ಶಿವಮೊಗ್ಗ: ಅಮಾಯಕ ೨೬ ಪ್ರವಾಸಿಗರನ್ನು ಹತ್ಯೆ ಮಾಡಿದ ಉಗ್ರಗಾಮಿಗಳ ನೆಲೆಗಳನ್ನು ಧ್ವಂಸ ಮಾಡುವುದರ ಮೂಲಕ ಮೋದಿ ಸರ್ಕಾರ ಮತ್ತು ಭಾರತೀಯ ಸೇನೆ ಉಗ್ರಗಾಮಿಗಳಿಗೆ ಮತ್ತು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರ ಹೇಯಕೃತ್ಯ ನಡೆದ ತಕ್ಷಣ ಪ್ರಧಾನಿ ಮೋದಿ ಹಲವಾರು ಸಭೆಗಳನ್ನು ನಡೆಸಿ ಪಾಕಿಸ್ತಾನಕ್ಕೆ ರಾಜತಾಂತ್ರಿಕವಾಗಿ ಅನೇಕ ದಿಗ್ಬಂಧನ ಹಾಕಿತ್ತು. ಅಲ್ಲದೇ, ಸರಿಯಾದ ಉತ್ತರ ಕೊಡುತ್ತೇವೆ ಎಂದು ಹಲವು ವೇದಿಕೆಗಳಲ್ಲಿ

ಹೇಳಿದ್ದರು. ಈಗ ಆಪರೇಷನ್ ಸಿಂಧೂರದ ಮೂಲಕ ಉಗ್ರರ ತಾಣಗಳನ್ನು ಧ್ವಂಸ ಮಾಡಿ ಪ್ರತ್ಯುತ್ತರ ನೀಡಿದ್ದಾರೆ. ಅದಕ್ಕಾಗಿ ಮೋದಿ ಹಾಗೂ ಸೇನೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ವಿಶ್ವದಲ್ಲೇ ಭಯೋತ್ಪಾದನೆ ನಿರ್ಮೂಲನೆ ಭಾರತದಿಂದಲೇ ಇದೀಗ ಆರಂಭವಾಗಿದ್ದು, ಉಗ್ರರಿಗೆ ಸರಿಯಾದ ಪಾಠ ಕಲಿಸಿದ್ದಾರೆ. ನಾಗರಿಕ ಪ್ರಪಂಚದಲ್ಲಿ ಯಾವುದೇ ನಾಗರಿಕರ ಮೇಲೆ ದಾಳಿ ಸಲ್ಲದು, ಉಗ್ರರ ಅಡಗುತಾಣಗಳನ್ನು ಪತ್ತೆ ಹಚ್ಚಿ ಸಂಪೂರ್ಣ ನಿರ್ಮೂಲನೆಗೆ ಪ್ರಧಾನಿ ಮೋದಿ ಕೈ ಹಾಕಿದ್ದು, ಈ ಸಂದರ್ಭದಲ್ಲಿ ಯಾವುದೇ ರಾಜಕಾರಣ ಮಾಡದೇ ದೇಶದ ಜನತೆ ಬೆಂಬಲಿಸಬೇಕು ಎಂದರು.

ಸೈನಿಕರಿಗೆ ಯಾವುದೇ ಜಾತಿ, ಧರ್ಮವಿಲ್ಲ. ತಮ್ಮ ಸರ್ವಸ್ವವನ್ನೂ ತ್ಯಜಿಸಿ ರಾಷ್ಟ್ರ ರಕ್ಷಣೆಯಲ್ಲಿ ಮುಂದಾಗಿರುವ ಸೈನಿಕರ ಕೈ ಬಲಪಡಿಸುವುದು ನಮ್ಮೆಲ್ಲರ ಕರ್ತವ್ಯ. ಪಾಕಿಸ್ತಾನದ ಕಳ್ಳ ನಡೆಗೆ ತಕ್ಕ ಪಾಠ ಕಲಿಸಿದ್ದೇವೆ ಎಂದರು.