ಶಿವಮೊಗ್ಗ : ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾಧಿ ನಾರಾಯಣಸ್ವಾಮಿ ಅವರ ಮೇಲೆ ಸಚಿವ ಪ್ರಿಯಾಂಕ್ಖರ್ಗೆ ಮತ್ತು ಅವರ ಬೆಂಬಲಿಗರು ನಡೆಸಿರುವ ದೌರ್ಜನ್ಯವನ್ನು ಖಂಡಿಸಿ ಬಿಜೆಪಿ ವತಿಯಿಂದ ಪ್ರಿಯಾಂಕ ಹಠಾವೋ ಕಲ್ಬುರ್ಗಿ ಬಚಾವೋ ಆಂದೋಲನವನ್ನು ನಾಳೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರ್ಗಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದಂತಹ ವಾತಾವರಣ ಕಂಡುಬರುತ್ತಿದೆ. ಛಲವಾದಿ ನಾರಾಯಣಸ್ವಾಮಿ ಅವರನ್ನು ಪ್ರಿಯಾಂಕ ಖರ್ಗೆ ಬೆಂಬಲಿಗರು ನಾಲ್ಕೈದು ಗಂಟೆಗಳ ಕಾಲ ಬಂಧನದಲ್ಲಿರಿಸಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇದನ್ನ ಭಾರತೀಯ ಜನತಾ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದರು.
ಕಲ್ಬುರ್ಗಿ ಜಿಲ್ಲೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ಮತ್ತು ಅವರ ಬೆಂಬಲಿಗರು ಕಾನೂನನ್ನು ಕೈಗೆತ್ತಿಕೊಳ್ಳುವಂತಹ ಕಾರ್ಯಕ್ಕೆ ಮುಂದಾಗಿದ್ದಾರೆ. ವಿಪಕ್ಷ ನಾಯಕನ ಮೇಲೆಯೇ ಈ ರೀತಿ ಹಲ್ಲೆಗೆ ಮುಂದಾದರೆ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದ ಅವರು ರಾಜ್ಯದಲ್ಲಿ ಇಂತಹ ಗುಂಡಾವರ್ತನೆ ನಿರಂತರವಾಗಿ ನಡೆಯುತ್ತಲೇ ಇದೆ ಇದು ಅಕ್ಷಮ್ಯ ಅಪರಾಧವಾಗಿದೆ ಸಂವಿಧಾನದ ಬಗ್ಗೆ ಮಾತನಾಡುವ ಪ್ರಿಯಾಂಕ ಖರ್ಗೆ ಅವರು ತಾವೇ ಸಂವಿಧಾನದ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ದೂರಿದರು.

ಸಚಿವ ಸಂಪುಟದ ಸಚಿವರೊಬ್ಬರು ಈ ರೀತಿ ಗುಂಡಾವರ್ತನೆ ಮಾಡುತ್ತಿದ್ದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆವರಿಗೆ ಬುದ್ದಿಹೇಳುವಂತಹ ಕಾರ್ಯವನ್ನು ಮಾಡುತ್ತಿಲ್ಲ. ಇವರ ಈ ಒಂದು ಕಾರ್ಯಕ್ಕೆ ಮುಖ್ಯಮಂತ್ರಿಗಳ ಬೆಂಬಲವೂ ಇದೆ ಎಂಬ ಅನುಮಾನವಿದೆ ಎಂದು ದೂರಿದರು.

ಕಲ್ಬುರ್ಗಿಯಲ್ಲಿ ಪೊಲೀಸ್ ಅಧಿಕಾರಿಗಳು ಪ್ರಿಯಾಂಕ ಖರ್ಗೆ ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಕಾಂಗ್ರೆಸ್ ಪಕ್ಷದ ನಾಯಕರನ್ನ ಮೆಚ್ಚಿಸುವ ಸಲುವಾಗಿ ಪ್ರಿಯಾಂಕ ಖರ್ಗೆ ಈ ಮಟ್ಟಕ್ಕೆ ಇಳಿದಿದ್ದಾರೆ ಕೂಡಲೇ ಮುಖ್ಯಮಂತ್ರಿಗಳು ಮರಿ ಖರ್ಗೆಯವರ ರಾಜೀನಾಮೆಯನ್ನು ಪಡೆಯಬೇಕೆಂದು ಒತ್ತಾಯಿಸಿದರು.
ಕಲ್ಬುರ್ಗಿ ನಗರದಲ್ಲಿ ನಡೆಯುತ್ತಿರುವ ಇಂತಹ ಘಟನೆಯನ್ನು ಖಂಡಿಸಿ ಮೇ ೨೪ರಂದು ಪ್ರಿಯಾಂಕ ಖರ್ಗೆ ಹಠಾವೋ, ಕಲ್ಬುರ್ಗಿ ಬಚಾವೋ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ರಾಜ್ಯದ ನಾಯಕರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದ್ದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಂದ ಜನಪ್ರತಿನಿಧಿಗಳು ಹಾಗೂ ಪಕ್ಷದ ಪದಾಧಿಕಾರಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಮೋಹನ್ ರೆಡ್ಡಿ, ದೇವರಾಜ್, ಮಾಲತೇಶ್ ಅಣ್ಣಪ್ಪ ಶಿವರಾಜ್ ಇತರರು ಉಪಸ್ಥಿತರಿದ್ದರು.