ಶಿವಮೊಗ್ಗ : ಅಭಿವೃದ್ಧಿ ಹೊಂದಿ ಅರ್ಹತೆ ಇರುವ ಮಲ್ನಾಡ್ ಕೌಂಟಿ ಬಡಾವಣೆ ಸೇರಿದಂತೆ ಇತರ ಬಡಾವಣೆಗಳನ್ನು ಪಾಲಿಕೆ ಪಟ್ಟಿಗೆ ಸೇರಿಸಲು ಪಂಚಾಯತಿಯಿಂದ ಶಿಫಾರಸು ಮಾಡಲಾಗುವುದು ಎಂದು ಅಬ್ಬಲಗೆರೆ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಾಜಪ್ಪ ಎಚ್.ಭರವಸೆ ನೀಡಿದರು.

ಅವರು ಸೋಮವಾರ ನಗರದ ಹೊರವಲಯದ ಬಸವನಗಂಗೂರು ಗ್ರಾಮಕ್ಕೆ ಸೇರಿದ, ಸೂಡಾದಿಂದ ಅನುಮೋದನೆ ಪಡೆದ ಮಲ್ನಾಡ್ ಕೌಂಟಿ ಬಡಾವಣೆಯ ನಿವಾಸಿಗಳು ತಮ್ಮ ಬಡಾವಣೆಯನ್ನು ಪಾಲಿಕೆಗೆ ಸೇರಿಸುವಂತೆ ಸಲ್ಲಿಸಿದ ಮನವಿ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಈಗಾಗಲೇ ಪಾಲಿಕೆಯ ಹೊರ ವಲಯದಲ್ಲಿರುವ ಕೆಲ ಗ್ರಾಮಗಳಲ್ಲಿ ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಲು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ತೀರ್ಮಾನವಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆ, ಅಹವಾಲು ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಸವನಗಂಗೂರು ಗ್ರಾಮದ ಸರ್ವೇನಂಬರಿನ ಜಮೀನಿನಲ್ಲಿ ಅಭಿವೃದ್ಧಿ ಪಡಿಸಲಾದ ಮಲ್ನಾಡ್ ಕೌಂಟಿ ನಿವಾಸಿಗಳು ತಮ್ಮ ಬಡಾವಣೆ ಶಹರಕ್ಕೆ ಹತ್ತಿರವಾಗಿದೆ. ಅಲ್ಲದೆ ಪಾಲಿಕೆಯ ಸರ್ಕಾರಿ ನೌಕರರ ಬಡಾವಣೆ, ಬೊಮ್ಮನಕಟ್ಟೆಯ ಎಫ್ ಬ್ಲಾಕಿಗೆ ತಾಗಿಕೊಂಡೇ ಇದೆ. ಸೂಡಾದಿಂದಲೂ ಮಾನ್ಯತೆ ಪಡೆದಿದೆ. ಎಲ್ಲ ರೀತಿಯಲ್ಲೂ ಪಾಲಿಕೆಗೆ ಸೇರಲು ಸೂಕ್ತವಾಗಿದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಪಟ್ಟಿಗೆ ಸೇರಿಸಲು ತಮ್ಮ ಪಂಚಾಯತಿಯಿಂದ ಶಿಫಾರಸ್ಸು ಠರಾವನ್ನು ಜಿಲ್ಲಾಧಿಕಾರಿಗಳಿಗ ಸಲ್ಲಿಸುವುದಾಗಿ ರಾಜಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಡಾ.ಬಾಲಕೃಷ್ಣ ಹೆಗಡೆ, ಎಂ.ಬಸವರಾಜ, ಶಾಂತಕುಮಾರ್, ಶಿವಕುಮಾರ ಮೈಲಾರ, ಗಣೇಶ, ದೇವೇಂದ್ರ, ವಿನಯ್, ಮಾರುತಿ, ಚಿರಂತನಕುಮಾರ್ ಮೊದಲಾದವರಿದ್ದರು.