ಶಿವಮೊಗ್ಗ : ಹೈರ್ ಸ್ಟೈಲ್ ಸರಿಯಿಲ್ಲ, ಸರಿಯಾಗಿ ಕನ್ನಡ ಮಾತನಾಡುವುದಕ್ಕೆ ಬರುವುದಿಲ್ಲ ಅಂತ ನನ್ನ ಬಗ್ಗೆ ಹಗುರವಾಗಿ ಮಾತನಾಡಿದವರಿಗೆ ರಾಜ್ಯದ ಸರ್ಕಾರಿ ಶಾಲೆಯ ಮಕ್ಕಳೇ ಸರಿಯಾದ ಉತ್ತರ ನೀಡಿದ್ದಾರೆಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.

ಅವರು ಇಂದು ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ತಾವು ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಹಲವರು ನಾನಾ ಬಗೆಯ ಟೀಕೆ ಮಾಡಿದ್ದರು. ನನ್ನ ಹೇರ್ ಸ್ಟೈಲ್ ಜೊತೆಗೆ ನನ್ನ ಭಾಷೆಯ ಬಗ್ಗೆಯೂ ಹಗುರವಾಗಿ ಟೀಕೆ-ಟಿಪ್ಪಣಿ ಮಾಡಿದ್ದರು. ಆದರೆ ನಾನು ಆಗ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ನನ್ನ ಕೆಲಸವನ್ನು ನಾನು ಶೃದ್ದೆಯಿಂದ ಮಾಡುತ್ತಾ ಬಂದಿದ್ದೆ. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಟೀಕೆ-ಟಿಪ್ಪಣಿ ಮಾಡಿದವರಿಗೆ ನಮ್ಮ ಇಲಾಖೆಯ ಮಕ್ಕಳೆ ತಮ್ಮ ಸಾಧನೆಯ ಮೂಲಕ ಉತ್ತರ ನೀಡಿದ್ದಾರೆಂದು ವಾಗ್ದಾಳಿ ನಡೆಸಿದರು.

ಶಿಕ್ಷಣ ಸಚಿವರಾಗಿ ಇಲ್ಲಿಗೆ ಎರಡು ವರ್ಷ ಆಯಿತು. ಆರಂಭದಿಂದಲೂ ಫೋಕಸ್ ಇಟ್ಟುಕೊಂಡು ಕೆಲಸ ಮಾಡಲಾಗಿತ್ತು. ಬೀಜ ಬಿತ್ತನೆಯಾಗಿ ಗೊಬ್ಬರ ಹಾಕಿದ ಮೇಲೆ ಫಲ ಸಿಗುವ ಇಲಾಖೆಯಾಗಿರುವುದರಿಂದ ತಕ್ಷಣಕ್ಕೆ ಫಲ ಕೊಡುವ ಇಲಾಖೆಯಲ್ಲ ನನ್ನದಲ್ಲ. ಈಗ ಒಂದಷ್ಟು ಫಲ ಕಾಣಿಸಿದೆ.ಇಲಾಖೆಯ ಸಾಧನೆ ಖುಷಿನೀಡಿದೆ ಎಂದರು.

ನನ್ನ ಮೇಲೆ ವಿಶ್ವಾಸ ಇಟ್ಟು ಸಿಎಂ, ಡಿಸಿಎಂ ಕೆಲಸ ಮಾಡಲು ಹೇಳಿದ್ದಾರೆ. ಸಂವಿಧಾನ ಪೀಠಿಕೆ, ಫ್ರೀ ಎಕ್ಸಾಮ್, ವೆಬ್ ಕಾಸ್ಟಿಂಗ್ ಇವೆಲ್ಲಾ ಮಾಡಿದಾಗ ಟೀಕೆ-ಟಿಪ್ಪಣಿ ಬಂದಿತ್ತು. ಗ್ರೇಸ್ ಮಾರ್ಕ್ ನೀಡುವ ವಿಚಾರದಲ್ಲಿ ಟೀಕಾಟಿಪ್ಪಣಿ ಬಂದಿತ್ತು. ಎರಡನೇ ಪರೀಕ್ಷೆಯಲ್ಲಿ ೭೦% ಪಾಸ್ ಆಗಿದ್ದಾರೆ. ಪರೀಕ್ಷೆಯ ಶುಲ್ಕ ಪಡೆದಿರಲಿಲ್ಲ. ದೇಶದಲ್ಲಿ ಫ್ರೀ ಎಕ್ಸಾಂ ಪಾಲಿಸಿ ಮಾಡಿರುವುದು ನಾವು ಒಬ್ಬರೇ ಎಂದರು.
ಇದೇ ವೇಳೆ ಅವರು ಜಾತಿ ಗಣತಿ ಮರು ಸಮೀಕ್ಷೆಯ ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡರು. ಕೆಲಸವೊಂದು ಕಾರಣಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆ ವಿಚಾರಕ್ಕೆ ಹೋಗುವುದಿಲ್ಲ. ಆದರೆ ಸಾಮಾಜಿಕ ನ್ಯಾಯ ನಮ್ಮ ಸರ್ಕಾರದ ಆದ್ಯತೆ ಎಂದರು.