ಶಿವಮೊಗ್ಗ : ಕೆಲವು ಹಿರಿಯರ ಹತ್ತಿರ ಚರ್ಚೆಮಾಡಿ, ನಂತರ ಬಿಜೆಪಿಗೆ ಸೇರಿಕೊಳ್ಳುವೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನೂಂತೂ ಯಾವುದೇ ಕಾರಣಕ್ಕೂ ಕಾಂಗ್ರೆಸ್ಗೆ ಹೋಗುವುದಿಲ್ಲ. ಹಲವು ಪಕ್ಷಗಳ ಮುಖಂಡರು ನಿಮಗೆ ಮತ್ತು ನಿಮ್ಮ ಪುತ್ರನಿಗೆ ಪಕ್ಷದಲ್ಲಿ ಉತ್ತಮ ಸ್ಥಾನ ಕೊಡುತ್ತೇವೆ ಬನ್ನಿ ಎಂದು ಆಹ್ವಾನ ಮಾಡಿದ್ದಾರೆ. ಆದರೆ ನಾನು ಹೋಗುವುದಿಲ್ಲ. ನಾನು ಬಿಜೆಪಿಯಲ್ಲೇ ಮೊದಲು ಇದ್ದದ್ದು. ಈಗಲೂ ಅಲ್ಲಿಗೆ ಹೋಗುತ್ತೇನೆ ಎಂದರು.

ಕುರುಬ ಸಮಾಜದ ಹಲವು ನಾಯಕರು ನೀವು ಬಿಜೆಪಿ ಬರಬೇಕು ಎಂದು ಹೇಳುತ್ತಿದ್ದಾರೆ. ಅದು ಅವರ ಪ್ರೀತಿ. ನಾನು ಬಿಜೆಪಿ ಹೋಗಬೇಕೆಂಬುದು ಹಲವರ ಆಸೆಯಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಕೆಲವರ ಹತ್ತಿರ ಚರ್ಚೆಮಾಡಿ, ನಿರ್ಧಾರ ಮಾಡುತ್ತೇನೆ ಎಂದರು.

ಕಾಂಗ್ರೆಸ್ನಲ್ಲಿ ಕ್ರಾಂತಿಯಾಗುತ್ತದೆ ಎಂದು ಹೇಳುತ್ತಿದ್ದಾರೆ. ಅದು ಸರ್ಕಾರ ಬೀಳುತ್ತದೆಯೋ ಅಥವಾ ಸಿದ್ದರಾಮಯ್ಯ ತಮ್ಮ ಸ್ಥಾನದಿಂದ ಇಳಿಯುತ್ತಾರೋ ಗೊತ್ತಿಲ್ಲ. ಸುರ್ಜಿವಾಲಾರವರು ಕೇವಲ ೪೦ ಜನ ಶಾಸಕರನ್ನು ಕರೆದು, ಸಭೆ ನಡೆಸುತ್ತಿದ್ದಾರೆ. ೧೩೬ ಜನರಲ್ಲಿ ಈ ೪೦ ಜನರನ್ನು ಮಾತ್ರ ಏಕೆ ಗುಂಪು ಕಟ್ಟಿಕೊಂಡು ಚರ್ಚೆ ಮಾಡುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಜಾತ್ಯಾತೀತ ಮತ್ತು ಸಮಾಜವಾದಿ ಎಂಬ ಎರಡು ಪದಗಳನ್ನು ಇಂದಿರಾಗಾಂಧಿಯವರು ತಮ್ಮ ಸರ್ವಾಧಿಕಾರದ ಅವಧಿಯಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿ, ಸಂವಿಧಾನದ ಮೂಲ ಪೀಠಿಕೆಯಲ್ಲಿ ೧೯೭೬ರ ಡಿಸೆಂಬರ್ ೧೮ರಂದು ಸೇರಿಸಿದ್ದಾರೆ. ಈ ಎರಡು ಪದಗಳು ತುರ್ತು ಪರಿಸ್ಥಿತಿಯಲ್ಲಿ ತುರಿಕಿದ ಪದಗಳಾಗಿವೆ. ಆದರೆ ಕಾಂಗ್ರೆಸ್ಸಿಗರು ಇದನ್ನು ಮರೆತು ಈಗ ಸಂವಿಧಾನ ವಿರೋಧಿ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನನ್ನ ಮೂರು ಪ್ರಶ್ನೆಗಳಿಗೆ ಉತ್ತರ ನೀಡಲಿ. ಜಾತ್ಯಾತೀತ ಮತ್ತು ಸಮಾಜವಾದಿ ಎಂಬ ಎರಡು ಪದಗಳನ್ನು ಸಂವಿಧಾನದಲ್ಲಿ ಸೇರಿಸಿದ್ದು ಯಾರು ? ಯಾವಾಗ ? ಎಂದು ಹೇಳಲಿ. ೧೯೭೩ರಲ್ಲಿ ಕೇರಳ ಹೈಕೋರ್ಟ್ ಹಾಗೂ ಸುಪ್ರಿಂಕೋರ್ಟ್ ನೀಡಿದ ತೀರ್ಪಿನಲ್ಲಿ ಸಂವಿಧಾನ ಮೂಲ ಸ್ವರೂಪವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರೂ ಕೂಡ ಇಂದಿರಾಗಾಂಧಿಯವರು ಸಂವಿಧಾನದ ಮೂಲ ಪೀಠಿಕೆಯನ್ನು ಬದಲಾಯಿಸಿದ್ದು ನ್ಯಾಯಾಂಗದ ಮೇಲಿನ ದಾಳಿಯಲ್ಲವೇ ? ಎಂದು ಪ್ರಶ್ನೆಮಾಡಿದರು.
