
ಹಿಮಾಲಯದಿಂದ ನೇರ ಸುದ್ದ, ಮೇ.30:
ಹಿಮಾಲಯದ ಶಿಖರದಿಂದ ಭಾರತದ ಪ್ರತಿ ಮನೆ ಮನೆ ಗಳಲ್ಲಿ ಸಂಸ್ಕೃತ ವಾಣಿ ಮೊಳಗಬೇಕು ಎಂದು ಕನ್ನಡ ಹಾಗೂ ಸಂಸ್ಕೃತ ಭಾಷೆಯ ಪ್ರಸಿದ್ಧ ಚಲನಚಿತ್ರ ನಟ ಕೆ.ಸುಚೇಂದ್ರ ಪ್ರಸಾದ್ ತಿಳಿಸಿದರು. ಅವರು
ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ನವದೆಹಲಿ ಸಂಸ್ಕೃತ ಭಾರತಿ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಶಿವಮೊಗ್ಗ ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕ ಶಿವಮೊಗ್ಗ ಗಿರ್ವಾಣಭಾರತಿ ಘಟಕ ಶ್ರೀ ಆದಿಚುಂಚನಗಿರಿ ಕ್ಷೇತ್ರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಿಮಾಲಯದ ಕುಲು ತಪ್ಪಲಿನಲ್ಲಿರುವ ರೋಲಿ ಖೋಲಿ ಹಿಮಾಲಯ ಪರ್ವತದಲ್ಲಿ 30.05.2025 ರ ಬೆಳಿಗ್ಗೆ 10.30 ಕ್ಕೆ ಸಂಸ್ಕೃತ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯಲ್ಲಿ ಬರುವ ದೇಶದ ಎಲ್ಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿರುವ ಇಂತಹ ಹಿಮಾಲಯ ಚಾರಣ ಪ್ರತಿಯೊಂದು ವಿಶ್ವವಿದ್ಯಾಲಯಗಳು ಅನುಸರಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಅವರು ಸಂಸ್ಕೃತದ ಬಗ್ಗೆ ಮಾತನಾಡುತ್ತ
ಸ್ವಯಂಕೃತವಲ್ಲದ, ಆದರೆ ಸಂಸ್ಕರಣಗೊಂಡ ವಿಶ್ವಭಾಷೆಯೇ “ಸಂಸ್ಕೃತ” ಎಂಬುದು ಸರ್ವವಿದಿತ.
‘ಸರ್ವಭಾಷಾಮಯೀಭಾಷಾ’ ಎಂಬ ತಲೆಬರೆಹದೊಂದಿಗೆ ‘ಪ್ರಾಕೃತ’ವು ಪ್ರಸಕ್ತಕ್ಕೂ ಸಲ್ಲಿಕೆಯಾಗಿ ಅತ್ಯಂತ “ವೈಜ್ಞಾನಿಕ ಸಂವಹನ ಸಾಧನ” ವಾಗಿ ದಕ್ಕುತ್ತಿರುವುದು ಗಮನೀಯ ಎಂದು ಹೇಳಿದರು.

