ಶಿವಮೊಗ್ಗ: ಹಿಂದೂ ರಾಷ್ಟ್ರದ ಹೆಸರಿನಲ್ಲಿ ಆರ್.ಎಸ್.ಎಸ್. ಸಂವಿಧಾನದ ಬದಲು ಮನುಧರ್ಮ ಸ್ಥಾಪಿಸುವ ಹುನ್ನಾರ ಮಾಡುತ್ತಿದೆ ಎಂದು ದಲಿತ ಸಂಘರ್ಷ ಸಮಿತಿಯ(ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮುವಾದ ದಿಕ್ಕರಿಸಿ ಸಂವಿಧಾನ ರಕ್ಷಿಸಿ ಎಂಬ ಧ್ಯೇಯವಾಕ್ಯದ ಹಿನ್ನೆಲೆಯಲ್ಲಿ ಮೇ 8ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ವಸಂತನಗರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜನಕ್ರಾಂತಿ ಸಮಾವೇಶ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಲಾಗುವುದು ಎಂದರು.

ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಆರ್.ಎಸ್.ಎಸ್. ಮುಖಂಡರು, ಕೆಲವು ಮಠಾಧೀಶರು, ಕೋಮುವಾದಿಗಳು ಸಂವಿಧಾನವನ್ನು ಬದಲಾವಣೆ ಮಾಡಲೇಬೇಕು ಎಂಬ ಹುನ್ನಾರ ಮಾಡುತ್ತಲೇ ಬಂದಿದ್ದಾರೆ. ಅಂಬೇಡ್ಕರ್ ಅವರನ್ನು ಕಡೆಗಾಣಿಸಲು ಸಾಧ್ಯವಿಲ್ಲ ಎಂದಾಗ ಅವರನ್ನೇ ಹೊತ್ತುಕೊಂಡು ಮೆರೆಯುತ್ತಿದ್ದಾರೆ. ಈಗ ಮತ್ತೆ ಸಂವಿಧಾನ ಬದಲಾವಣೆಯ ಮಾತುಗಳು ಕೇಳಿಬರುತ್ತಿವೆ. ಹಿಂದೂ ರಾಷ್ಟ್ರ ರಕ್ಷಣೆಯ ಹೆಸರಲ್ಲಿ ಮನುಧರ್ಮ ಮರು ಸ್ಥಾಪಿಸುವ ಹುನ್ನಾರ ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಿದೆ ಎಂದರು.

ಇತ್ತೀಚೆಗೆ ನಡೆದ ಕುಂಭಮೇಳದಲ್ಲಿ ಕೆಲವು ಮಠಾಧೀಶರು ಧಾರ್ಮಿಕ ಸಭೆ ನಡೆಸಿ 501 ಪುಟಗಳ ಸಂವಿಧಾನವನ್ನೇ ಸಿದ್ಧಪಡಿಸಿದೆ. ಇದೊಂದು ದೇಶದ್ರೋಹದ ಕೆಲಸವಾಗಿದೆ. ಈ ಹಿಂದೆ ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಕೂಡ ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ್ದರು.

ಅನಂತಕುಮಾರ್ ಹೆಗಡೆ ಕೂಡ ನಾವು ಸಂವಿಧಾನ ಬದಲಾಯಿಸುವುದಕ್ಕೇ ಬಂದಿರುವುದು ಎಂದಿದ್ದರು. ಸಾಮಾಜಿಕ ಪುಂಡಾಟಿಕೆಗಿಂತ ರಾಜಕೀಯ ಪುಂಡಾಟಿಕೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಜಿಲ್ಲೆಯಿಂದ ಸುಮಾರು 750ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ದಲಿತ ಮುಖಂಡ ಶಿವಬಸಪ್ಪ ಮಾತನಾಡಿ, ಸಮಾವೇಶದಲ್ಲಿ ನಾವು ಕೆಲವು ಹಕ್ಕತ್ತಾಯಗಳನ್ನು ಕೂಡ ಮಂಡಿಸುತ್ತೇವೆ. ಅದರಲ್ಲಿ ಮುಖ್ಯವಾಗಿ ದಲಿತರಿಗೆ ಮೀಸಲಿಟ್ಟ ಹಣವನ್ನು ಬೇರೆ ಯಾವುದೇ ಉದ್ದೇಶಕ್ಕೂ ಬಳಸಬಾರದು. ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ದಲಿತರಿಗೆ ಹಕ್ಕುಪತ್ರ ನೀಡಬೇಕು. ಎಲ್ಲಾ ಸಾಮಾಜಿಕ ಭದ್ರತಾ ಪಿಂಚಣಿ ಮೊತ್ತ ಹೆಚ್ಚಿಸಬೇಕು. ವಿಧವೆಯರಿಗೆ ಮತ್ತು ದೇವದಾಸಿಯರಿಗೆ ಜಮೀನು ಮಂಜೂರು ಮಾಡಬೇಕು. ಬಿ. ಕೃಷ್ಣಪ್ಪ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು, ವಸತಿ ವಿದ್ಯಾರ್ಥಿ ನಿಲಯಗಳ ಬೋಧನಾ ವೆಚ್ಚವನ್ನು ಹೆಚ್ಚು ಮಾಡಬೇಕೆಂಬುದು ಸೇರಿದಂತೆ ಸುಮಾರು 15ಕ್ಕೂ ಬೇಡಿಕೆಗಳನ್ನು ಈಡೇರಿಸುವಂತೆ ಸಮಾವೇಶದ ಮೂಲಕ ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಏಳುಕೋಟಿ, ರಮೇಶ್ ಚಿಕ್ಕಮರಡಿ, ಹನುಮಂತಪ್ಪ ಯಡವಾಲ, ನಾಗರಾಜ್, ಮನ್ಸೂರ್, ರಾಜಶೇಖರ್, ಹರಿಗೆ ರವಿ, ಪರಶುರಾಮ, ಶ್ರೀನಿವಾಸ, ಬೊಮ್ಮನಕಟ್ಟೆ ಕೃಷ್ಣ ಮುಂತಾದವರಿದ್ದರು.