ಆರ್ಎಸ್ಎಸ್ನ ನಾಯಕರಾದ ದತ್ತಾತ್ರೇಯ ಹೊಸಬಾಳೆ ಅವರು ಹೇಳಿದ್ದರಲ್ಲಿ ತಪ್ಪೇನಿದೆ ? ಜಾತ್ಯಾತೀತ ಮತ್ತು ಸಮಾಜವಾದಿ ಎಂಬ ಎರಡು ಪದಗಳನ್ನು ಇಂದಿರಾಗಾಂಧಿಯವರು ಸಂವಿಧಾನ ವಿರೋಧಿಯಾಗಿ ಪೀಠಿಕೆಯಲ್ಲಿ ಸೇರಿಸಿದ್ದಾರೆ. ಅದನ್ನು ತೆಗೆದುಹಾಕಿ ಎಂದು ಹೇಳಿದ್ದಾರೆ. ಇದರಲ್ಲಿ ಏನು ತಪ್ಪಿದೆ. ಆದರೆ ಈ ಬಗ್ಗೆ ಸಂವಿಧಾನದ ಅರಿವೇ ಇಲ್ಲದ ರಾಹುಲ್ಗಾಂಧಿ, ಸಿದ್ದರಾಮಯ್ಯ, ಜೈರಾಮ್ ರಮೇಶ್ರವರು ಮಾತನಾಡುತ್ತಾರೆ. ಜನರು ಮೂರ್ಖರಲ್ಲ ಎಂದರು.
ಜಾತ್ಯಾತೀತ ಸಮಾಜವಾದಿ ಪದಗಳನ್ನು ಸೇರಿಸುವ ವಿಷಯದಲ್ಲಿ ಸಂವಿಧಾನ ರಚನಾ ಸಭೆಯಲ್ಲಿಯೇ ಅಂಬೇಡ್ಕರ್ ಮತ್ತು ಪ್ರಧಾನಿ ನೆಹರೂ ಅವರು ವಿರೋಧ ಮಾಡಿದ್ದರು. ಆದರೆ ಇಂದಿರಾಗಾಂಧಿಯವರು ಅದನ್ನು ಸೇರಿಸಿ, ಅಂಬೇಡ್ಕರ್ರವರಿಗೆ ಅವಮಾನ ಮಾಡಿದ್ದರು. ಹಾಗಾಗಿ ಈ ಎರಡೂ ಪದಗಳ ಮಧ್ಯೆ ಸಮಗ್ರವಾಗಿ ಚರ್ಚೆನಡೆದು, ಪ್ರಜಾಪ್ರಭುತ್ವಕ್ಕೆ ಅನುಗುಣವಾದ ತೀರ್ಮಾನಗಳು ಈಗಲಾದರೂ ಆಗಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಾಗೀಶ್, ಲೋಕೇಶ್, ಬಾಲು, ಸೋಗಾನೆ ರಮೇಶ್, ಜಾದವ್, ರಾಜು, ಶಿವಕುಮಾರ್, ಕುಬೇರಪ್ಪ ಮುಂತಾದವರಿದ್ದರು.