ಶಿವಮೊಗ್ಗ: ನಗರದಲ್ಲಿರುವ ದೇಶದ್ರೋಹಿಗಳ ವಿರುದ್ಧ ಎಪ್.ಐ.ಆರ್.ದಾಖಲಿಸಿ ಅವರನ್ನು ನಾಳೆ ಬೆಳಿಗ್ಗೆ ೧೦ ಗಂಟೆಯೊಳಗೆ ಬಂಧಿಸಬೇಕು ಎಂಬ ಗಡುವನ್ನು ಪೋಲಿಸರಿಗೆ ಕೊಟ್ಟಿದ್ದಾಗಿ ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ಅವರು ಇಂದು ನಗರದ ಟ್ಯಾಂಕ್ ಮೊಹಲ್ಲಾದ ನಿವಾಸಿ ಇಬ್ಬು ಯಾನೆ ಇಬ್ರಾಹಿಮ್ ಖಾನ್ ಎಂಬಾತ ಪಾಕಿಸ್ತಾನ ಪರ ವಾಟ್ಸಾಪ್ ನಲ್ಲಿ ಅಭಿಪ್ರಾಯ ಹರಿಬಿಟ್ಟ ಹಿನ್ನೆಲೆಯಲ್ಲಿ ಬಿಜೆಪಿ ನಗರ ಘಟಕದ ನಿಯೋಗದೊಂದಿಗೆ ಕೋಟೆ ಪೋಲಿಸ್ ಠಾಣೆಗೆ ತೆರಳಿ ಸಿಪಿಐ ಜೊತೆ ಚರ್ಚಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ದೇಶದ ಸೈನಿಕರೇ ಮಾಹಿತಿ ತಿಳಿದ ತಕ್ಷಣ ದೇಶದ್ರೋಹಿಗಳನ್ನು ಹೆಡೆಮುರಿ ಕಟ್ಟಿ ಒಳಗೆ ಹಾಕುತ್ತಿದೆ. ಅಲ್ಲದೆ ದೇಶದ್ರೋಹಿಗಳಿಗೆ ಸಹಕರಿಸಿದ, ಅವರ ಮನೆಗಳನ್ನೂ ಧ್ವಂಸ ಮಾಡಿ ಶಿಕ್ಷಿಸುತ್ತಿದೆ. ಇಂಥದ್ದರಲ್ಲಿ ಶಿವಮೊಗ್ಗ ಪೋಲಿಸರು ದೇಶದ್ರೋಹಿಗಳನ್ನು ಸುಮ್ಮನೆ ಕರೆದು ವಿಚಾರಿಸಿ ವಾಪಸ್ಸು ಕಳುಹಿಸುತ್ತಿರುವುದನ್ನು ನಾವು ಉಗ್ರವಾಗಿ ಖಂಡಿಸುವುದಾಗಿ ತಿಳಿಸಿದರು.

ಈ ಹಿಂದೆ ಮಹಾತ್ಮಾ ಗಾಂಧಿ, ವೀರ ಸಾವರಕರ್, ಸ್ವಾಮಿ ವಿವೇಕಾನಂದ ಮೊದಲಾದ ಮಹನೀಯರು ಶಿವಮೊಗ್ಗಕ್ಕೆ ಬಂದು ಹೋಗಿದ್ದಾರೆ. ಇಂಥದ್ದರಲ್ಲಿ ನಗರದ ಕೋಟೆ ಪೋಲಿಸ್ ಠಾಣೆ, ತುಂಗಾ ಠಾಣೆ ಮತ್ತು ವಿದ್ಯಾನಗರ ಠಾಣೆಗಳಲ್ಲಿ ಪಾಕಿಸ್ತಾನ ಪರ ಅಭಿಪ್ರಾಯಗಳನ್ನು ಹಂಚಿಕೊಂಡವರ ವಿರುದ್ಧ ಪ್ರಕರಣಗಳು ದಾSಲಾಗಿವೆ. ಆದರೆ ಯಾರೊಬ್ಬರ ವಿರುದ್ಧವೂ ಸರಿಯಾದ ತನಿಖೆಯಾಗುತ್ತಿಲ್ಲ ಎಂದು ಆರೋಪಿಸಿದರು.
ದೇಶದ್ರೋಹಿ ಪಾಕಿಗಳಿಗೆ ಒಳ್ಳೆಯದನ್ನು ಮಾಡಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದಾನೆ. ದೇವರಲ್ಲಿ ಪ್ರಾರ್ಥಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ನಾವೂ ಪಾಕಿಗಳಿಗೆ ಒಳ್ಳೆಯದನ್ನು ಮಾಡಬೇಡ ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.
ಟ್ಯಾಂಕ್ ಮೊಹಲ್ಲಾದ ನಿವಾಸಿ ಇಬ್ಬುನ ಮನೆಗೆ ಹೋಗೋಣ. ಅಲ್ಲಿ ಏನೇನು ನಡೆಯುತ್ತಿದೆ ನೋಡೋಣ ಎಂದು ಸಿಪಿಐ ಅವರಿಗೆ ಕೇಳಿಕೊಂಡಾಗ, ಈಗ ಬೇಡ. ನಾವು ಆತನನ್ನು ಕರೆಸಿ ವಿಚಾರಿಸಿ ಕಳಿಸಿದ್ದೇವೆ. ಕಾನೂನಿನ ಪ್ರಕಾರ ತನಿಖೆ ನಡೆಯುತ್ತಿದೆ ಎಂದಾಗ ನಾವೇ ದೇಶದ್ರೋಹಿ ಮನೆಗೆ ಹೋಗ್ತೀವಿ ಅಂತ ಪಟ್ಟು ಹಿಡಿದ್ವಿ. ಸಿಪಿಐ ಅದಕ್ಕೆ ಬೇಡ. ಸಹಕರಿಸಿ ಎಂದು ವಿನಂತಿಸಿಕೊಂಡಿದ್ದಕ್ಕೆ ಇವತ್ತು ಆತನ ಮನೆಗೆ ಹೋಗುವುದನ್ನು ಕೈ ಬಿಟ್ಟಿದ್ದೇವೆ. ನಾಳೆ ಬೆಳಿಗ್ಗೆ ೧೦ ಗಂಟೆ ಒಳಗೆ ದೇಶದ್ರೋಹಿಗಳನ್ನು ಬಂಧಿಸದಿದ್ದರೆ ಪೋಲಿಸ್ ಠಾಣೆ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ಮೋಹನ ರೆಡ್ಡಿ, ಪ್ರಮುಖರಾದ ದತ್ತಾತ್ರಿ, ದೀನ ದಾಯಳ, ಸುರೇಖಾ ಮುರಳೀಧರ ಮೊದಲಾದವರಿದ್ದರು.