ಶಿವಮೊಗ್ಗ : ನಗರದ ಗಾಂಧಿಬಜಾರ್ನ ಪಟೇಲ್ ನಾವೆಲ್ಟಿಸ್ ಅಂಗಡಿಯ ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿ, ತಮಿಳುನಾಡಿನ ಪವಳಂ ಇರುವೆ ನಾಶಕಪುಡಿಯನ್ನು ಅನಧೀಕೃತವಾಗಿ ಮಾರಾಟ ಮಾಡುತ್ತಿದ್ದ ಸುಮಾರು ೬೪,೮೦೦ ರೂ. ಬೆಲೆಯ ಇರುವೆ ನಾಶಕಪುಡಿಯನ್ನು ವಶಕ್ಕೆ ಪಡೆದಿದ್ದಾರೆ.

ಸಹಾಯಕ ಕೃಷಿ ನಿರ್ದೇಶಕರಾದ ರಮೇಶ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಪರವಾನಿಗೆ ಇಲ್ಲದೆ ಮಾರಾಟ ಮಾಡುತ್ತಿದ್ದ ಪಟೇಲ್ ನಾವೆಲ್ಟಿಸ್ ಮಾಲೀಕರಿಗೆ ಹಾಗೂ ಸರಬರಾಜು ಮಾಡಿದ ಕಂಪೆನಿಗೆ ನೋಟೀಸ್ ನೀಡಿದ್ದು, ಏಳು ದಿನಗಳೊಳಗೆ ಉತ್ತರ ನೀಡಲು ತಿಳಿಸಿದೆ.

ನೋಟೀಸ್ಗೆ ಉತ್ತರಿಸದಿದ್ದಲ್ಲಿ ಅವರ ಮೇಲೇ ದಾವೆ ಹೂಡಲು ಅವಕಾಶವಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಅಂಗಡಿಯವರ ಬಳಿ ಈ ಸಂಬಂಧ ಯಾವುದೇ ದಾಖಲೆ ಇರಲಿಲ್ಲ. ೧೮ ಬಾಕ್ಸ್ಗಳಲ್ಲಿ ಈ ಪುಡಿಯನ್ನು ಸಂಗ್ರಹಿಸಿದ್ದು, ಹೋಲ್ಸೇಲ್

ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಯಾವುದೇ ಕೃಷಿ ರಾಸಾಯನಿಕಗಳನ್ನು ಪರವಾನಿಗೆ ಇಲ್ಲದ ಮಾರಾಟ ಮಾಡುವುದು ಕಾನೂನಿನ ಉಲ್ಲಂಘನೆಯಾಗಿದ್ದು, ಅಂಗಡಿ ಮಾಲೀಕರ ವಿರುದ್ಧ ಅಧಿಕಾರಿಗಳು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ಚೇತನ್ ಮತ್ತು ಸುನೀಲ್ ಭಾಗಿಯಾಗಿದ್ದರು.