ಶಿವಮೊಗ್ಗ, ಜೂ.೨೧:
ರಾಜ್ಯ ಸರ್ಕಾರದಿಂದ ಕಾನೂನಾತ್ಮಕವಾಗಿ ಹಾಗೂ ನಿರ್ದಿಷ್ಟ ನಿಯಮಗಳನ್ನು ರೂಪಿಸುವ ಮೂಲಕ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಇಂದು ಬೆಳಗ್ಗೆ ೨೦೦ಕ್ಕೂ ಅಧಿಕ ಬೈಕ್ ಟ್ಯಾಕ್ಸಿ ಚಾಲಕರ ವತಿಯಿಂದ ಶಿವಮೊಗ್ಗದಿಂದ ಬೆಂಗಳೂರಿನ ವಿಧಾನಸೌದಕ್ಕೆ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸಿದ ಹೈಕೋರ್ಟ್ ಸೂಚನೆ ನೀಡಿತ್ತು. ಇದರಿಂದ ಬೈಕ್ ಟ್ಯಾಕ್ಸಿಯನ್ನೇ ನಂಬಿಕೊಂಡಿದ್ದ ಶಿವಮೊಗ್ಗ ಸೇರಿದಂತೆ ಕರ್ನಾಟಕದಲ್ಲಿ ೬ಲಕ್ಷಕ್ಕೂ ಹೆಚ್ಚು ನೊಂದಾಯಿತ ಬೈಕ್ ಟ್ಯಾಕ್ಸಿಗಳ ಕುಟುಂಬಗಳು ಬೀದಿಗೆ ಬಂದಿವೆ ಎದು ಅಳಲನ್ನು ತೋಡಿಕೊಂಡರು.

ಸರ್ಕಾರವು ಬೈಕ್ ಟ್ಯಾಕ್ಸಿಗಳನ್ನು ಕಾನೂನುಬದ್ಧವಾಗಿ ಸಾರಿಗೆ ವಿಧಾನವೆಂದು ಔಪಚಾರಿಕವಾಗಿ ಗುರುತಿಸಬೇಕು ಮತ್ತು ರಚನಾತ್ಮಕ ನೀತಿ ಚೌಕಟನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ರ್ಯಾಲಿಯಲ್ಲಿ ಬೈಕ್ ಟ್ಯಾಕ್ಸಿ ನಿಲ್ಲಿಸೋದ್ರಿಂದ ಮನೆಯಲ್ಲಿ ಊಟವೇ ಇಲ್ಲ, ನಮ್ಮ ಬದುಕು ಬೀದಿಗೆ ಬಂತು, ಟ್ಯಾಕ್ಸಿ ಉಳಿಸಿ ಎಂಬ ಹಲವು ನಾಮಫಲಕಗಳು ಗಮನ ಸೆಳೆದವು.

ಈ ಸಂದರ್ಭದಲ್ಲಿ ಮಾತನಾಡಿದ ಬೈಕ್ ಟ್ಯಾಕ್ಸಿ ಚಾಲಕ ಮಹೇಶ್, ಶಿವಮೊಗ್ಗ ನಗರದಲ್ಲಿ ಹಲವು ದಿನಗಳಿಂದ ಬೈಕ್ ಟ್ಯಾಕ್ಸಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದೇವು. ಬೈಕ್ ಟ್ಯಾಕ್ಸಿಯಿಂದ ನಮಗೆ ಜೀವನ ನಡೆಸಲು ಅನುಕೂಲವಾಗಿತ್ತು. ಇದ್ದಕ್ಕಿದಂತೆ ಬೈಕ್ ಟ್ಯಾಕ್ಸಿಯನ್ನು ನಿಷೇಧಿಸಿರುವುದು ಆಘಾತವಾಗಿದೆ ಎಂದರು.
ರ್ಯಾಲಿಯಲ್ಲಿ ಬೈಕ್ ಟ್ಯಾಕ್ಸಿ ಚಾಲಕರಾದ ನವೀನ್, ರೇಣುಕಯ್ಯ, ಮಹೇಶ್ ಸೇರಿದಂತೆ ೨೦೦ಕ್ಕೂ ಅಧಿಕ ಮಂದಿ ಬಾಗವಹಿಸಿದ್ದರು.