ಶಿವಮೊಗ್ಗ: ದಿವಂಗತ ಡಿ.ಕೆ.ಸದಾಶಿವ್ ಅವರ ನಿಸ್ವಾರ್ಥ ಸೇವೆ ಮತ್ತು ಗಮನಾರ್ಹ ನಾಯಕತ್ವ ಯಾವಾಗಲೂ ಸ್ಮರಣೀಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಅವರು ಭಾನುವಾರ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘವು ಇತ್ತೀಚೆಗೆ ನಿಧನರಾದ ಭಾರತೀಯ ಮಜದೂರ್ ಸಂಘದ ಅಖಿಲ ಭಾರತೀಯ ಉಪಾಧ್ಯಕರಾಗಿದ್ದ ಡಿ.ಕೆ.ಸದಾಶಿವ ಅವರಿಗೆ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಡಿ.ಕೆ.ಸದಾಶಿವ ಅವರು ಕರ್ನಾಟಕ ಕಾರ್ಮಿಕ ಚಳುವಳಿಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಶಿವಮೊಗ್ಗದ ಸಾಮಾನ್ಯ ಬಡ ಕುಟುಂಬzಲ್ಲಿ ಜನಿಸಿದ ಅವರು ಬಿ.ಎಸ್ಸಿ ಪದವೀಧರರಾಗಿದ್ದರು. ನೌಕರಿ, ಚಾಕರಿ, ಕೌಟುಂಬಿಕ ಜೀವನದಲ್ಲಿ ಆಸಕ್ತಿ ಇಲ್ಲದ ಅವರಿಗೆ ನಾಟಕ, ಕುಸ್ತಿ, ಸಿನೆಮಾ ಅಂದರೆ ಪಂಚಪ್ರಾಣವಾಗಿತ್ತು. ಸಂಘದ ಪ್ರಮುಖರಾಗಿದ್ದ ಯಾದವರಾವ್ ಜೋಷಿ, ಹು.ವೆ.ಶೇಷಾದ್ರಿ, ಜಯದೇವ, ನ.ಕೃಷ್ಣಪ್ಪ, ಡಿ.ಎಚ್.ಶಂಕರಮೂರ್ತಿ, ಎಚ್.ಅನಂತಕುಮಾರ್, ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಆತ್ಮೀಯ ಸಂಬಂಧವನ್ನು ಇಟ್ಟುಕೊಂಡಿದ್ದರು ಎಂದು ಸ್ಮರಿಸಿದರು.
೧೯೭೫ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ, ವೆಂಕಟರಾಮ್ ಡಿ.ಕೆ.ಸದಾಶಿವ ಅವರೆಲ್ಲ ಬಂಧನಕ್ಕೊಳಗಾಗಿ ೧೮ ತಿಂಗಳ ಕಾಲ ಬಳ್ಳಾರಿ ಜೈಲಿನಲ್ಲಿರಬೇಕಾಯಿತು. ಓರ್ವ ಕಾರ್ಯಕರ್ತ ಮಧ್ಯ ವಯಸ್ಸಿನಲ್ಲಿ ತಮ್ಮ ಮನೆ ಮಠ ಬಿಟ್ಟು ಸಂಘಟನೆಯ ಅಪೇಕ್ಷೆಗೆ ತಕ್ಕಂತೆ ಒಂದು ಕ್ಷೇತ್ರದಲ್ಲಿ ನಿಂತು ನಿರಂತರವಾಗಿ ಕೆಲಸ ಮಾಡಿರುವುದು ಅವರಿಗೆ ಸಂಘಟನೆ, ಸಮಾಜದ, ಹಿರಿಯರ ಮೇಲೆ ಇದ್ದ ಗೌರವ, ಶ್ರದ್ಧೆ, ಸಮರ್ಪಣಾ ಭಾವ ಎಲ್ಲ ಎದ್ದು ಕಾಣುತ್ತದೆ ಎಂದು ಗುಣಗಾನ ಮಾಡಿದರು.

