ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕರು ಬರಲಿರುವ ಪದವಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸಲು ಮುಂದಾಗಿದ್ದಾರೆ.

ಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಸರ್ಕಾರ ತಮ್ಮನ್ನು ನಡೆಸಿಕೊಳ್ಳುತ್ತಿರುವ ನೀತಿಯ ವಿರುದ್ಧ ಸಿಡಿದೆದ್ದಿದ್ದಾರೆ.
ಅತಿಥಿ ಉಪನ್ಯಾಸಕರಿಗೆ ಕೊಡಲಾಗುತ್ತಿರುವ ಕಡಿಮೆ ಗೌರವ ಧನ, ಕಡಿಮೆ ಭತ್ಯೆ, ಪರೀಕ್ಷಾ ಕೊಠಡಿ ಸಂಭಾವನೆ ಮೊದಲಾದವುಗಳಲ್ಲಿ ವಿಶ್ವವಿದ್ಯಾಲಯ ಶೇ.೫೦ರಷ್ಟು ಕಡಿತಗೊಳಿಸಿದೆ. ಅಲ್ಲದೆ ಇವರಿಗೆ ವಿಶ್ವವಿದ್ಯಾಲಯದ ಸೆಮಿಸ್ಟರ್ ಪರೀಕ್ಷಾ ಸಂದರ್ಭಗಳಲ್ಲಿ ಬಾಹ್ಯ ಪರೀಕ್ಷಕರಾಗಿ ಸೇವೆಗೆ ತೆಗೆದುಕೊಳ್ಳದೆ ಇರುವುದು, ಜಾಗೃತ ದಳದಲ್ಲಿ ಸೇರಿಸಿಕೊಳ್ಳದೆ ಇರುವುದು ಇವರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಎನ್.ಇ.ಪಿ. ಪಠ್ಯಕ್ರಮದ ಎರಡು ತಾಸಿನ ಅವಧಿಯ ಪರೀಕ್ಷಾ ಕಾರ್ಯಕ್ಕೆ ವಿವಿಯು ೨೨೫ರೂ. ಸಂಭಾವನೆ ನೀಡುತ್ತಿತ್ತು. ಆದರೆ ಈಗ ಎಸ್.ಇ.ಪಿ.ಪಠ್ಯಕ್ರಮದ ಮೂರು ತಾಸಿನ ಪರೀಕ್ಷಾ ಕಾರ್ಯಕ್ಕೆ ಕೇವಲ ೧೫೦ರೂ. ಸಂಭಾವನೆ ನೀಡುತ್ತಿದೆ ಎಂದು ಅತಿಥಿ ಉಪನ್ಯಾಸಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮೌಲ್ಯಮಾಪನ ಕೇಂದ್ರದಲ್ಲಿ ಮೊದಲು ದಿನಕ್ಕೆ ೩೨ ಉತ್ತರ ಪತ್ರಿಕೆಗಳನ್ನು ನೀಡಲಾಗುತ್ತಿತ್ತು. ಆದರೆ ಈಗ ಒಂದು ದಿನಕ್ಕೆ ೪೦ ಉತ್ತರ ಪತ್ರಿಕೆಗಳನ್ನು ನೀಡಲಾಗುತ್ತಿದೆ. ಒಂದು ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಕೊಡುತ್ತಿದ್ದ ೨೨ರೂ.ಗಳನ್ನು ೧೪ ರೂ.ಗಳಿಗೆ ಇಳಿಸಿದ್ದೂ ಆಕ್ರೋಶಕ್ಕೆ ಕಾರಣವಾಗಿದೆ. ಅದು ಮೌಲ್ಯಮಾಪಕರ ಅಸಮಾಧಾನಕ್ಕೆ ಕಾರಣವಾಗುತ್ತಿದೆ.

