಹಾಲಿಂಗ ಶಾಸ್ತ್ರಿ, ಕೆ.ಇ. ಕಾಂತೇಶ್, ಇ. ವಿಶ್ವಾಸ್, ನಾಗರಾಜ್, ಮೋಹನ್ ಜಾಧವ್, ಉಮೇಶ್ ಆರಾಧ್ಯ, ವಾಗೀಶ್, ರಾಜು, ಲೋಕೇಶ್, ಚನ್ನಬಸಪ್ಪ, ಶಂಕರ್, ಶಿವು, ಶ್ರೀಕಾಂತ್, ಕುಬೇರಪ್ಪ, ಕುಮಾರ್ ಇದ್ದರು.