ಶಿವಮೊಗ್ಗ, ಮೇ.22:
ಭದ್ರಾವತಿ ತಾಲೂಕು ಹುಣಸೇಕಟ್ಟೆ ಗ್ರಾಮದ ಕಸಬಾ ಸರ್ವೇ ನಂಬರ್ 42ರ ಎರಡು ಎಕರೆ ದನಗಳ ಮುಪ್ಪತ್ತಿನ ಜಮೀನನ್ನು ಭದ್ರಾವತಿ ಮೂಲದ ಸಹೋದರರಿಬ್ಬರು ಪಡೆಯಲು ರಾಜ್ಯ ಉಚ್ಚ ನ್ಯಾಯಾಲಯದ ಹಾಗೂ ಜಿಲ್ಲಾಧಿಕಾರಿಗಳ ಹೆಸರಲ್ಲಿ ನಕಲಿ ಆದೇಶ ಸಂಖ್ಯೆ ಹಾಕಿ ವಂಚಿಸಿರುವ ಘಟನೆ ನಡೆದಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಇತರ ಕಂದಾಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಹೋರಾಟಗಾರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಶಿವರಾಂ ಇಂದಿಲ್ಲಿ ಒತ್ತಾಯಿಸಿದರು.
ಅವರಿಂದು ಬೆಳಿಗ್ಗೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಕಳೆದ ಜನವರಿ 2024ರ ಐದರಂದು ಜಿಲ್ಲಾಧಿಕಾರಿಗಳ ಆದೇಶದನ್ವಯ ಅಂದಿನ ತಹಶೀಲ್ದಾರ್ ಈ ಅತಿಕ್ರಮಣ ಜಾಗವನ್ನು ತೆರವುಗೊಳಿಸಿ ಕಂಬದಾಳು ಹೊಸೂರು ಪಂಚಾಯಿತಿ ವಹಿಸಿ, ಅತಿಕ್ರಮ ಪ್ರವೇಶ ಮಾಡಬಾರದೆಂದು ಬೋರ್ಡ್ ಹಾಕಿದ್ದರು. ಆದರೆ ದಿನ ಕಳೆದಂತೆ ಅನ್ನದಾತನ ದಾರಿಗೆ ಬೇಲಿ ಹಾಕಿ ದಿಡೀರನೆ ರೈತನಾಗಲು ಬಂದಿರುವ ವೈದ್ಯರೊಬ್ಬರು ಹಾಗೂ ಯಾವ ವಿಷಯವೂ ಗೊತ್ತಿಲ್ಲದ ಅವರ ಸಹೋದರರ ಹೆಸರಿನಲ್ಲಿ ಈ ಜಾಗವನ್ನು ಕಬಳಿಸಲು ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ ಸಂಖ್ಯೆ 154 25/24 , ಶಿವಮೊಗ್ಗ ಉಪ ಜಿಲ್ಲಾಧಿಕಾರಿ ಆದೇಶ ಸಂಖ್ಯೆ 90/ 2024/ 480131 ಮೇರೆಗೆ ಈ ಜಮೀನಿನಲ್ಲಿ ಯಾರು ಅತಿಕ್ರಮ ಪ್ರವೇಶ ಮಾಡಬಾರದು. ಮಾಡಿದರೆ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ಪ್ರಸನ್ನ ಮೂರ್ತಿ ಎಚ್ ಕೆ ಎಂಬ ಹೆಸರು ಹಾಕಿ ಬ್ಯಾನರನ್ನು ಕಟ್ಟಿ ರಾತ್ರೋರಾತ್ರಿ ಕೆಲ ಪುಂಡರ ಗುಂಪು ಬಿಟ್ಟು ಕಲ್ಲುಕಂಬ ತಂತಿಬೇಲಿ ಹಾಕಿ ಹಾಗೆಯೇ ಉಳುಮೆ ಮಾಡಿ ಬಿತ್ತನೆ ಬೀಜ ಬಿತ್ತಿದ್ದಾರೆ. ಇದು ಗ್ರಾಮದ ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.