ಮ್ಯಾನ್ಯುಅಲ್ ಮೌಲ್ಯಮಾಪನ ಮಾಡುವಾಗಲೇ ಅನೇಕ ನ್ಯೂನ್ಯತೆಗಳು ಕಂಡುಬರುತ್ತಿದ್ದು ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದುದು ಸರ್ವವಿಧಿತ. ಈಗ ಕಳೆದ ಸೆಮಿಸ್ಟರ್ನಲ್ಲಿ ವಿವಿಯು ಡಿಜಿಟಲ್ ಮೌಲ್ಯಮಾಪನವನ್ನು ಆರಂಭಿಸಿದೆ. ಉಪನ್ಯಾಸಕರಿಗೆ ಮುಂಚಿತವಾಗಿಯೇ ಅದರ ಬಗ್ಗೆ ಸರಿಯಾದ ತರಬೇತಿ, ಮಾಹಿತಿ ಇಲ್ಲದ ಕಾರಣ ಆ ಮಲ್ಯಮಾನದಲ್ಲೂ ಸಾಕಷ್ಟು ಏರು ಪೇರುಗಳಾಗಿವೆ ಎಂದು ಅತಿಥಿ ಉಪನ್ಯಾಸಕರು ತಮ್ಮ ಗೋಳನ್ನು ತೋಡಿಕೊಂಡಿದ್ದಾರೆ.
ವಿಶ್ವವಿದ್ಯಾಲಯ ಈಗ ಆಯಾ ವಿಷಯದ ಉಪನ್ಯಾಸಕರ ಮನೆಯಿಂದಲೇ ಡಿಜಿಟಲ್ ಮೌಲ್ಯಮಾಪನ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಇದರಿಂದ ವಿದ್ಯಾರ್ಥಿಗಳಿಗೆ ಎಷ್ಟರಮಟ್ಟಿಗೆ ನ್ಯಾಯ ದೊರಕುವುದು ಎಂಬ ಪ್ರಶ್ನೆ ಮೂಡಿದೆ.
ರಾಜ್ಯದ ಬೇರೆ ವಿಶ್ವವಿದ್ಯಾಲಯಗಳಲ್ಲಿ ಇಲ್ಲದ ನಿಯಮ ಕುವೆಂಪು ವಿಶ್ವವಿದ್ಯಾಲಯಕ್ಕೆ ಏಕೆ. ಖಾಯಂ ಉಪನ್ಯಾಸಕರಂತೆಯೇ ತಮ್ಮನ್ನು ಕಾಣಬೇಕು ಎಂಬುದು ಅತಿಥಿ ಉಪನ್ಯಾಸಕರ ಆಗ್ರಹವಾಗಿದೆ.
ನಾವು ಖಾಯಂ ಉಪನ್ಯಾಸಕರಷ್ಟೇ ಕೆಲಸ ನಿರ್ವಹಿಸುತ್ತೇವೆ. ಕಾಲೇಜುಗಳಲ್ಲಿ ಆಂತರಿಕ ಕಿರು ಪರೀಕ್ಷಾ ಕಾರ್ಯ, ಅದರ ಮೌಲ್ಯಮಾಪನ, ಸೆಮಿಸ್ಟರ್ ಪರೀಕ್ಷಾ ಕಾರ್ಯ ಎಲ್ಲವನ್ನೂ ಮಾಡುತ್ತೇವೆ. ಸಮಾನ ಕೆಲಸ. ಸಮಾನ ವೇತನ ನೀತಿಯನ್ನು ಸರ್ಕಾರ, ವಿಶ್ವವಿದ್ಯಾಲಯಗಳು ಏಕೆ ಅನುಸರಿಸುತ್ತಿಲ್ಲ? ತಾರತಮ್ಯವೇಕೆ? ಇದು ಅತಿಥಿ ಉಪನ್ಯಾಸಕರ ಮೇಲಿನ ಶೋಷಣೆ ಅಲ್ಲದೆ ಮತ್ತೇನು ? ಅತಿಥಿ ಉಪನ್ಯಾಸಕರಿಗೂ ಜಾಗೃತ ದಳ, ಅಬ್ಸರ್ವರ್ ಕೆಲಸದ ಅವಕಾಶ ಕೊಡಬೇಕು. ಇಲ್ಲದಿದ್ದರೆ ಮೌಲ್ಯಮಾಪನ ಬಹಿಷ್ಕಾರ ನಿಶ್ಚಿತ.
-ಅರುಣ್ ಕುಮಾರ್, ಅಧ್ಯಕ್ಷ, ರಾಜ್ಯ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ.