ಶಿವಮೊಗ್ಗ : ವೈದ್ಯ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಸಹಾಯಕ ಪ್ರಾಧ್ಯಾಪಕ ಅಶ್ವಿನ್ ಹೆಬ್ಬಾರ್ ಎಂಬಾತನ ಮೇಲೆ ಕೂಡಲೇ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಮತ್ತು ಅಮಾನತುಗೊಳಿಸಬೇಕು ಎಂದು ಲಾಯರ್ಸ್ ಗೀಲ್ಡ್ನ ಮುಖ್ಯಸ್ಥ ಹಾಗೂ ವಕೀಲ ಕೆ.ಪಿ. ಶ್ರೀಪಾಲ್ ಸರ್ಕಾರಕ್ಕೆ ಒತ್ತಾಯಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕನಾಗಿರುವ ಅಶ್ವಿನ್ ಹೆಬ್ಬಾರ್ ಎಂಬಾತನ ಲೈಂಗಿಕ ಕಿರುಕುಳದ ಪ್ರಕರಣ ಈಗಾಗಲೇ ಜಗಜ್ಜಾಹೀರವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಿರುಕುಳಕ್ಕೆ ಒಳಗಾದ ಮೆಡಿಕಲ್ ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ದೂರು ನೀಡಿ ಐದು ದಿನಗಳಾದರೂ ಕೂಡ ಯಾವುದೇ ಕ್ರಮವನ್ನು ಕೈಗೊಂಡಿಲ್ಲ, ಪೊಲೀಸರು ಎಫ್ಐಆರ್ ಮಾಡಿದ್ದರೂ ಕೂಡ ಇದೂವರೆಗೆ ಆತನನ್ನು ಬಂಧಿಸಿಲ್ಲ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ಈ ಘಟನೆಗೆ ಸಂಬಂಧಿಸಿದಂತೆ ಸಿಮ್ಸ್ ಆಡಳಿತ ಮಂಡಳಿ ಕೂಡ ಸಂತ್ರಸ್ತೆಯ ಪರವಾಗಿ ನಿಲ್ಲದೆ ಆರೋಪಿಯ ಪರವಾಗಿಯೇ ಇದೆ. ಸಿಮ್ಸ್ ಅಧೀಕ್ಷಕ ವಿರುಪಾಕ್ಷಪ್ಪ ಅವರು ಕೂಡ ಈ ಬಗ್ಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಆತನ ಪರವಾಗಿಯೇ ನಿಲ್ಲುತ್ತಾರೆ. ರಾಜ್ಯ ಸರ್ಕಾರದ ಗಮನಕ್ಕೆ ತಂದರೂ ಕೂಡ ಏನೂ ಪ್ರಯೋಜನವಾಗಿಲ್ಲ. ಪೊಲೀಸರು ಕೂಡ ಸುಮ್ಮನಿದ್ದಾರೆ ಆದ್ದರಿಂದ ರಾಜ್ಯ ಸರ್ಕಾರ ಮಧ್ಯಪ್ರವೇಶಮಾಡಿ, ಕೂಡಲೇ ಈ ಆರೋಪಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದರು.

ಅಶ್ವಿನ್ ಹೆಬ್ಬಾರ್ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆಯೂ ಕೂಡ ಕಾಶ್ಮೀರ ಮೂಲದ ವೈದ್ಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದ. ಅದು ನ್ಯಾಯಾಲಯದ ಮೆಟ್ಟಿಲು ಕೂಡ ಏರಿದೆ. ನ್ಯಾಯಾಲಯದಿಂದ ಸಧ್ಯಕ್ಕೆ ತಡೆಯಾಜ್ಞೆ ಇದ್ದರೂ ಕೂಡ ಪ್ರಕರಣ ಇತ್ಯರ್ಥವಾಗಿಲ್ಲ. ಇಷ್ಟಾದರೂ ಕೂಡ ಈಗ ಮತ್ತೆ ಅದೇ ರೀತಿಯ ವರ್ತನೆಯನ್ನು ಆತ ತೋರಿಸಿದ್ದಾನೆ. ಈ ಪ್ರಕರಣವನ್ನು ಕೂಡ ಮುಚ್ಚಿಹಾಕುವ ಹುನ್ನಾರ ನಡೆದಿತ್ತು. ಆದರೆ ಎಲ್ಲಾ ಕಡೆ ಸುದ್ದಿಯಾದ ನಂತರ ಈಗ ಎಫ್ಐಆರ್ ಆಗಿದೆ ಎಂದರು.
ಪ್ರಕರಣ ದಾಖಲಾಗುತ್ತಿದ್ದಂತೆ ಅಶ್ವಿನ್ ಹೆಬ್ಬಾರ್ ನಾಪತ್ತೆಯಾಗಿದ್ದಾನೆ. ಕೂಡಲೇ ಆತನನ್ನು ಹುಡುಕಿ ಬಂಧಿಸಬೇಕು. ಜಿಲ್ಲಾಧಿಕಾರಿಗಳು ಜಿಲ್ಲಾ ರಕ್ಷಣಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಈತನ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಲಾಯರ್ಸ್ ಗೀಲ್ಡ್ ಮೂಲಕವೇ ಹೈಕೋರ್ಟ್ನಲ್ಲಿ ಸುಮೋಟೋ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಷಹರಾಜ್ ಸಿದ್ದಿಕಿ, ವಿಜಯ್ ಟಿ. ಇದ್ದರು.