ಈಗಾಗಲೇ ಗ್ರಾಮಸ್ಥರು ತಹಶೀಲ್ದಾರ್,ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರುಇ ಕನಿಷ್ಠ ಒಬ್ಬರೂ ಪರಿಶೀಲನೆಗೆ ಬರೆದಿರುವುದು ದುರಂತವೇ ಹೌದು. ಈ ಕೂಡಲೇ ಜಿಲ್ಲಾಧಿಕಾರಿಗಳೇ ನೇರವಾಗಿ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಆಗಮಿಸಿ ಕಾನೂನು ಬದ್ಧವಾಗಿದ್ದರೆ ಅವರಿಗೆ ಬಿಟ್ಟು ಕೊಡಲಿ.ಇಲ್ಲದಿದ್ದರೆ ಸರ್ಕಾರಿ ಜಾಗವನ್ನು ಉಳಿಸಿ ಎಂದು ಒತ್ತಾಯಿಸಿದರು.

ನಾನು 2993ರಲ್ಲಿ ಎರಡು ಎಕರೆ ಭೂಮಿಯನ್ನು ಕೊಂಡು ಇಲ್ಲಿ ಉಳುಮೆ ಮಾಡುತ್ತಿದ್ದೇನೆ. ಪರಿಸರದ ಕಳಕಳಿ ಹಾಗೂ ಬೀದಿ ನಾಟಕಗಳ ಮೂಲಕ ಜನಜಾಗೃತಿ ಮೂಡಿಸುತ್ತಿರುವ ನನಗೆ ಈ ಜಾಗವನ್ನು ಗ್ರಾಮದ ಅಭಿವೃದ್ಧಿಗೆ ಉಳಿಸಲು ಚಿಂತಿಸುತ್ತಿದ್ದೇನೆ. ನನಗೆ ನಿಜವಾಗಿಯೂ ಈ ಜಾಗ ಬೇಕಿಲ್ಲ. ಗ್ರಾಮದಲ್ಲಿ ಸರ್ಕಾರಿ ಕಾಲೇಜ್ ಸರ್ಕಾರಿ ಆಸ್ಪತ್ರೆ ಇಲ್ಲವೇ ಯಾವುದಾದರೂ ಜನೋಪಯೋಗಿ ಉದ್ದೇಶದ ಕಾರ್ಯಕ್ರಮಕ್ಕೆ ಬಳಸುವಂತೆ ವಿನಂತಿಸುತ್ತೇನೆ ಎಂದು ಪರಿಸರ ಶಿವರಾಂ ತಿಳಿಸಿದರು.

ಈ ಜಾಗ ಸರ್ಕಾರಿ ಜಾಗ ಎಂದು ಗೊತ್ತಿದ್ದರೂ ಸಹ ಒಂದಿಷ್ಟು ದಿನ ಬಿಟ್ಟು ಮತ್ತೆ ರಗಳೆ ತೆಗೆದು ಅನಗತ್ಯವಾಗಿ ಗ್ರಾಮದ ಜನರ ಮಧ್ಯದಲ್ಲಿ ಗುಂಪುಗಳನ್ನು ಕಟ್ಟಿ ಜನರ ಹೊಡದಾಟಕ್ಕೆ ಕಾರಣರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅದಕ್ಕೂ ಪೂರ್ವದಲ್ಲಿ ದಾಖಲಾತಿಗಳ ಪರಿಶೀಲನೆ ನಡೆಯಬೇಕು ಎಂದು ಒತ್ತಾಯಿಸಿದರು.
ಉಗ್ರ ಕಠಿಣ ಶಿಕ್ಷೆಗೆ ಒತ್ತಾಯ:
ಉಚ್ಚ ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿಗಳ ಆದೇಶ ಸಂಖ್ಯೆಗಳನ್ನೇ ಸುಳ್ಳು ಹೇಳಿ ಜಮೀನು ಕಬಳಿಸಲು ಮುಂದಾಗಿರುವ ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ದಯಮಾಡಿ ಜಿಲ್ಲಾಧಿಕಾರಿಗಳು ಇತ್ತ ಗಮನಿಸಬೇಕು ಇಲ್ಲದಿದ್ದರೆ ನಮ್ಮ ಮುಂದಿನ ಹೋರಾಟ ಇನ್ನಷ್ಟು ಉಗ್ರ ವಾಗುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮದ ಪ್ರಮುಖರಾದ ರಾಜು, ಮೋಹನ್ ಕುಮಾರ್, ಮೇಘನಾ ಹಾಗೂ ಇತರರು ಉಪಸ್ಥಿತರಿದ್ದರು.