ಗೀರ್ವಾಣವಾಣಿಯ ಕುರಿತು ‘ಕೈಗೆಟುಕದ ದ್ರಾಕ್ಷಿ ಹುಳಿ’ ಎಂಬ ಏಕಮೇವ ಕಾರಣಕ್ಕೆ ಇಡಿಯ ಜ್ಞಾನಶಾಖೆಯೊಂದನ್ನು ದೂರವಿಡುವುದರಿಂದ ಭರತಖಂಡದ ಪಾರಂಪರಿಕ ಅಸ್ಮಿತೆ ಲುಪ್ತವಾಗದಂತೆ ತಡೆಯಲು ದೇಶದಾದ್ಯಂತ ಪಸರಿಸಿರುವ ಸಂಸ್ಕೃತ ಪ್ರೇಮವುಳ್ಳ ಹಿತೈಷಿಗಳು ಅನೂಹ್ಯವಾದಂತಹ ಅನೇಕಾನೇಕ ಸಂಬದ್ಧ ಚಟುವಟಿಕೆಗಳಲ್ಲಿ ತೊಡಗಿರುವುದೂ ದಾಖಲುಯೋಗ್ಯವೇ ಆಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸ್ಥಿರವೂ – ಚರವೂ ಆದ ಸಂಸ್ಕೃತ ಪ್ರಸಾರಕ್ಕೆ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಕುಲಪತಿಗಳಾದ ಶ್ರೀನಿವಾಸ ವರಖೇಡಿಯವರು ಇಂತಹ ಸಾಹಸದ ಕಾರ್ಯಕ್ರಮ ಆಯೋಜಿಸುವುದರ ಮೂಲಕ ಮಾದರಿಯಾಗಿದ್ದಾರೆ. ಅವರಿಗೆ ಬಾಗಿದ ಶಿರದ ನಮನ, ಪ್ರಥಮಂ ವಂದೇ. ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಶಿವಮೊಗ್ಗೆಯ ಸಂಸ್ಕೃತ ಪರಿಚಾರಕರಾಗಿ, ‘ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ’ಯ ಸ್ಥಾಪಕ ಮಹೋದಯರಾಗಿ ಸುಪರಿಚಿತರಾಗಿರುವ ವಿಜಯೇಂದ್ರ ರಾವ್ ಅವರ ಚಾಲಕ – ಸಂಚಾಲಕ ಸಾಮರ್ಥ್ಯ ನೇರ್ಪುಗೊಂಡು ಕೇಂದ್ರ ಸಂಸ್ಕೃತ ಸಂಸ್ಥಾನ ಮತ್ತಿತರ ದೇಶದ ಬಹುಮಾನ್ಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ರಾಷ್ಟ್ರಮಟ್ಟದ ಅಭಿಯಾನವೊಂದು ಹಿಮಾಚ್ಛಾದಿತ ಪರ್ವತಂಗಳ ಉತ್ತುಂಗದಲ್ಲಿ “ಸಂಸ್ಕೃತ ಧ್ವಜ” ದ ಆರೋಹಣವ ನೆರವೇರಿಸಿ ಕಣ್ತುಂಬಿಕೊಳ್ಳುವ ಶ್ರೇಯ ಬಹ್ವರಿಗೆ ದುರ್ಲಭ. ಭಾರತೀಯ ಕಲೆ – ಸಾಹಿತ್ಯದುತ್ಥಾನಕ್ಕೆ ಕಟಿಬದ್ಧ ಸಂಸ್ಕಾರ ಭಾರತೀ ರಾಷ್ಟ್ರೀಯ ಸಂಸ್ಥೆಯ ಕರ್ನಾಟಕದ ಪ್ರಾಂತಾಧ್ಯಕ್ಷನ ಜವಾಬ್ದಾರಿಯನ್ನೂ ಹೊತ್ತ ನನ್ನಂತಹವನಿಗಿದು ಅರಸಿ ಬಂದ ಶ್ರೇಯವೇ ಸರಿ.
“ಹಿಮಾಲಯಸ್ಯ ಶಿಖರೇ ಶಿಖರೇ ಸಂಸ್ಕೃತಮ್, ಭಾರತಸ್ಯ ಗೇಹೇ ಗೇಹೇ ಸಂಸ್ಕೃತಮ್” ಘೋಷವಾಕ್ಯ ಕೊಡಮಾಡಿ ಐವತ್ತಕ್ಕೂ ಮಿಗಿಲಾದ ಸಂಸ್ಕೃತ ವಿದ್ಯಾರ್ಥಿಗಳ ತಂಡವನ್ನು ಪ್ರಾಯೋಜಿಸಿ ದೂರದರ್ಶಿತ್ವ ಮೆರೆದ ಕೇಂದ್ರ ಸಂಸ್ಕೃತ ಸಂಸ್ಥಾನಕ್ಕೂ, ಈ ಸಂದರ್ಭ, ನೆನಕೆ ಸಲ್ಲಿಕೆಯಾಗಲೇ ಬೇಕು ಎಂದು ಹೇಳಿದರು.

