ಶಿವಮೊಗ್ಗ : ಮೇ.೧೮ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶಿವಮೊಗ್ಗಕ್ಕೆ ಬರುತ್ತಿದ್ದಾರೆ ಎಂಬ ಮಾಹಿತಿ ಇದ್ದು, ಆ ಸಂದರ್ಭದಲ್ಲಿ ಜಿಲ್ಲೆಯ ಜನತೆಯ ಕೆಲವು ಮುಖ್ಯ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಆಗ್ರಹಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್ ರಾವ್ ಅವರ ಮನೆಗೆ ತೆರಳಿ ಸಾಂತ್ವನ ಹೇಳಬೇಕು. ಆ ಕುಟುಂಬಕ್ಕೆ ಸರ್ಕಾರ ಘೋಷಿಸಿರುವ ೧೦ಲಕ್ಷ ರೂ.ಪರಿಹಾರ ಮೊತ್ತದ ಬದಲು ೫೦ಲಕ್ಷ ರೂ.ನೀಡಬೇಕು. ಅಲ್ಲದೆ ಅವರ ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡುವ ಪತ್ರವನ್ನು ಕೊಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಆಯವ್ಯಯದಲ್ಲಿ ಈ ಬಾರಿ ಜಿಲ್ಲೆಗೆ ಏನೂ ಕೊಟ್ಟಿಲ್ಲ. ಯಾವುದೇ ಕಾಮಗಾರಿ ಇಲ್ಲದೆ ಅಭಿವೃದ್ಧಿ ಶೂನ್ಯವಾಗಿದೆ ಎಂದು ಟೀಕಿಸಿದರು.
ಈಗಿನ ಎಸ್.ಪಿ.ಕಚೇರಿ ಆವರಣದಲ್ಲಿನ ಖಾಲಿ ಜಾಗದಲ್ಲಿ ನೂತನ ಜಿಲ್ಲಾಧಿಕಾರಿಗಳ ಕಚೇರಿ, ಜಿ.ಪಂ.ಸಿ.ಇ.ಒ.ಕಚೇರಿ ನಿರ್ಮಾಣಕ್ಕೆ ೨೦೦ಕೋಟಿ ರೂ.ಪ್ರಸ್ತಾವನೆ ಸರ್ಕಾರಕ್ಕೆ ಹೋಗಿದೆ ಎಂಬ ಮಾಹಿತಿ ಇದೆ. ತಕ್ಷಣ ಆ ಹಣವನ್ನು ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಲು ಸಿಎಂ ಆದೇಶಿಸಬೇಕು ಎಂದು ಆಗ್ರಹಿಸಿದರು.

ಬಾಲರಾಜ ರಸ್ತೆಯಲ್ಲಿ ೨೦೧೭ರಲ್ಲೇ ಆರಂಭವಾದ ಡಿ.ದೇವರಾಜ್ ಅರಸ್ ಭವನದ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ಸಾಗಿದೆ. ನಿರ್ಮಾಣ ಕಾರ್ಯ ಆರಂಭವಾಗಿ ೧೦ವರ್ಷಗಳೇ ಸಂದಾಯವಾಗುತ್ತಿದೆ. ಕೊರತೆ ಬಿದ್ದ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಿ ಭವನ ಲೋಕಾರ್ಪಣೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ಬೊಮ್ಮನಕಟ್ಟೆ ರೈಲ್ವೇ ಮೇಲ್ಸೇತುವೆ ಕಾಮಗಾರಿ ಇನ್ನೂ ಕಾರ್ಯರೂಪಕ್ಕೆ ಬರಲಿಲ್ಲ. ೨೪x೭ ನೀರು ಸರಬರಾಜು ಇನ್ನೂ ಜಾರಿಯಾಗಿಲ್ಲ. ರಸ್ತೆಗಳೆಲ್ಲಾ ಗುಂಡಿಮಯವಾಗಿವೆ. ದುರಸ್ತಿಗೂ ಹಣವಿಲ್ಲ. ಸಿಎಂ ಇವನ್ನೆಲ್ಲ ಗಮನಿಸಬೇಕು ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ ಗೋಪಾಲ್ ಮಾತನಾಡಿ, ಮಲೆನಾಡಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ರಕ್ಷಿಸಿಕೊಳ್ಳಲು ಸ್ಥಳೀಯರಿಗೆ ಬಂದೂಕು ತರಬೇತಿ ಕೂಡ ನೀಡಲಾಗಿತ್ತು. ಆದರೆ ಬಂದೂಕು ಪಡೆಯಲು ಲೈಸೆನ್ಸ್ ನೀಡುತ್ತಿಲ್ಲ. ಈ ಬಗ್ಗೆಯೂ ಕೂಡ ಗಮನಹರಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ದೀಪಕ್ ಸಿಂಗ್, ರಾಮಕೃಷ್ಣ, ಸಂಗಯ್ಯ, ಮಾಜಿ ಪಾಲಿಕೆ ಸದಸ್ಯ ರಘು ಬಾಲರಾಜ್ ಉಮಾಶಂಕರ್ ಉಪಾಧ್ಯ, ಕೃಷ್ಣಮೂರ್ತಿ, ನರಸಿಂಹ ಗಂಧದಮನೆ, ಮಾಧವಮೂರ್ತಿ, ರಮೇಶ್, ಮಂಜು, ಸಂಜಯ್ ಕಶ್ಯಪ್, ದಯಾನಂದ್, ವಿಜಯಕುಮಾರ್ ಮೊದಲಾದವರಿದ್ದರು.