ಅವಿವಾಹಿತರಾಗೇ ಉಳಿದು ಒಂದು ಸಿದ್ದಾಂತಕ್ಕಾಗಿ, ತಾನು ನಂಬಿದ ಧ್ಯೇಯಕ್ಕಾಗಿ ತಮ್ಮ ಇಡೀ ಬದುಕನ್ನು ಮುಡುಪಾಗಿಟ್ಟ ಡಿ.ಕೆ.ಸದಾಶಿವ ಇನ್ನು ಕೇವಲ ನೆನಪು ಮಾತ್ರ. ಅವರ ಮರಣ ಕಾರ್ಮಿಕ ಸಮುದಾಯಕ್ಕೆ ಅಪಾರ ನಷ್ಟ. ತುಂಬಲಾರದ ಶೂನ್ಯ ಆವರಿಸಿದೆ. ಅವರು ಇನ್ನೂ ಹೆಚ್ಚು ಕಾಲ ಬದುಕಬೇಕಾಗಿತ್ತು. ನಮಗೆಲ್ಲ ಮಾರ್ಗರ್ಶನ ಮಾಡಬೇಕಾಗಿತ್ತು ಎಂಬ ಅಪೇಕ್ಷೆ ನಮ್ಮೆಲ್ಲರದ್ದಾಗಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕಾರ್ಮಿಕ ಮುಖಂಡರಾಗಿದ್ದ ದಿ.ಡಿ.ಕೆ.ಸದಾಶಿವ ಅವರು ಭಾರತ ಮಜದೂರ್ ಸಂಘದ ಮೂಲಕ ಕಾರ್ಮಿಕರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದರು. ಅವರು ಧೀಮಂತ ನಾಯಕರಾಗಿದ್ದರು. ಹತ್ತಿದ ಏಣಿಯನ್ನು ಒದ್ದು ಕೃತಘ್ನತೆಯನ್ನು ತೋರುವ ಇಂದಿನ ಸಂದರ್ಭದಲ್ಲಿ ಡಿ.ಕೆ.ಸದಾಶಿವ ಅವರು ಸಂಕಷ್ಟದಲ್ಲಿದ್ದ ಕಾರ್ಮಿಕರ ಬಗ್ಗೆ ತೋರಿದ ಪ್ರಾಮಾಣಿಕತೆ ಅನುಕರಣೀಯ ಎಂದರು.
ಕಾರ್ಮಿಕ ಮುಖಂಡ, ಮಾಜಿ ಶಾಸಕ ಆಯನೂರು ಮಂಜುನಾಥ ಮಾತನಾಡಿ, ಸದಾಶಿವ ಅವರು ಬಹುಭಾಷಾ ಪಾಂಡಿತ್ಯವನ್ನು ಹೊಂದಿ ಎಲ್ಲರ ಜೊತೆ ಸಂವಹನ ಸಾಮರ್ಥ್ಯ ಹೊಂದಿದ್ದರು. ೪೦-೫೦ ಯೂನಿಯನ್ ಗಳ ಮಾರ್ಗದರ್ಶಕರಾಗಿದ್ದರು. ಎಷ್ಟೇ ದೊಡ್ಡ ದೊಡ್ಡ ಪ್ರಭಾವಿಗಳ ಸಂಪರ್ಕವಿದ್ದರೂ ಬೆಂಗಳೂರಿನ ಇಎಸ್ ಐ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು ಎಂದ ದಿವಂಗತರ ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಅನಾವರಣ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎ.ಎಸ್.ಪದ್ಮನಾಭ ಭಟ್, ಆರ್.ಕೆ.ಸಿದ್ರಾಮಣ್ಣ, ಗಿರೀಶ್ ಪಟೇಲ್, ಎಸ್.ದತ್ತಾತ್ರಿ, ಎ.ಜೆ.ರಾಮಚಂದ್ರ, ಎಸ್.ಎಸ್.ಜ್ಯೋತಿಪ್ರಕಾಶ್, ಹರಿಕೃಷ್ಣ, ವಿಶ್ವನಾಥ್, ರತ್ನಾಕರ ಶೆಣೈ ಮೊದಲಾದವರಿದ್ದರು.