ದೇವಾನುದೇವತೆಗಳ ಆವಾಸ ಸ್ಥಾನವೇ ಹಿಮಾಲಯವೆಂಬ ಅಚಲ ನಂಬುಗೆಯ ಭಾರತೀಯರ ಪ್ರತಿ ಮನೆ – ಮನಂಗಳು ಸಂಸ್ಕೃತಭೂಯಿಷ್ಠವೆಂದೂ, ಅರಿವಿನ ಹಿಮವೆಂದೂ ಲಯವಾಗದಿರಲೆಂಬ ಶುಭೇಚ್ಛೆಯ ಅರುಹಲೆಂದೇ ಪ್ರಾತಿನಿಧಿಕವಾಗಿ ದೇಶವ್ಯಾಪಿ ಸಂಸ್ಕೃತ ವ್ಯಾಸಂಗ ಗೈಯ್ಯುತ್ತಿರುವ ಸುಮನಸ್ಕರ ದಂಡು ಇಂದಿನ ಸಂಸ್ಕ್ರತ ಧ್ವಜಾರೋಹಣಕ್ಕೆ ಸಾಕ್ಷಿಯಾದುದೂ ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆಯಲಿದೆ.
“ಶೈಲೇ ಶೈಲೇ ನ ಮಾಣಿಕ್ಯಮ್, ಮೌಕ್ತಿಕಂ ನ ಗಜೇ ಗಜೇ..” ಎಂಬ ಸೂಕ್ತಿಯಂತೆ, “ಲೋಕೋತ್ತರಾಣಾಂ ಚೇತಾಂಸಿ ಕೋಹುವಿಜ್ಞಾತುಮರ್ಹತಿ” ಎಂಬಂತೆಯೇ ಇಂದಿನ ನಮ್ಮೀ ನಡೆ – ನುಡಿ, ಭವಿಷ್ಯದ ತಲೆಮಾರುಗಳಿಗೆ ಸಾಧ್ಯತೆಗಳ ಪಥದರ್ಶನ ಮಾಡಿಸುವುದು ನಿಸ್ಸಂದೇಹ.
ಅನಾದಿ ಕಾಲದಿಂದಲೂ ಮನುಷ್ಯರ ಅನೇಕ ಸುಚೇಷ್ಟೆಗಳಿಗೆ ಮೌನಸಾಕ್ಷಿಯಾಗಿ ನಿಂತಿರುವ ಹಿಮವತ್ಪರ್ವತದ ಈ ಹನ್ನೆರೆಡು ಸಾವಿರ ಅಡಿಗಳೆತ್ತರದ ಶಿಖರಪ್ರಾಯ ಸಾಧನೆಯು ದೇಶಬಂಧುಗಳೆಲ್ಲರ ಸಂಸ್ಕೃತಪ್ರೇಮವನ್ನು ಚಿರಂತನ ಉದ್ದೀಪಿಸುವಂತಾಗಲೆಂಬ ಶುಭೇಚ್ಛೆಯೊಂದಿಗೆ ಸಂಸ್ಕೃತ ಮನೆ ಮನೆಗಳಲ್ಲಿ ಮೊಳಗಲಿ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಚಾರಣದ ರೂವಾರಿ ನವೀನ ಚಂದ್ರ ತಿವಾರಿ, ಶೇಮ್ಸ್, ತಾರಾಚಂದ್, ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ರಾಜು ಮೌರ್ಯ, ವಿಜಯ್ ಮಹಾರಾಷ್ಟ್ರ ಚಾರಣಿಗರಾದ ಡಾ.ಅಜಯ್, ಡಾ.ಮಂಜೂಷ, ಉಪಸ್ಥಿತರಿದ್ದರು.